ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್: ಬಿಜೆಪಿ ಕಾರ್ಯಕರ್ತೆ ಬಂಧನ
ಬೆಂಗಳೂರು, ಜು 28 : ಉಡುಪಿಯ ಕಾಲೇಜಿನ ಶೌಚಗೃಹದಲ್ಲಿ ವಿದ್ಯಾರ್ಥಿನಿಯರ ವಿಡಿಯೋ ಸೆರೆಹಿಡಿದ ವಿವಾದದ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಮಾಡಿದ್ದ ಬಿಜೆಪಿ ಕಾರ್ಯಕರ್ತೆ ಶಕುಂತಲಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಉಡುಪಿ ಕಾಲೇಜಿನ ವಿಡಿಯೋ ಕೇಸ್ಗೆ ಸಂಬಂಧಿಸಿದಂತೆ ಶಕುಂತಲಾ, ‘ಕಾಂಗ್ರೆಸ್ನವರ ಪ್ರಕಾರ ವಿಡಿಯೋ ಮಾಡಿದ್ದು ಮಕ್ಕಳಾಟವಂತೆ. ಸಿದ್ದರಾಮಯ್ಯ ಸೊಸೆ ಅಥವಾ ಹೆಂಡತಿ ಅವರ ವಿಡಿಯೋವನ್ನು ಇದೆ ತರ ಮಾಡಿದರೆ ಅದನ್ನು ಮಕ್ಕಳಾಟ ಅಂತ ಒಪ್ಪಿಕೊಳ್ಳುತ್ತೀರಾ?’ ಎಂದು ಪೋಸ್ಟ್ ಮಾಡಿದ್ದರು. ಈ ಕುರಿತು ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಅವರನ್ನು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸರು ಬಂಧಿಸಿದ್ದಾರೆ. ತಮಕೂರು ಮೂಲದ ಶಕುಂತಲಾ ಬಿಜೆಪಿಯ ಸಾಮಾಜಿಕ ಜಾಲತಾಣದ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಬಂಧನದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಈ ಹಿಂದೆಯೂ ಇವರು ಒಡಿಸ್ಸಾ ರೈಲು ದುರಂತ ಸೇರಿದಂತೆ ಹಲವು ವಿಚಾರವಾಗಿ ವಿವಾದಾತ್ಮಕ ಟ್ವೀಟ್ ಮಾಡಿ ಕೆಂಗಣ್ಣಿಗೆ ಗುರಿಯಾಗಿದ್ದರು.
ಶಾಸಕತ್ವ ಅಸಿಂಧು ಕೋರಿ ಅರ್ಜಿ – ಸಿದ್ದರಾಮಯ್ಯಗೆ ಹೈಕೋರ್ಟ್ನಿಂದ ನೋಟಿಸ್ ಜಾರಿ
ಬೆಂಗಳೂರು: ಸಿದ್ದರಾಮಯ್ಯನವರ (Siddaramaiah) ಶಾಸಕ ಸ್ಥಾನವನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗೆ (Disqualification Petition) ಸಂಬಂಧಿಸಿದಂತೆ ಹೈಕೋರ್ಟ್ (High Court) ಸಿಎಂಗೆ ನೋಟಿಸ್ ಜಾರಿ ಮಾಡಿದೆ.
ಮೈಸೂರಿನ ವರುಣಾ (Varuna) ಹೋಬಳಿಯ ಕೂಡನಹಳ್ಳಿ ಗ್ರಾಮದ ಕೆಎಂ ಶಂಕರ ಅವರು ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಸಿದ್ದರಾಮಯ್ಯನವರಿಗೆ ವಿವರಣೆ ನೀಡುವಂತೆ ಕೋರಿ ನೋಟಿಸ್ ಜಾರಿ ಮಾಡಿ ವಿಚಾರಣೆಯನ್ನು ಸೆಪ್ಟೆಂಬರ್ 1ಕ್ಕೆ ಮುಂದೂಡಿದೆ.
ಅರ್ಜಿಯಲ್ಲಿ ಏನಿದೆ?
ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ (Congress) ಗ್ಯಾರಂಟಿ ಯೋಜನೆಗಳ (Guarantee Scheme) ಮೂಲಕ ಮತದಾರರಿಗೆ ಆಮಿಷ ಒಡ್ಡಿತ್ತು. ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 123 (1) ಮತ್ತು ಸೆಕ್ಷನ್ 123 (2) ಪ್ರಕಾರ ಮತದಾರರ ಮೇಲೆ ಇದು ಪ್ರಭಾವ ಬೀರಿದ್ದು, ಇದು ಲಂಚಕ್ಕೆ ಸಮವಾಗಿದೆ. ಸೆಕ್ಷನ್ 123 (4)ರ ಪ್ರಕಾರ ಆಮಿಷವೊಡ್ಡಿ ಪ್ರಚಾರ ನಡೆಸುವುದು ಅಪರಾಧ. ಈ ಕಾರಣಕ್ಕೆ ಅಕ್ರಮ ಎಸಗಿದ್ದರಿಂದ ವರುಣಾ ಕ್ಷೇತ್ರದಿಂದ ಸಿದ್ದರಾಮಯ್ಯ ಶಾಸಕರಾಗಿ ಆಯ್ಕೆಯಾಗಿರುವುದನ್ನು ಅಸಿಂಧುಗೊಳಿಸಬೇಕು.
ಗ್ಯಾರಂಟಿ ಯೋಜನೆಗಳನ್ನು ಸಿದ್ದರಾಮಯ್ಯ ಅವರ ಅನುಮತಿಯನ್ನು ಪಡೆಯಲಾಗಿದ್ದು ಕಾರ್ಡ್ಗಳಿಗೆ ಅವರ ಸಹಿಯನ್ನು ಹಾಕಲಾಗಿದೆ. ಈ ಗ್ಯಾರಂಟಿ ಯೋಜನೆಗಳು ವರುಣಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಲು ಮತದಾರರನ್ನು ಪ್ರೇರೇಪಿಸಿದೆ ಎಂದು ಅರ್ಜಿಯಲ್ಲಿ ಕೋರಿದ್ದಾರೆ.