ತಾಯಿ ಬುದ್ಧಿವಾದ ಹೇಳಿದ್ದಕ್ಕೆ ಮನನೊಂದು ಯುವಕ ಆತ್ಮಹತ್ಯೆ!

ಚಿಕ್ಕಬಳ್ಳಾಪುರ: ರಾತ್ರಿ ಮನೆಗೆ ತಡವಾಗಿ ಬರುತ್ತಿದ್ದ ಮಗನಿಗೆ ತಾಯಿ ಬುದ್ಧಿವಾದ ಹೇಳಿದ್ದಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇವನಹಳ್ಳಿಯ (Devanahalli) ವಿಜಯಪುರ ಪಟ್ಟಣದಲ್ಲಿ ನಡೆದಿದೆ.
ಮೃತ ಯುವಕನನ್ನು ಉಜ್ವಲ್ (18) ಎಂದು ಗುರುತಿಸಲಾಗಿದೆ. ದ್ವಿತೀಯ ಪಿಯುಸಿಯಲ್ಲಿ ಅನುತ್ತೀರ್ಣನಾಗಿದ್ದ. ಯುವಕ ಮನೆಯಲ್ಲಿ ಮೌನವಾಗಿರುತ್ತಿದ್ದ. ಹೆಚ್ಚಾಗಿ ಮೊಬೈಲ್ನಲ್ಲೇ ಕಾಲ ಕಳೆಯುತ್ತಿದ್ದ. ಈ ವಿಚಾರವಾಗಿ ಅವನ ತಾಯಿ ಹಲವಾರು ಬಾರಿ ಬುದ್ಧಿವಾದ ಹೇಳಿದ್ದರು. ಅಲ್ಲದೇ ಬುಧವಾರ ರಾತ್ರಿ ತಡವಾಗಿ ಮನೆಗೆ ಬಂದಿದ್ದಾನೆ. ಇದಕ್ಕಾಗಿ ಯುವಕನ ತಾಯಿ ಎಲ್ಲಿಗೆ ಹೋಗಿದ್ದೆ ಎಂದು ಪ್ರಶ್ನಿಸಿ ಬುದ್ಧಿವಾದ ಹೇಳಿದ್ದರು. ಬಳಿಕ ರಾತ್ರಿ ಊಟ ಮಾಡಿ, ತನ್ನ ಕೋಣೆಯ ಒಳಗೆ ಹೋಗಿದ್ದ.
ಬೆಳಗ್ಗೆ 7 ಗಂಟೆಯಾದರೂ ಬಾಗಿಲು ತೆರೆಯದಿದ್ದಾಗ ಯುವಕನ ಸಹೋದರ ಬಾಗಿಲು ಬಡಿದಿದ್ದಾನೆ. ಬಳಿಕ ಬೀಗ ಹಾಕುವ ರಂಧ್ರದಲ್ಲಿ ಇಣುಕಿ ನೋಡಿದಾಗ ನೇಣು ಬಿಗಿದು ಕೊಂಡಿರುವುದು ಕಂಡು ಬಂದಿದೆ. ತಕ್ಷಣ ತನ್ನ ಮಾವಂದಿರಿಗೆ ಮಾಹಿತಿ ನೀಡಿ, ಅಕ್ಕಪಕ್ಕದವರನ್ನು ಕರೆದು ಬಾಗಿಲು ತೆರೆಯಲು ಪ್ರಯತ್ನ ಮಾಡಿದ್ದಾರೆ. ಒಳಗಿನಿಂದ ಲಾಕ್ ಮಾಡಿದ್ದ ಕಾರಣ ತೆರೆಯಲು ಸಾಧ್ಯವಾಗಿಲ್ಲ. ಬಳಿಕ ಬಾಗಿಲನ್ನು ಒಡೆದಿದ್ದಾರೆ. ಈ ವೇಳೆ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಸ್ಥಳಕ್ಕೆ ಪೊಲೀಸರು (Police) ಭೇಟಿ ನೀಡಿ ಪರಿಶೀಲಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಸಂಬಂಧ ವಿಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟ್ಯೂಶನ್ ಮುಗಿಸಿ ಹೋಗ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ ಡಿಕ್ಕಿ – ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವು
ರಾಮನಗರ: ಟ್ಯೂಶನ್ (Tuition) ಮುಗಿಸಿ ಮನೆಗೆ ಹೋಗುತ್ತಿದ್ದ ಮಕ್ಕಳಿಗೆ ಗೂಡ್ಸ್ ವಾಹನ (Goods Vehicle) ಡಿಕ್ಕಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಮತ್ತೊಂದು ಬಾಲಕ ಸಾವನ್ನಪ್ಪಿದ ಘಟನೆ ರಾಮನಗರದಲ್ಲಿ (Ramanagara) ನಡೆದಿದೆ.
ಸುಚಿತ್ (10) ಮೃತ ದುರ್ದೈವಿ. ರಾಮನಗರ ತಾಲೂಕಿನ ಗೊಲ್ಲರದೊಡ್ಡಿ ಗ್ರಾಮದಲ್ಲಿ ಅಪಘಾತ ನಡೆದಿದ್ದು, ಸಾವಿನ ಸಂಖ್ಯೆ ಒಟ್ಟು ಮೂರಕ್ಕೆ ಏರಿದೆ. ಆಗಸ್ಟ್ 9ರಂದು ಟ್ಯೂಶನ್ ಮುಗಿಸಿಕೊಂಡು ಐವರು ಮಕ್ಕಳು ಮನೆಗೆ ಹೋಗುತ್ತಿದ್ದ ಸಂದರ್ಭ ಗೂಡ್ಸ್ ವಾಹನ ಡಿಕ್ಕಿಯಾಗಿದ್ದು, ಇಬ್ಬರು ಸಾವನ್ನಪ್ಪಿದ್ದರು.
ಘಟನೆಯಿಂದ ಬದುಕುಳಿದ ಮೂವರು ಮಕ್ಕಳಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ಪೈಕಿ ಸುಚಿತ್ ಗುರುವಾರ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇನ್ನಿಬ್ಬರು ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.