ಬಿಕಾಂ ವಿದ್ಯಾರ್ಥಿ ಮಾರ್ವೇಶ್ ಹತ್ಯೆ ಪ್ರಕರಣ: 6 ಮಂದಿ ಬಂಧನ
ಬೆಂಗಳೂರು: ಖಾಸಗಿ ಕಾಲೇಜಿನ ಬಿಕಾಂ ವಿದ್ಯಾರ್ಥಿ ಮಾರ್ವೇಶ್ (19) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಸೇರಿ 6 ಮಂದಿ ಆರೋಪಿಗಳನ್ನು ಹೆಣ್ಣೂರು ಠಾಣೆ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ.
ಹೆಣ್ಣೂರಿನ ಶ್ರೀಕಾಂತ್, ಕಾರ್ತಿಕ್, ನೆಲ್ಸನ್, ಯೋಹಾನ್, ಅಭಿಷೇಕ್ ಹಾಗೂ ಡ್ಯಾನಿಯರ್ ಆ್ಯಂಟನಿ ಬಂಧಿತ ಆರೋಪಿಗಳಾಗಿದ್ದಾರೆ.
ಕೊಲೆಯಾದ ಮಾರ್ವೇಶ್ ಹೆಣ್ಣೂರಿನ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ. ಈತನ ಸ್ನೇಹಿತ ಲೋಹಿತ್ ಎಂಬಾತ ಆರೋಪಿ ಶ್ರೀಕಾಂತ್ ಪ್ರೇಯಸಿಗೆ ಇನ್‌ಸ್ಟಾಗ್ರಾಮ್‌ನಲ್ಲಿ ಅಶ್ಲೀಲ ಪದ ಬಳಸಿ ಪ್ರತಿಕ್ರಿಯಿಸಿದ್ದ. ಇದನ್ನು ಕಂಡು ಕೆರಳಿದ್ದ ಶ್ರೀಕಾಂತ್, ಈ ವಿಚಾರವನ್ನು ಸ್ನೇಹಿತರಾದ ರೌಡಿ ಕಾರ್ತಿಕ್ ಹಾಗೂ ಇತರೆ ಆರೋಪಿಗಳಿಗೆ ತಿಳಿಸಿ, ಲೋಹಿತ್‌ಗೆ ಪಾಠ ಕಲಿಸುವಂತೆ ಸೂಚಿಸಿದ್ದ. ಅದರಂತೆ ಆರೋಪಿಗಳು ಕಾಲೇಜಿನ ಬಳಿ ತೆರಳಿ ಲೋಹಿತ್‌ಗಾಗಿ ಹುಡುಕಾಡಿದ್ದರು. ಲೋಹಿತ್ ಸಿಗದಿದ್ದರಿಂದ ಮಾರ್ವೇಶ್‌ನನ್ನು ಡಿ.ಜೆ.ಹಳ್ಳಿಯ ಕೊಠಡಿಯೊಂದರಲ್ಲಿ ಕೂಡಿ ಹಾಕಿ ಪೈಪುಗಳಿಂದ ಹಲ್ಲೆ ಮಾಡಿದ್ದರು.
ಸ್ನೇಹಿತನ ತಪ್ಪಿಗೆ ಮಾರ್ವೇಶ್‌ಗೆ ಶಿಕ್ಷೆ
ಮಾರ್ವೇಶ್ ಕರೆ ಮಾಡಿದಾಗ ಲೋಹಿತ್ ಕರೆ ಸ್ವೀಕರಿಸಿಲ್ಲ. ಈ ವೇಳೆ ಆರೋಪಿಗಳು ಮಾರ್ವೇಶ್‌ನನ್ನು ಕಾಲೇಜಿನ ಬಳಿ ಬಿಟ್ಟು ಪರಾರಿಯಾಗಿದ್ದರು. ಹಲ್ಲೆಯಿಂದ ತೀವ್ರ ಅಸ್ವಸ್ಥನಾಗಿದ್ದ ಮಾರ್ವೇಶ್ ಕುಸಿದು ಬಿದ್ದು ವಾಂತಿ ಮಾಡಿಕೊಂಡಿದ್ದ. ಬಳಿಕ ಸ್ನೇಹಿತರು ಆತನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಿಸದೆ ಮಾರ್ವೇಶ್ ಮೃತಪಟ್ಟಿದ್ದ. ಈ ಸಂಬಂಧ ಅನುಮಾನಾಸ್ಪದ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಬಳಿಕ ತನಿಖೆಗೆ ಇಳಿದಾಗ ಕಾಲೇಜಿನಿಂದ ಕೆಲವರು ಮಾರ್ವೇಶ್‌ನನ್ನು ಕರೆದುಕೊಂಡು ಹೋಗಿದ್ದ ವಿಚಾರ ಗೊತ್ತಾಗಿದೆ.
ಈ ಸುಳಿವಿನ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಹಲ್ಲೆ ವಿಚಾರ ಬೆಳಕಿಗೆ ಬಂದಿದೆ. ಬಳಿಕ ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರು ಮಂದಿ ಆರೋಪಿಗಳ ಪೈಕಿ ಕಾರ್ತಿಕ್ ಮೇಲೆ ಈ ಹಿಂದೆ ರಾಮಮೂರ್ತಿನಗರ ಪೊಲೀಸ್ ಠಾಣೆಯಲ್ಲಿ ರೌಡಿ ಪಟ್ಟಿತೆರೆಯಲಾಗಿದೆ. ಅಭಿಷೇಕ್ ಮತ್ತು ನೆಲ್ಸನ್ ವಿರುದ್ಧವೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಇವರಿಬ್ಬರ ವಿರುದ್ಧ ಶೀಘ್ರದಲ್ಲೇ ರೌಡಿ ಪಟ್ಟಿತೆರೆಯಲು ತೀರ್ಮಾನಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.