ಮಣಿಪುರದಲ್ಲಿ ನಾಚಿಕೆಗೇಡಿನ ಕೃತ್ಯ ; ತಪ್ಪಿತಸ್ಥರನ್ನು ಬಿಡುವುದಿಲ್ಲ - ಪ್ರಧಾನಿ ಮೋದಿ

ನವದೆಹಲಿ: ಮಣಿಪುರ ಹಿಂಸಾಚಾರ ಬಗ್ಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಣಿಪುರದಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಗೊಳಿಸಿ ಪರೇಡ್ ಮಾಡಿಸಿದ ಘಟನೆ 140 ಕೋಟಿ ಭಾರತೀಯರಿಗೆ ಮಾಡಿದ ಅವಮಾನ ಎಂದು ಪ್ರಧಾನಿ ಬೇಸರ ವ್ಯಕ್ತಪಡಿಸಿದ್ದಾರೆ.
ಇಂದು ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದು ಇದಕ್ಕೂ ಮುನ್ನ ಸಂಸತ್ತು ಭವನ ಹೊರಗೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳಲಿದ್ದು ತಪ್ಪಿತಸ್ಥರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ, ಕಠಿಣ ಶಿಕ್ಷೆಯಾಗಲಿದೆ ಎಂದಿದ್ದಾರೆ.
‘ಈ ವಿಷಯ ಕೇಳಿ ನನ್ನ ಹೃದಯ ತುಂಬಾ ನೋವಾಗಿದ್ದು ಸಿಟ್ಟಿನಿಂದ ಕುದಿಯುತ್ತಿದೆ. ನಮ್ಮ ಮುಂದೆ ಬಂದಿರುವ ಮಣಿಪುರದ ಘಟನೆ ಯಾವುದೇ ಸುಸಂಸ್ಕೃತ ಸಮಾಜಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ. ಆಯಾ ರಾಜ್ಯಗಳ ಮುಖ್ಯಮಂತ್ರಿಗಳು ತಮ್ಮ ರಾಜ್ಯಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಬೇಕೆಂದು ನಾನು ಒತ್ತಾಯಿಸುತ್ತೇನೆ – ವಿಶೇಷವಾಗಿ ಮಹಿಳೆಯರ ಸುರಕ್ಷತೆಗಾಗಿ ಮತ್ತು ಬಲವಾದ ಕ್ರಮಗಳನ್ನು ತೆಗೆದುಕೊಳ್ಳಬೇಕು. ಅದು ರಾಜಸ್ಥಾನ ಅಥವಾ ಮಣಿಪುರದ ಛತ್ತೀಸ್‌ಗಢದಲ್ಲಿ ಅಥವಾ ದೇಶದ ಯಾವುದೇ ಮೂಲೆಯಲ್ಲಿ ಯಾವುದೇ ಘಟನೆಯಾಗಿರಲಿ, ರಾಜಕೀಯದಿಂದ ಹೊರಬಂದು ಸುಸಂಸ್ಕೃತ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಮುಂದಾಗಬೇಕು ಎಂದರು.
ಮುಂಗಾರು ಅಧಿವೇಶನಕ್ಕೆ ಸಹಕಾರ ನೀಡಿ: ಮುಂಗಾರು ಅಧಿವೇಶನದುದ್ದಕ್ಕೂ ಎಲ್ಲಾ ಪಕ್ಷಗಳ ಸದಸ್ಯರು ಸದನದಲ್ಲಿ ಫಲಪ್ರದ ಚರ್ಚೆ ನಡೆಸಿ ಕಲಾಪ ಸುಗಮವಾಗಿ ಸಾಗುವಂತೆ ಸಹಕಾರ ನೀಡಿ,ದೇಶದ ಜನರ ಹಿತಾಸಕ್ತಿಗೆ ಪೂರಕವಾದ ಚರ್ಚೆಗಳಲ್ಲಿ ತೊಡಗಿ ಮಸೂದೆಯನ್ನು ಅಂಗೀಕರಿಸಲು ಸಹಕಾರ ನೀಡುವಂತೆ ಇದೇ ಸಂದರ್ಭದಲ್ಲಿ ಸದನ ಸದಸ್ಯರನ್ನು ಪ್ರಧಾನಿ ಮೋದಿ ಕೇಳಿಕೊಂಡರು.
Speaking at the start of the Monsoon Session of Parliament. https://t.co/39Rf3xmphJ
— Narendra Modi (@narendramodi) July 20, 2023
ಮಣಿಪುರ ಮಹಿಳೆಯ ಬೆತ್ತಲೆ ಮೆರವಣಿಗೆ ಪ್ರಕರಣ – ಓರ್ವ ಆರೋಪಿ ಅರೆಸ್ಟ್
ಇಂಫಾಲ್: ಮಣಿಪುರದಲ್ಲಿ (Manipur) ಇಬ್ಬರು ಮಹಿಳೆಯರ (Women) ಬೆತ್ತಲೆ ಮೆರವಣಿಗೆ ಮಾಡಿದ್ದ ಪ್ರಕರಣದಲ್ಲಿ ಓರ್ವ ಆರೋಪಿಯನ್ನು ಪೊಲೀಸರು (Police) ಗುರುವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಹೆರಾದಾಸ್ (32) ಎಂದು ಗುರುತಿಸಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮೆರವಣಿಗೆಯ ವೀಡಿಯೋದಲ್ಲಿ ಆರೋಪಿ ಹಸಿರು ಟಿ ಶರ್ಟ್ ಧರಿಸಿದ್ದ. ಇದೇ ವೀಡಿಯೋ ಸಹಾಯದಿಂದ ತೌಬಲ್ ಜಿಲ್ಲೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಡ್ಡಗಾಡು ಪ್ರದೇಶಗಳಲ್ಲಿ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುತ್ತಿರುವುದು ಇಂಟರ್‍ನೆಟ್‍ನಲ್ಲಿ ಬುಧವಾರ ಹರಿದಾಡಿತ್ತು. ಹರಿದಾಡಿದ್ದ ವೀಡಿಯೋ 2 ತಿಂಗಳ ಹಳೆಯದ್ದಾಗಿದೆ. ಮಣಿಪುರದಲ್ಲಿ ಹಿಂಸಾಚಾರ ಆರಂಭಗೊಂಡ ಬಳಿಕ ಕಾಂಗ್‍ಫೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಘಟನೆ ನಡೆದಿದೆ. ಈ ಸಂಬಂಧ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಉಳಿದ ಆರೋಪಿಗಳನ್ನು ಬಂಧಿಸಲು 12 ಜನ ಪೊಲೀಸರ ತಂಡ ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಯ ದಿನ ಸುಮಾರು 800 ರಿಂದ 1,000 ಜನರು ಶಸ್ತ್ರಾಸ್ತ್ರಗಳನ್ನು ಹಿಡಿದು ಗ್ರಾಮವೊಂದಕ್ಕೆ ನುಗ್ಗಿ ಆಸ್ತಿಗಳನ್ನು ಧ್ವಂಸಗೊಳಿಸಿದ್ದರು. ಬಳಿಕ ಮನೆಗಳನ್ನು ಸುಟ್ಟು ಹಾಕಿದ್ದರು. ಈ ವೇಳೆ ಇಬ್ಬರು ಪುರುಷರು ಮತ್ತು ಮೂವರು ಮಹಿಳೆಯರು ದಾಳಿಕೋರರಿಂದ ತಪ್ಪಿಸಿಕೊಳ್ಳಲು ಅರಣ್ಯಕ್ಕೆ ಓಡಿಹೋದರು. ನಂತರ ಅವರನ್ನು ನಾಂಗ್‍ಪೋಕ್ ಸೆಕ್ಮೈ ಪೊಲೀಸ್ ತಂಡವು ರಕ್ಷಿಸಿತ್ತು. ಬಳಿಕ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದಾಗ ದಾಳಿಕೋರರ ಗುಂಪು ಅಪಹರಿಸಿತ್ತು. ದುಷ್ಕರ್ಮಿಗಳು ಮೇಟಿ (Meitei) ಸಂಘಟನೆಗಳ ಸದಸ್ಯರು ಎಂದು ಶಂಕಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್‍ಐಆರ್‌ನಲ್ಲಿ ದಾಖಲಾದ ಮಾಹಿತಿ ಪ್ರಕಾರ ಮಹಿಳೆಯರಿಗೆ ತಮ್ಮ ಬಟ್ಟೆಗಳನ್ನು ತೆಗೆಯುವಂತೆ ದಾಳಿಕೋರರು ಒತ್ತಾಯಿಸಿದ್ದಾರೆ. ಈ ವೇಳೆ ಮಹಿಳೆಯ ಸಹೋದರ ತಡೆಯಲು ಪ್ರಯತ್ನಿಸಿದಾಗ ಆತನನ್ನು ಕೊಲೆ ಮಾಡಲಾಗಿದೆ. ಬಳಿಕ ಸಾಮೂಹಿಕ ಅತ್ಯಾಚಾರ ಮಾಡಲಾಗಿದೆ ಎಂದು ಉಲ್ಲೇಖಿಸಲಾಗಿದೆ.