ಹಿಜಾಬ್ ಧರಿಸದೆ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇರಾನಿನ ಚೆಸ್ ಆಟಗಾರ್ತಿಗೆ ಸ್ಪೇನ್ ದೇಶದ ಪೌರತ್ವ!
ಮ್ಯಾಡ್ರಿಡ್: ಪ್ರಸ್ತಕ ವರ್ಷದ ಜನವರಿಯಲ್ಲಿ ಹಿಜಬ್ (Hijab) ಧರಿಸದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಇರಾನಿನ ಚೆಸ್ ಆಟಗಾರ್ತಿಗೆ ಸ್ಪೇನ್ ತನ್ನ ದೇಶದ ಪೌರತ್ವ (Spain Citizenship) ನೀಡಿರುವುದಾಗಿ ತಿಳಿಸಿದೆ.
ಚೆಸ್ ಸ್ಪರ್ಧೆಗಾಗಿ ಸ್ಪೇನ್‌ಗೆ ತೆರಳಿದ್ದ ಚೆಸ್ ಆಟಗಾರ್ತಿ (Chess Player) ಸರಸಾದತ್ ಖಡೆಮಲ್ಶರೀಹ್ (Sarasadat Khademalsharieh) ಹಿಜಬ್ ಧರಿಸದೇ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಈ ಬೆಳವಣಿಗೆ ಕಂಡುಬಂದ ನಂತರ ಇರಾನ್ (Iran) ಆಕೆಯ ಬಂಧನಕ್ಕೆ ವಾರಂಟ್ ಜಾರಿಗೊಳಿಸಿತ್ತು. ಆ ನಂತರ ಸ್ಪೇನ್ ತನ್ನ ದೇಶದ ಪೌರತ್ವ ನೀಡಿರುವುದಾಗಿ ಬುಧವಾರ ಘೋಷಣೆ ಮಾಡಿದೆ.
ಸರಸಾದತ್ ಖಡೆಮಲ್ಶರೀಹ್ 2022ರ ಡಿಸೆಂಬರ್ ಅಂತ್ಯದಲ್ಲಿ ಕಜಕಿಸ್ತಾನ್‌ನಲ್ಲಿ ನಡೆದ ಎಫ್‌ಐಡಿಇ ವರ್ಲ್ಡ್ ರ‍್ಯಾಪಿಡ್ ಮತ್ತು ಬ್ಲಿಟ್ಜ್ ಚೆಸ್ ಚಾಂಪಿಯನ್ ಶಿಪ್ (Chess Championships) ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಇರಾನ್‌ನ ಇಸ್ಲಾಮಿಕ್ ಕಾನೂನಿನ ಅನ್ವಯ ಕಡ್ಡಾಯವಾಗಿ ಹಿಜಬ್ ಧರಿಸಬೇಕಿತ್ತು. ಆದ್ರೆ ಹಿಜಬ್ ಧರಿಸದೇ ಖಡೆಮಲ್ಶರೀಹ್ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಈ ಹಿನ್ನೆಲೆಯಲ್ಲಿ ಸರಸಾದತ್ ಖಡೆಮಲ್ಶರೀಹ್ ಬಂಧನಕ್ಕೆ ವಾರಂಟ್ ಜಾರಿಗೊಳಿಸಲಾಗಿತ್ತು. ಇದನ್ನ ವಿಶೇಷ ಸಂದರ್ಭವಾಗಿ ಪರಿಗಣನೆಗೆ ತೆಗೆದುಕೊಂಡ ಸ್ಪೇನ್ ಸರ್ಕಾರ ಕ್ಯಾಬಿನೆಟ್‌ನಲ್ಲಿ ಅನುಮೋದನೆ ನೀಡಿದ್ದು, ಚೆಸ್ ಆಟಗಾರ್ತಿಗೆ ತನ್ನ ದೇಶದ ಪೌರತ್ವ ನೀಡಿರುವುದಾಗಿ ಹೇಳಿದೆ.
ಹಿನ್ನೆಲೆ ಏನು?
ಕಳೆದ ವರ್ಷ ಸೆಪ್ಟೆಂಬರ್ 16 ರಂದು, 22 ವಯಸ್ಸಿನ ಮಹ್ಸಾ ಅಮಿನಿ ಹಿಜಬ್ ಧರಿಸದೇ ಇದ್ದಿದ್ದಕ್ಕೆ ಟೆಹ್ರಾನ್‍ನಲ್ಲಿ ಬಂಧನಕ್ಕೊಳಗಾಗಿ ನೈತಿಕ ಪೊಲೀಸ್‍ಗಿರಿಗೆ ಬಲಿಯಾಗಿದ್ದರು. ನಂತರ ಇರಾನ್‍ನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಯಿತು. ಮಹಿಳೆಯರು ಹಿಜಬ್ ಸುಟ್ಟು, ತಲೆಗೂದಲು ಕತ್ತರಿಸಿ ಸರ್ಕಾರ ಹಾಗೂ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದರು.
ಅಪಘಾತವಾದ ಕಾರಿಗೆ ವಿದ್ಯುತ್ ಶಾಕ್ – ಸಹಾಯಕ್ಕೆ ಬಂದ ಇಬ್ಬರು ಸಾವು
ಮೈಸೂರು: ಕಾರೊಂದು ಅಪಘಾತಕ್ಕೀಡಾಗಿ (Car Accident) ಅದಕ್ಕೆ ವಿದ್ಯುತ್ ಪ್ರವಹಿಸಿದ (Electric Shock) ಕಾರಣ ಸಹಾಯಕ್ಕೆ ಬಂದ ಇಬ್ಬರಿಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ದಾರುಣ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.
ಅಶೋಕಪುರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಾರೊಂದು ಅಪಘಾತಕ್ಕೀಡಾಗಿತ್ತು. ಸದ್ಯ ಅಪಘಾತದ ವೇಳೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಯಾರೊಬ್ಬರಿಗೂ ಪ್ರಾಣಾಪಾಯವಾಗಿಲ್ಲ. ಆದರೆ ಅಪಘಾತದ ಬಳಿಕ ಸಹಾಯಕ್ಕೆ ಬಂದ ಕಿರಣ್ ಹಾಗೂ ರವಿಗೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಇನ್ನೊಬ್ಬ ಡೆಲಿವರಿ ಬಾಯ್ ಗಂಭೀರವಾಗಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ.
ಕಾರು ಅಪಘಾತವಾದ ಬಳಿಕ ಅದರಲ್ಲಿದ್ದವರು ಸಹಾಯಕ್ಕೆ ಕೆಲ ಹುಡುಗರನ್ನು ಫೋನ್ ಮಾಡಿ ಕರೆದಿದ್ದರು. ಆದರೆ ಸ್ಥಳದಲ್ಲೇ ವಿದ್ಯುತ್ ತಂತಿಯೊಂದು ತುಂಡಾಗಿದ್ದುದು ಯಾರಿಗೂ ತಿಳಿದಿರಲಿಲ್ಲ. ಯುವಕರು ಸಹಾಯಕ್ಕೆ ಆಗಮಿಸಿ ಕಾರನ್ನು ಎತ್ತಲು ಮುಂದಾದಾಗ ವಿದ್ಯುತ್ ತಂತಿ ತುಳಿದು ನಾಲ್ವರಿಗೆ ವಿದ್ಯುತ್ ಶಾಕ್ ಹೊಡೆದಿತ್ತು. ಘಟನೆಯಲ್ಲಿ ಕಿರಣ್ ಹಾಗೂ ರವಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮತ್ತೊಬ್ಬ ಡೆಲಿವರಿ ಬಾಯ್‌ನ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಮೃತ ವ್ಯಕ್ತಿಗಳ ಕುಟುಂಬ ಬಡತನದವರಾಗಿದ್ದು, ಕೆಪಿಟಿಸಿಎಲ್ ಅಧಿಕಾರಿಗಳು ಸೂಕ್ತ ಪರಿಹಾರ ನೀಡುವಂತೆ ಸಂಬಂಧಿಕರು ಒತ್ತಾಯಿಸಿದ್ದಾರೆ. ಘಟನೆ ಅಶೋಕಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.