ನಿಮ್ಮ ಆಧಾರ್ ಕಾರ್ಡ್ ಮಾಡಿ 10 ವರ್ಷ ಆಗಿದೆಯಾದರೆ ಅದನ್ನು ಅಪ್ಡೇಟ್ ಮಾಡುವುದು ಹೇಗೆ? ಇಲ್ಲಿದೆ ಮಾಹಿತಿ
ಕಲಬುರಗಿ: ಇದೀಗ ಆಧಾರ್ ಕಾರ್ಡ್ಗೆ (Aadhaar Card) ಎಲ್ಲಿಲ್ಲದ ಮಹತ್ವ ಬಂದಿದೆ. ಎಲ್ಲ ಕೆಲಸಕ್ಕೂ ಆಧಾರ ಕೇಳ್ತಿದ್ದಾರೆ. ನೂತನ ಸರ್ಕಾರದ ಗ್ಯಾರಂಟಿ ಯೋಜನೆಗಳಿಗಂತೂ ಆಧಾರ್ ಕಾರ್ಡೇ ಆಧಾರ! ಗೃಹಲಕ್ಷ್ಮಿ ಸೇರಿದಂತೆ ಅನೇಕ ಯೋಜನೆಗಳ ಲಾಭ ಪಡೆಯಲು ಆಧಾರ್ ಕಡ್ಡಾಯವಾಗಿದೆ. ಆದರೆ ಇತ್ತೀಚೆಗೆ ಅನೇಕರಿಗೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿ ಅಂತ ಸಂದೇಶಗಳು ಬರ್ತಿವೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ನ್ನು ಹತ್ತು ವರ್ಷದಿಂದ ಒಮ್ಮೆಯೂ ಅಪ್ಡೇಟ್ (Aadhaar update) ಮಾಡದೇ ಇರೋದು.
ಕಲಬುರಗಿ ಜಿಲ್ಲೆಯಲ್ಲಿ ಆಧಾರ್ ಕಾರ್ಡ್ ಪಡೆದು 10 ವರ್ಷ ಮೇಲ್ಪಟ್ಟ ಹಾಗೂ ಇಲ್ಲಿಯವರೆಗೂ ಆಧಾರ್ ಕಾರ್ಡ್ ನವೀಕರಿಸದೇ ಇರುವವರು ತಮ್ಮ ವೈಯಕ್ತಿಕ ಗುರುತಿನ ದಾಖಲೆ ಹಾಗೂ ವಿಳಾಸದ ದಾಖಲೆಗಳೊಂದಿಗೆ ಹತ್ತಿರದ ಆಧಾರ ನೋಂದಣಿ ಕೇಂದ್ರದಲ್ಲಿ ಯ.ಐ.ಡಿ.ಎ.ಐ ಸಂಸ್ಥೆ ಅಭಿವೃದ್ಧಿಪಡಿಸಿರುವ ಹೊಸ ವಿಶಿಷ್ಟ ದಾಖಲಾತಿ ನವೀಕರಣ ತಂತ್ರಾಂಶದಲ್ಲಿ ನವೀಕರಣ/ ಕಾಲೋಚಿತಗೊಳಿಸುವಂತೆ ಕಲಬುರಗಿ ಜಿಲ್ಲಾಧಿಕಾರಿ (kalaburagi DC) ಬಿ. ಫೌಜಿಯಾ ತರನ್ನುಮ್ ಸೂಚಿಸಿದ್ದಾರೆ.
ಅದೇ ರೀತಿ 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ಮತ್ತು ಮೋಬೈಲ್ ಸಂಖ್ಯೆಯನ್ನು ಸಹ ನವೀಕರಣಗೊಳಿಸಬೇಕು. ಸರ್ಕಾರದ ವಿವಿಧ ಯೋಜನೆಗಳಿಗೆ ಆಧಾರ್ ಕಡ್ಡಾಯಗೊಳಿಸಿರುವುದರಿಂದ ಜಿಲ್ಲೆಯ ನಾಗರಿಕರು ಆಧಾರ್ ನೊಂದಣಿ ಮಾಡಿಕೊಳ್ಳಬೇಕು. ಅಲ್ಲದೆ ಪ್ರತಿ 10 ವರ್ಷಕ್ಕೊಮ್ಮೆ ಬಯೋಮೆಟ್ರಿಕ್ ನವೀಕರಿಸಿಕೊಳ್ಳಬೇಕೆಂದು ಅವರು ಕೋರಿದ್ದಾರೆ.
ಆಧಾರ್ ಕಾರ್ಡ್ ಯಾಕಾಗಿ ಅಪ್ಡೇಟ್ ಮಾಡಬೇಕು?
ಆಧಾರ ಕಾರ್ಡ್ ಪಡೆದು ಹತ್ತು ವರ್ಷವಾದವರು ಇದೀಗ ಆಧಾರ್ ಕಾರ್ಡ್ ನ್ನು ಮತ್ತೊಮ್ಮೆ ಅಪ್ಡೇಟ್ ಮಾಡಬೇಕಾಗಿದೆ. ಇದಕ್ಕೆ ಕಾರಣ ಆಧಾರ್ ಕಾರ್ಡ್ ಪಡೆದ ವ್ಯಕ್ತಿಯ ಬಗ್ಗೆ ಮಾಹಿತಿ ಯನ್ನು ಅಪ್ಡೇಟ್ ಮಾಡೋದು ಮತ್ತು ದುರುಪಯೋಗ ತಪ್ಪಿಸೋದಾಗಿದೆ. ಹೀಗಾಗಿಯೇ ಆಧಾರ್ ನಿಂದ ಹತ್ತು ವರ್ಷಕ್ಕೂ ಮೇಲ್ಪಟ್ಟ ಅನೇಕರಿಗೆ ನಿಮ್ಮ ಆಧಾರ್ ಕಾರ್ಡ್ ನ್ನು ಅಪ್ಡೇಟ್ ಮಾಡಿ ಅಂತ ಮೇಲಿಂದ ಮೇಲೆ ಸಂದೇಶಗಳು ಬರುತ್ತಿವೆ.
ಆಧಾರ್ ಕಾರ್ಡ್ ಅಪ್ಡೇಟ್ ಸೇವಾ ಶುಲ್ಕ ಎಷ್ಟು
ಹೊಸದಾಗಿ ಆಧಾರ್ ನೋಂದಣಿಗೆ ಮತ್ತು 5 ವರ್ಷ ಮೇಲ್ಪಟ್ಟು 7 ವರ್ಷದ ಒಳಗಿನ ಎಲ್ಲಾ ಮಕ್ಕಳ ಬಯೋಮೇಟ್ರಿಕ್ ನವೀಕರಣವು ಉಚಿತವಾಗಿರುತ್ತದೆ. ಉಳಿದಂತೆ ಹೆಸರು, ಲಿಂಗ, ವಯಸ್ಸು, ವಿಳಾಸ ಹಾಗೂ ಮೊಬೈಲ್ ನಂಬರುಗಳ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ 50 ರೂ. ಮತ್ತು ಕಣ್ಣು, ಮುಖ, ಕೈ ಬೆರಳುಗಳ ವಿವರ (ಡೆಮೋಗ್ರಾಫಿಕ್) ನವೀಕರಣಕ್ಕೆ 100 ರೂ.ಗಳ ಸೇವಾ ಶುಲ್ಕ ಇದ್ದು, ಸಾರ್ವಜನಿಕರು ಇದಕ್ಕಿಂತ ಹೆಚ್ಚಿನ ಶುಲ್ಕ ಪಾವತಿ ಮಾಡಬೇಕಿಲ್ಲ.