ಸೌಜನ್ಯಾ ಪೋಷಕರಿಗೆ ಹಲ್ಲೆ ಪ್ರಕರಣ; ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲು!
ಬೆಳ್ತಂಗಡಿ, ಆ 05 : ಉಜಿರೆಯಲ್ಲಿ ನಡೆದ ಧರ್ಮಸ್ಥಳ ಕ್ಷೇತ್ರದ ಭಕ್ತರ ಪ್ರತಿಭಟನೆಯಲ್ಲಿ ಸೌಜನ್ಯಾ ಪೋಷಕರಿಗೆ ಹಲ್ಲೆಗೆ ಯತ್ನಿಸಿದ ಬಗ್ಗೆ ದೂರು ದಾಖಲಾಗಿದೆ.
ಅಪರಿಚಿತ ವ್ಯಕ್ತಿ ಹಾಗೂ ಇತರರು ತನ್ನ ಮೈಗೆ ಕೈ ಹಾಕಿ ಮಾನಹಾನಿಗೆ ಯತ್ನಿಸಿದ್ದು ಹಾಗೂ ತನ್ನ ಮಗನಿಗೆ ಹಲ್ಲೆ ನಡೆಸಿದ ಬಗ್ಗೆ ಸೌಜನ್ಯ ತಾಯಿ ಕುಸುಮಾವತಿ (48) ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ತನ್ನ ಮಗಳು ಸೌಜನ್ಯಾ 11 ವರ್ಷಗಳ ಹಿಂದೆ ಅತ್ಯಾಚಾರಕ್ಕೊಳಗಾಗಿ ಹತ್ಯೆಯಾಗಿದ್ದು, ಕೃತ್ಯದ ನೈಜ ಆರೋಪಿಗಳನ್ನು ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸುವಂತೆ ನಾನು 11 ವರ್ಷದಿಂದ ಹೋರಾಟ ನಡೆಸುತ್ತಿದ್ದೇನೆ., ಅದೇ ಉದ್ದೇಶದಿಂದ ಆ. 4ರಂದು ಉಜಿರೆಯಲ್ಲಿ ಸಭೆಯೊಂದನ್ನು ಆಯೋಜಿಸಿರುವುದನ್ನು ತಿಳಿದು ನ್ಯಾಯಕ್ಕಾಗಿ ಕುಟುಂಬದೊಂದಿಗೆ ತೆರಳಿದ್ದೆ. ಈ ಸಂದರ್ಭ ಅಪರಿಚಿತ ವ್ಯಕ್ತಿಗಳು, ಇತರರೊಂದಿಗೆ ಸೇರಿಕೊಂಡು ತನ್ನನ್ನು ತಡೆದು ಮಾನಹಾನಿಗೆ ಯತ್ನಿಸಿದ್ದಲ್ಲದೆ, ತನ್ನ ಮಗನ ಕೊರಳಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳೂರು: ಮಾದಕ ವಸ್ತು ಮಾರಾಟ ಯತ್ನ – ಓರ್ವನ ಬಂಧನ, 2 ಕೆ.ಜಿ ಗಾಂಜಾ ವಶ
ಮಂಗಳೂರು,ಆ 05 : ನಗರದ ಕಂಕನಾಡಿ-ಪಂಪ್‌ವೆಲ್ ಪ್ರದೇಶದಲ್ಲಿ ವ್ಯಕ್ತಿಯೊಬ್ಬ ತನ್ನ ದ್ವಿಚಕ್ರ ವಾಹನದಲ್ಲಿ ಸಾರ್ವಜನಿಕರಿಗೆ ಗಾಂಜಾ ಮಾರಾಟ ಮಾಡುತ್ತಿದ್ದಾನೆ ಎಂಬ ಖಚಿತ ಸುಳಿವು ಪಡೆದ ನಗರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೋಡಿಕಲ್ ಮುಸ್ತಫಾ ಕಂಪೌಂಡ್ ನಿವಾಸಿ ಮೊಹಮ್ಮದ್ ಅಝೀಝ್ ಯಾನೆ ಅಜೀಜ್ (40) ಬಂಧಿತ ಆರೋಪಿ.
ಮಾರುಕಟ್ಟೆಯಲ್ಲಿ 50 ಸಾವಿರ ಮೌಲ್ಯದ ಎರಡು ಕಿಲೋ ಗಾಂಜಾ, ದ್ವಿಚಕ್ರ ವಾಹನ ಹಾಗೂ ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದು ಒಟ್ಟು 1.05 ಲಕ್ಷ ರೂ.ಸೊತ್ತು ಜಪ್ತಿ ಮಾಡಲಾಗಿದೆ.ಮೊಹಮ್ಮದ್ ವಿರುದ್ಧ 2022 ರಲ್ಲಿ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಇದೇ ಅಪರಾಧಕ್ಕೆ ಪ್ರಕರಣ ದಾಖಲಾಗಿತ್ತು.
ಕಾರ್ಯಾಚರಣೆಯಲ್ಲಿ ಸಿಸಿಬಿಯ ಶ್ಯಾಮ್ ಸುಂದರ್, ರಾಜೇಂದ್ರ, ಸುದೀಪ್, ಶರಣಪ್ಪ, ನರೇಂದ್ರ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.