ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಇಂದು ಕೊನೆಯ ದಿನ ; 6 ಕೋಟಿ ಗಡಿ ದಾಟಿದ ಫೈಲ್ಸ್!
ಹೊಸದಿಲ್ಲಿ: ಯಾವುದೇ ದಂಡವನ್ನು ಪಾವತಿಸದೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ 24 ಗಂಟೆಗಳು ಬಾಕಿಯಿವೆ. ಭಾನುವಾರ ಮಧ್ಯಾಹ್ನದ ವೇಳೆಗೇ ದಾಖಲೆ ಸಂಖ್ಯೆಯ ರಿಟರ್ನ್ಸ್ ಸಲ್ಲಿಕೆಯಾಗಿದ್ದು, ಕಳೆದ ವರ್ಷ ಫೈಲಿಂಗ್ಗಳ ಮಟ್ಟವನ್ನು ದಾಟಲಾಗಿದೆ. ಸಂಜೆಯ ವೇಳೆಗೆ ಐಟಿಆರ್ ಫೈಲಿಂಗ್ಗಳ ಸಂಖ್ಯೆ ಆರು ಕೋಟಿಯ ಗಡಿಯನ್ನು ದಾಟಿತ್ತು.
ಭಾನುವಾರ ಸಂಜೆ 6.30ರವರೆಗೆ ಒಂದೇ ದಿನ ಸುಮಾರು 26.8 ಲಕ್ಷ ರಿಟರ್ನ್ಸ್ಗಳನ್ನು ಸಲ್ಲಿಸಲಾಗಿದೆ ಎಂದು ಸಿಬಿಡಿಟಿ ಹೇಳಿದೆ. ಈ ಮೂಲಕ ಪ್ರಕ್ರಿಯೆಯು ಯಾವುದೇ ತೊಂದರೆ ಇಲ್ಲದೆ ಸಾಗಿದೆ ಎಂಬುದನ್ನು ಇದು ಸೂಚಿಸುತ್ತದೆ ಎಂದು ತಿಳಿಸಿದೆ. ಜುಲೈ 31 ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಕೊನೆಯ ದಿನವಾಗಿದ್ದು, ಇದನ್ನು ತಪ್ಪಿಸಿಕೊಂಡವರು ಡಿಸೆಂಬರ್ 31 ರವರೆಗೆ ಫೈಲ್ ಮಾಡಬಹುದು. ಆದರೆ ಇವರು 5,000 ರೂ.ವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ.
ಈ ವರ್ಷ ಇಲ್ಲಿಯವರೆಗೆ ಸಲ್ಲಿಕೆಯಾಗಿರುವ ಆದಾಯ ತೆರಿಗೆ ರಿಟರ್ನ್ಸ್ ಸಂಖ್ಯೆಯಿಂದ ಸರಕಾರ ಖುಷಿಯಾಗಿದೆ. ಗಡುವು ಸಮೀಪಿಸುತ್ತಿದ್ದಂತೆ ಆದಾಯ ತೆರಿಗೆ ಸಲ್ಲಿಕೆ ಮಾಡುವವರ ಗುಂಪೇ ಸೈಟ್ಗೆ ಲಗ್ಗೆ ಇಡಲಿದೆ. ಹೀಗಾಗಿ ಆದಾಯ ತೆರಿಗೆ ಇಲಾಖೆಯು ದಟ್ಟಣೆಯ ಹೆಚ್ಚಳವನ್ನು ನಿಭಾಯಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಿದೆ. ತೆರಿಗೆದಾರರ ಎಲ್ಲಾ ರೀತಿಯ ಗೊಂದಲಗಳನ್ನು ಪರಿಹರಿಸಲು ಪ್ರಯತ್ನಿಸುತ್ತಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ಐಟಿಆರ್ ಫೈಲಿಂಗ್, ತೆರಿಗೆ ಪಾವತಿ ಮತ್ತು ಇತರ ಸಂಬಂಧಿತ ಸೇವೆಗಳಲ್ಲಿ ತೆರಿಗೆದಾರರಿಗೆ ಸಹಾಯ ಮಾಡಲು ನಮ್ಮ ಹೆಲ್ಪ್ಡೆಸ್ಕ್ 24×7 ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿದೆ. ಮತ್ತು ನಾವು ಕರೆಗಳು, ಲೈವ್ ಚಾಟ್ಗಳು, ವೆಬ್ಎಕ್ಸ್ ಸೆಷನ್ಗಳು ಮತ್ತು ಸಾಮಾಜಿಕ ಮಾಧ್ಯಮಗಳ ಮೂಲಕ ಬೆಂಬಲವನ್ನು ನೀಡುತ್ತಿದ್ದೇವೆ. ಈ ಮೈಲಿಗಲ್ಲನ್ನು ತಲುಪಲು ನಮಗೆ ಸಹಾಯ ಮಾಡಿದ್ದಕ್ಕಾಗಿ ನಾವು ತೆರಿಗೆದಾರರು ಮತ್ತು ತೆರಿಗೆ ವೃತ್ತಿಪರರಿಗೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ಮತ್ತು 2023-24ನೇ (ಎಫ್ವೈ 2022-23) ಮೌಲ್ಯಮಾಪನ ವರ್ಷಕ್ಕೆ ಐಟಿಆರ್ ಅನ್ನು ಸಲ್ಲಿಸದ ಎಲ್ಲರಿಗೂ ಕೊನೆಯ ನಿಮಿಷದ ದಟ್ಟಣೆಯನ್ನು ತಪ್ಪಿಸಲು ತಮ್ಮ ಐಟಿಆರ್ ಅನ್ನು ಆದಷ್ಟು ಬೇಗ ಸಲ್ಲಿಸುವಂತೆ ಒತ್ತಾಯಿಸುತ್ತಿದ್ದೇವೆ,” ಎಂದು ಸಿಬಿಡಿಟಿಯು ಟ್ವೀಟ್ ಮಾಡಿದೆ. ಭಾನುವಾರ ಸಂಜೆ 6.30ರವರೆಗೆ ಆದಾಯ ತೆರಿಗೆ ವೆಬ್ಸೈಟ್ನಲ್ಲಿ ಲಾಗಿನ್ಗಳ ಸಂಖ್ಯೆ 1.3 ಕೋಟಿ ಎಂದು ಅಂದಾಜಿಸಲಾಗಿದೆ.
ದಿನದ ಆರಂಭದಲ್ಲಿ ಸಿಬಿಡಿಟಿ ಬಿಡುಗಡೆ ಮಾಡಿದ ದತ್ತಾಂಶವು ಮಧ್ಯಾಹ್ನ 1 ಗಂಟೆಯವರೆಗೆ 5.8 ಕೋಟಿ ಫೈಲಿಂಗ್ ಆಗಿದೆ ಎಂಬುದನ್ನು ತೋರಿಸುತ್ತಿತ್ತು. ಹೆಚ್ಚಿನ ಪ್ರಮಾಣದ ತೆರಿಗೆದಾರರು ಎಲೆಕ್ಟ್ರಾನಿಕ್ ಮಾದರಿಯಲ್ಲೇ ತಮ್ಮ ರಿಟರ್ನ್ಸ್ ಅನ್ನು ಪರಿಶೀಲಿಸಿದ್ದಾರೆ. ಇದರಿಂದ ಇಲಾಖೆಗೆ ಏಕಕಾಲದಲ್ಲಿ ರಿಟರ್ನ್ಸ್ ಪ್ರಕ್ರಿಯೆಗೊಳಿಸಲು ಮತ್ತು ಮರುಪಾವತಿಗಳನ್ನು ಮಾಡಲು ಸಹಾಯವಾಗೊದೆ.
ಜುಲೈ 27ರವರೆಗಿನ ಲೆಕ್ಕಾಚಾರದ ಪ್ರಕಾರ ಸಲ್ಲಿಕೆಯಾಗಿದ್ದ ಐದು ಕೋಟಿಗೂ ಹೆಚ್ಚು ರಿಟರ್ನ್ಸ್ಗಳಲ್ಲಿ ಸುಮಾರು 4.5 ಕೋಟಿ ರಿಟರ್ನ್ಸ್ಗಳನ್ನು ಇ-ವೆರಿಫೈ ಮಾಡಲಾಗಿತ್ತು. ಹಾಗೂ ಇದರಲ್ಲಿ 2.7 ಕೋಟಿ ರಿಟರ್ನ್ಸ್ನ್ನು ಪ್ರಕ್ರಿಯೆಗೊಳಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆಯ ದತ್ತಾಂಶಗಳು ಹೇಳಿವೆ.
ಕಳೆದ ಕೆಲವು ವರ್ಷಗಳಿಂದ ಎಲೆಕ್ಟ್ರಾನಿಕ್ ಫೈಲಿಂಗ್ ಮತ್ತು ಪ್ರಕ್ರಿಯೆಯು ರೂಢಿಯಾಗಿರುವುದರಿಂದ, ಇಡೀ ಪ್ರಕ್ರಿಯೆಯು ಸುಲಲಿತವಾಗಿದೆ. ಇದರಿಂದ ತೆರಿಗೆದಾರರು ತಿಂಗಳುಗಟ್ಟಲೆ ಕಾಯುವ ಬದಲು ಕೆಲವೇ ದಿನಗಳಲ್ಲಿ ಮರುಪಾವತಿಯನ್ನು ಪಡೆಯುತ್ತಿದ್ದಾರೆ ಎಂದು ಸಿಬಿಡಿಟಿ ವಿವರಿಸಿದೆ.
ವಾಟ್ಸಪ್ ಸ್ಟೇಟಸ್ ಜವಾಬ್ದಾರಿಯುತವಾಗಿ ಹಾಕಿ – ಬಾಂಬೆ ಹೈಕೋರ್ಟ್
ಮುಂಬೈ: ವಾಟ್ಸಪ್ ಸ್ಟೇಟಸ್ (WhatsApp) ಮೂಲಕ ಇತರರಿಗೆ ಏನನ್ನಾದರೂ ತಿಳಿಸುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ಬಾಂಬೆ ಹೈಕೋರ್ಟ್ನ (Bombay High Court) ನಾಗ್ಪುರ ಪೀಠ ಹೇಳಿದೆ.
ಧಾರ್ಮಿಕ ಗುಂಪಿನ ವಿರುದ್ಧ ದ್ವೇಷವನ್ನು ಹರಡಿದ ಪ್ರಕರಣದ ವಿಚಾರಣೆ ವೇಳೆ ಕೋರ್ಟ್ ಈ ಹೇಳಿಕೆ ನೀಡಿದೆ. ಅಲ್ಲದೇ ಪೋಸ್ಟ್ ಮಾಡಿದ ವ್ಯಕ್ತಿಯ ವಿರುದ್ಧದ ಪ್ರಕರಣವನ್ನು ರದ್ದುಗೊಳಿಸಲು ಕೋರ್ಟ್ ನಿರಾಕರಿಸಿದೆ.
ಧಾರ್ಮಿಕ ಭಾವನೆ ಹಾಗೂ ನಂಬಿಕೆಯನ್ನು ಉದ್ದೇಶಪೂರ್ವಕವಾಗಿ ಘಾಸಿಗೊಳಿಸಿದ ಬಗ್ಗೆ ದಾಖಲಾಗಿರುವ ಎಫ್ಐಆರ್ನ್ನು ರದ್ದುಗೊಳಿಸುವಂತೆ 27 ವರ್ಷದ ಕಿಶೋರ್ ಲ್ಯಾಂಡ್ಕರ್ ಎಂಬ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಪೀಠವು ವಜಾಗೊಳಿಸಿದೆ. ನೀವು ಏನು ಮಾಡುತ್ತಿದ್ದೀರಿ, ಆಲೋಚಿಸುತ್ತೀರಿ ಅಥವಾ ನೀವು ನೋಡಿದ ಯಾವುದೋ ಚಿತ್ರ, ವೀಡಿಯೊ ಆಗಿರಬಹುದು, ಅದು 24 ಗಂಟೆಗಳ ನಂತರ ಕಣ್ಮರೆಯಾಗುತ್ತದೆ. ಇದು ವ್ಯಕ್ತಿಯ ಸಂಪರ್ಕದಲ್ಲಿರುವವರಿಗೆ ಏನನ್ನಾದರೂ ತಿಳಿಸುವ ಉದ್ದೇಶವಾಗಿದೆ. ಇದು ತಿಳಿದಿರುವ ವ್ಯಕ್ತಿಗಳೊಂದಿಗೆ ಸಂವಹನದ ವಿಧಾನವಲ್ಲದೆ ಬೇರೇನೂ ಅಲ್ಲ. ಇತರರೊಂದಿಗೆ ಸಂವಹನ ಮಾಡುವಾಗ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂದು ನ್ಯಾಯಾಲಯ ಹೇಳಿದೆ.
ಆರೋಪಿ ಧಾರ್ಮಿಕ ಭಾವನೆ ಕೆರಳಿಸುವ ವಿಚಾರವನ್ನು ಸ್ಟೇಟಸ್ಗೆ ಹಾಕಿದ್ದು, ಈ ಬಗ್ಗೆ ಇಂಟರ್ನೆಟ್ ಹುಡುಕುವಂತೆ ಸೂಚಿಸಿದ್ದಾನೆ. ಇದನ್ನು ಹುಡುಕಾಟ ಮಾಡಿದವರ ಧಾರ್ಮಿಕ ಭಾವನೆಗೆ ತೊಂದರೆಯಾಗುವಂತಹ ವಿಷಯಗಳು ಸಿಕ್ಕಿತ್ತು. ಆದರೆ ಆರೋಪಿ ತನ್ನ ಉದ್ದೇಶ ಬೇರೆಯವರಿಗೆ ನೋವು ಕೊಡುವುದಾಗಿರಲಿಲ್ಲ ಎಂದು ವಾದಿಸಿದ್ದಾನೆ.