ತುಳುವಿನಲ್ಲಿ ಮಾತನಾಡಿ ಗಮನ ಸೆಳೆದ ಕರಾವಳಿ ಸಚಿವರು ; ತುಳುವನ್ನು 2 ನೇ ಅಧಿಕೃತ ಭಾಷೆಯನ್ನಾಗಿ ಮಾಡಲು ಮನವಿ!

ಬೆಂಗಳೂರು: ವಿಧಾನಸಭೆ ಕಲಾಪದಲ್ಲಿಂದು ತುಳು ಭಾಷೆ (Tulu Language) ಗಮನಸೆಳೆದಿದೆ. ತುಳುವನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಮಾಡುವಂತೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ (Ashok Kumar Rai) ಮನವಿ ಮಾಡಿದ್ದಾರೆ.
ತುಳು ಭಾಷೆಯಲ್ಲೇ ಮಾತನಾಡಿ ಅಶೋಕ್ ಕುಮಾರ್ ರೈ ಗಮನಸೆಳೆದಿದ್ದು, ಈ ವೇಳೆ ಸ್ಪೀಕರ್ ಯುಟಿ ಖಾದರ್ (UT Khader) ತುಳು ಭಾಷೆಯಲ್ಲೇ ಅವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ವೇಳೆ ಶಾಸಕ ವೇದವ್ಯಾಸ್ ಕಾಮತ್ (Vedavyas Kamath) ತುಳುವಿನಲ್ಲಿ ಮಾತನಾಡಲು ಮುಂದಾದಾಗ ಕನ್ನಡದಲ್ಲಿ ಮಾತನಾಡಿ ಎಂದು ಸ್ಪೀಕರ್ ಖಾದರ್ ಸೂಚನೆ ನೀಡಿದ್ರು.
ಬಳಿಕ ಕನ್ನಡ ಹಾಗೂ ತುಳುವಿನಲ್ಲಿ ವೇದವ್ಯಾಸ್ ಕಾಮತ್ ಮಾತನಾಡಿದ್ದಾರೆ. ತುಳುವಿನಲ್ಲಿ ಮಾತನಾಡುವುದಕ್ಕೆ ವಿರೋಧ ಇಲ್ಲ. ಆದರೆ ಬರೆದುಕೊಳ್ಳುವವರಿಗೆ ಸಮಸ್ಯೆ ಆಗುತ್ತದೆ ಎಂದು ಯಲಬುರ್ಗಾ ಶಾಸಕ ಬಸವರಾಜ ರಾಯರೆಡ್ಡಿ ಧ್ವನಿಯೆತ್ತಿದ್ದಾರೆ. ನೀವು ತುಳುವಿನಲ್ಲಿ ಮಾತನಾಡಿದರೆ ನಾನು ಅರ್ಥ ಆಗದೇ ಉತ್ತರ ಕೊಡುವುದು ಹೇಗೆ ಎಂದು ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದಾರೆ.
ಈ ವೇಳೆ ಸ್ಪೀಕರ್ ಮಾತನಾಡಿ, ತುಳು ಮಾತನಾಡಿದಾಗ ಎಲ್ಲರೂ ಖುಷಿ ಖುಷಿಯಿಂದ ಇದ್ದರು. ತುಳು ಮಾತನಾಡುವವರು ಎಲ್ಲರನ್ನೂ ಖುಷಿಯಾಗಿರಿಸುತ್ತಾರೆ. ನೀವು ಕೂಡಾ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ ಎಂದು ಸಲಹೆ ನೀಡಿದರು.ಆಗ ಶಿವರಾಜ್ ತಂಗಡಗಿ ಮಾತನಾಡಿ ವರದಿಗಳನ್ನು ತರಿಸಿಕೊಂಡು ಪರಿಶೀಲನೆ ಮಾಡುವುದಾಗಿ ಉತ್ತರಿಸಿದರು. ನೀವು ಕಾನೂನು ಇಲಾಖೆ, ಎಲ್ಲಾ ಇಲಾಖೆಗಳ ವರದಿಗಳನ್ನು ತರಿಸಿಕೊಂಡು ತುಳು ಭಾಷೆಯನ್ನು 2ನೇ ಅಧಿಕೃತ ರಾಜ್ಯ ಭಾಷೆಯನ್ನಾಗಿ ಮಾಡಿ ಎಂದು ಸಚಿವರಿಗೆ ಸ್ಪೀಕರ್ ಖಾದರ್ ಸೂಚಿಸಿದರು.