ಶಕ್ತಿ ಯೋಜನೆ ನಿಲ್ಲಿಸೋದಿಲ್ಲ ; ವದಂತಿಗಳಿಗೆ ಸ್ಪಷ್ಟನೆ ಕೊಟ್ಟ ಸಚಿವ ರಾಮಲಿಂಗಾ ರೆಡ್ಡಿ
ಬೆಂಗಳೂರು: ರಾಜ್ಯ ಸರ್ಕಾರ ಮಹತ್ವಕಾಂಕ್ಷಿ ಶಕ್ತಿ ಯೋಜನೆಯೂ ಆಗಸ್ಟ್ 15ರಿಂದ ನಿಂತು ಹೋಗಲಿದೆ. ಆ ಬಳಿಕ ಮಹಿಳೆಯರು ದುಡ್ಡುಕೊಟ್ಟು ಪ್ರಯಾಣ ಮಾಡಬೇಕು ಎಂಬ ನಕಲಿ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಈ ಬಗ್ಗೆ ಸ್ಪಷ್ಟಪಡಿಸಿರುವ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರು, ಶಕ್ತಿ ಯೋಜನೆ ನಿಲ್ಲಿಸುವುದು ಬಗ್ಗೆ ಊಹಾಪೋಹ ಹರಿದಾಡುತ್ತಿದೆ, ಯೋಜನೆಯನ್ನು ನಿಲ್ಲಿಸೋದಿಲ್ಲ ಎಂದು ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ರಾಮಲಿಂಗಾ ರೆಡ್ಡಿ ಅವರು, ಶಕ್ತಿ ಯೋಜನೆ ನಿಂತು ಹೋಗುತ್ತದೆ ಅಂತ ಊಹಾಪೋಹಗಳ ಕೇಳಿ ಬರ್ತಿದೆ. ಇದನ್ನ ಒಂದು ಪಕ್ಷದವರು ಮಾಡಿಸ್ತಿದ್ದಾರೆ. ಇನ್ನು 10 ವರ್ಷ ಶಕ್ತಿ ಯೋಜನೆ ಮುಂದುವರಿಯುತ್ತದೆ. ಯಾರು ಕೂಡ ಪಾಸ್ ತೆಗೆದುಕೊಳ್ಳಲು ಹೋಗಬೇಡಿ. ಯಾರೂ ಕೂಡ ಪಾಸ್ ಪಡೆಯುವ ಅಗತ್ಯ ಇಲ್ಲ ಎಂದು ಸ್ಪಷ್ಟಪಡಿಸಿದರು.
ಇತ್ತ ಹಾಸನದಲ್ಲಿ ಮಾತನಾಡಿದ ಕೃಷಿ ಸಚಿವ ಚಲುವರಾಯಸ್ವಾಮಿ ಅವರು, ರಾಜ್ಯದಲ್ಲಿ ಮಹಿಳೆಯತ ಉಚಿತ ಬಸ್ ಪ್ರಯಾಣದ ಶಕ್ತಿ ಯೋಜನೆ ಸ್ಥಗಿತ ಎಂಬ ವದಂತಿ ಹರಿದಾಡುತ್ತಿದೆ. ಆದರೆ ಯಾವುದೇ ಕಾರಣದಿಂದ ಈ ಯೋಜನೆ ಸ್ಥಗಿತ ಆಗೋದಿಲ್ಲ. ಯಾರು ಈ ರೀತಿಯಲ್ಲಿ ಹಬ್ಬಿಸುತ್ತಿದ್ದಾರೆ ಗೊತ್ತಿಲ್ಲ. ವಿರೋಧ ಪಕ್ಷದವರೋ ಯಾರೋ ಹೀಗೆ ಹಬ್ಬಿಸಿದರೋ ಗೊತ್ತಿಲ್ಲ ಆದರೆ ಈ ಯೋಜನೆ ನಿಲ್ಲಿಸೋದಿಲ್ಲ ಎಂದು ತಿಳಿಸಿದ್ದಾರೆ.
ಸರ್ಕಾರಿ ಬಸ್ನಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಕ್ಕೆ ಅವಕಾಶ ನೀಡಿರುವ ಶಕ್ತಿ ಯೋಜನೆ ಆಗಸ್ಟ್ 15ರಿಂದ ರದ್ದಾಗಲಿದೆ ಎಂಬ ಗಾಳಿ ಸುದ್ದಿ ಹಬ್ಬುತ್ತಿದೆ. ಆದ್ದರಿಂದ ಸಚಿವರು ಜನರಿಗೆ ಸ್ಪಷ್ಟನೆ ನೀಡಿ ಹೇಳಿಕೆ ನೀಡಿದ್ದಾರೆ.
ಗಾಳಿ ಸುದ್ದಿಯನ್ನೇ ನಂಬಿದ್ದ ಹಲವು ಮಹಿಳೆಯರು ಶಕ್ತಿ ಯೋಜನೆ ರದ್ದಾಗುತ್ತಾ ಅಂತ ಹಲವರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರು.
ಇನ್ನು, ಕರ್ನಾಟಕ ಮಹಿಳೆಯರು ಶಕ್ತಿ ಯೋಜನೆಯ ಅಡಿ ರಾಜ್ಯದ ಯಾವುದೇ ಭಾಗದಲ್ಲಿ ಸರ್ಕಾರಿ ಬಸ್ಗಳಲ್ಲಿ ಉಚಿತವಾಗಿ ಪ್ರಯಾಣ ಮಾಡಬಹುದು.
ಮಹಿಳೆಯರು ಪ್ರಯಾಣ ಮಾಡುವ ಸಂದರ್ಭದಲ್ಲಿ ಆಧಾರ್ ಕಾರ್ಡ್ ಅಥವಾ ಗುರುತಿನ ಚೀಟಿಯನ್ನು ಕಂಡಕ್ಟರ್ ಅವರಿಗೆ ತೋರಿಸಿದರೆ ಸಾಕಾಗುತ್ತದೆ. ಮುಂದಿನ ದಿನಗಳಲ್ಲಿ ಯೋಜನೆಯ ಫಲಾನುಭವಿಗಳಿಗೆ ಸರ್ಕಾರ ಸ್ಮಾರ್ಟ್ ಕಾರ್ಡ್ಅನ್ನು ವಿತರಣೆ ಮಾಡುವ ಬಗ್ಗೆ ಯೋಜನೆಯನ್ನು ರೂಪಿಸಿದೆ. ಆದರೆ ಇನ್ನು ಹಲವು ತಿಂಗಳು ಮಹಿಳೆಯರು ಯಾವುದೇ ಸ್ಮಾರ್ಟ್ ಕಾರ್ಡ್ ಇಲ್ಲದೇ, ಗುರುತಿನ ಚೀಟಿ ತೋರಿಸಿ ಉಚಿತವಾಗಿ ಪ್ರಯಾಣ ಮಾಡಬಹುದು.