ಕೊಡಗು - ಮೈಸೂರು ಲೋಕಸಭಾ ಕ್ಷೇತ್ರದಿಂದ ಪ್ರಿಯಾಂಕ ಗಾಂಧಿ ಕಣಕ್ಕೆ?
ಮೈಸೂರು:ಲೋಕಸಭೆ ಚುನಾವಣೆ ಸಮೀಪಿಸುತ್ತಿರುವಂತೆಯೇ ಕಾಂಗ್ರೆಸ್ ಪ್ರಿಯಾಂಕಾ ಗಾಂಧಿ ವಾದ್ರಾಗೆ ದೊಡ್ಡ ಪಾತ್ರವನ್ನು ವಹಿಸಲು ತಯಾರಿ ನಡೆಸುತ್ತಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ನಿಷೇಧದಿಂದಾಗಿ ರಾಹುಲ್ ಗಾಂಧಿ ಅವರ ಅನಿಶ್ಚಿತ ಚುನಾವಣಾ ಭವಿಷ್ಯವನ್ನು ಪರಿಗಣಿಸಿದಲ್ಲದೆ
ಮೋದಿ ಉಪನಾಮ ನಿಂದನೆ’ ಪ್ರಕರಣದಲ್ಲಿ ರಾಹುಲ್ ವಿರುದ್ಧ ಸೂರತ್ ಕೋರ್ಟ್ ನೀಡಿದ ತೀರ್ಪಿನ ನಂತರ ಬಿಜೆಪಿಯನ್ನು ಪ್ರಬಲವಾಗಿ ವಿರೋಧಿಸುವ ನಾಯಕರ ಪೈಕಿ ಪ್ರಿಯಾಂಕಾ ಮುಂಚೂಣಿಯಲ್ಲಿ ಇದ್ದಾರೆ.
ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿರುವುದರಿಂದ ಈ ರಾಜ್ಯದ 28 ಲೋಕಸಭಾ ಸ್ಥಾನಗಳ ಪೈಕಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ.
ಮೈಸೂರು-ಕೊಡಗು ಅಥವಾ ಉಡುಪಿ-ಚಿಕ್ಕಮಗಳೂರು ಕ್ಷೇತ್ರಗಳಿಂದ ಪ್ರಿಯಾಂಕಾ ಗಾಂಧಿ ಅವರನ್ನು ಕಣಕ್ಕಿಳಿಸಲು ಪಕ್ಷ ಚಿಂತನೆ ನಡೆಸಿದೆ.
ಪ್ರಸ್ತುತ, ಈ ಸ್ಥಾನಗಳನ್ನು ಕ್ರಮವಾಗಿ ಬಿಜೆಪಿಯ ಪ್ರತಾಪ್ ಸಿಂಹ ಮತ್ತು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಂದಿದ್ದಾರೆ.
ಆರಂಭದಲ್ಲಿ, ಮೈಸೂರು ರಾಜಮನೆತನದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಯೋಜಿಸಿತ್ತು, ಆದರೆ ಅವರಿಗೆ ರಾಜಕೀಯದಲ್ಲಿ ಆಸಕ್ತಿ ಇಲ್ಲದ ಕಾರಣ, ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಸಂಭಾವ್ಯ ಅಭ್ಯರ್ಥಿಯಾಗಿ ಹೊರಹೊಮ್ಮಿದ್ದಾರೆ. ಒಂದು ವೇಳೆ ಪ್ರಿಯಾಂಕಾ ಈ ಪ್ರಸ್ತಾಪವನ್ನು ನಿರಾಕರಿಸಿದರೆ, ಕಾಂಗ್ರೆಸ್ ಡಾ.ಯತೀಂದ್ರ ಸಿದ್ಧರಾಮಯ್ಯ ಅವರನ್ನು ಕೊಡಗು ಮೈಸೂರು ಲೋಕಸಭಾ ಕ್ಷೇತ್ರದಿಂದ ಪರಿಗಣಿಸುತ್ತದೆ.
ಕಾಂಗ್ರೆಸ್ ನಾಯಕರು ಕೊಡಗು ಮೈಸೂರು ಕ್ಷೇತ್ರ ಪ್ರಿಯಾಂಕಾಗೆ ಸುರಕ್ಷಿತ ಎಂದು ವಿಶ್ಲೇಷಣೆ ನಡೆಸಿದ್ದಾರೆ.
ಪಿಎಂ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ದೃಢವಾದ ನಿಲುವು ಹೊಂದಿದ್ದು, ಸಾಮಾನ್ಯ ಮತದಾರರಿಗೆ ನಿಕಟವಾಗುವಲ್ಲಿ ಪ್ರಿಯಾಂಕಾ ಹೆಚ್ಚು ಸೂಕ್ತ.
ಪ್ರಿಯಾಂಕ ಅವರ ದಿವಂಗತ ಅಜ್ಜಿ ಇಂದಿರಾ ಗಾಂಧಿಯವರ ಹೋಲಿಕೆಯೊಂದಿಗೆ ಪಕ್ಷದ ಚುನಾವಣಾ ವಿಜಯಗಳನ್ನು ಮುನ್ನಡೆಸಲು ಅನುಕೂಲಕರ ಆಯ್ಕೆಯಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ.
ಕೊಡಗು ಮತ್ತು ಮೈಸೂರಿನಲ್ಲಿ ಪ್ರಸ್ತುತ ಕಾಂಗ್ರೆಸ್ ಪ್ರಬಲವಾಗಿ ಇರುವುದು ಹಾಗೂ ಮಹಿಳೆಯರನ್ನು ಸೆಳೆಯುವಲ್ಲಿ ಪ್ರಿಯಾಂಕ ಯಶಸ್ವಿ ಆಗುವ ನಂಬಿಕೆ ಈ ಲೆಕ್ಕಾಚಾರದ ಹಿಂದೆ ಇದೆ. ಕಾಂಗ್ರೆಸ್ ಗ್ಯಾರಂಟೀ ಯೋಜನೆಗಳ ಬೆಂಬಲ ಮತ್ತು ಪ್ರಿಯಾಂಕ ವರ್ಚಸ್ಸು ಬಿಜೆಪಿ ಹಿಡಿತದ ಈ ಕ್ಷೇತ್ರವನ್ನು ಸುಲಭವಾಗಿ ಕಾಂಗ್ರೆಸ್ ಪಾಲಿಗೆ ದೊರಕಿಸುವ ಲೆಕ್ಕಾಚಾರ ಕೂಡ ಕಾಂಗ್ರೆಸ್ ಪ್ರಮುಖರದ್ದು.
ಬಂಗಾಳ ಪಂಚಾಯತ್ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಟಿಎಂಸಿ, ಎರಡನೇ ಸ್ಥಾನದಲ್ಲಿ ಬಿಜೆಪಿ
ಪಶ್ಚಿಮ ಬಂಗಾಳದಾದ್ಯಂತ (West Bengal) ಒಟ್ಟು 63,229 ಗ್ರಾಮ ಪಂಚಾಯತ್ (Gram panchayath) ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ (TMC) 34,901 ಸ್ಥಾನಗಳನ್ನು ಗೆದ್ದಿದೆ. ರಾಜ್ಯ ಚುನಾವಣಾ ಆಯೋಗದ ವೆಬ್ಸೈಟ್ ಪ್ರಕಾರಬಿಜೆಪಿ 9,719 ಸ್ಥಾನಗಳೊಂದಿಗೆ ದೂರದ ಎರಡನೇ ಸ್ಥಾನದಲ್ಲಿದೆ. ಎಡರಂಗವು 3,083 ಗ್ರಾಮ ಪಂಚಾಯಿತಿ ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 2,542 ಸ್ಥಾನಗಳನ್ನು ಮತ್ತು ಇತರರು 2,896 ಸ್ಥಾನಗಳನ್ನು ಗೆದ್ದಿದ್ದಾರೆ ಎಂದು ವೆಬ್ಸೈಟ್ ಹೇಳಿದೆ.
ರಾಜ್ಯದ ಒಟ್ಟು 3,317 ಗ್ರಾಮ ಪಂಚಾಯಿತಿಗಳ ಪೈಕಿ 2,634ರಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಬಿಜೆಪಿ 220 ಗ್ರಾಮ ಪಂಚಾಯಿತಿಗಳನ್ನು ಗೆದ್ದರೆ, ಎಡರಂಗ 41 ಮತ್ತು ಕಾಂಗ್ರೆಸ್ ಐದು ಗ್ರಾಮ ಪಂಚಾಯಿತಿಗಳನ್ನು ಗೆದ್ದುಕೊಂಡಿದೆ. ಐಎಸ್ಎಫ್ ಒಂದೇ ಒಂದು ಗ್ರಾಮ ಪಂಚಾಯಿತಿಯನ್ನು ಗೆಲ್ಲಲು ವಿಫಲವಾಗಿದೆ. ವೆಬ್ಸೈಟ್ ಪ್ರಕಾರ 214 ಗ್ರಾಮ ಪಂಚಾಯಿತಿಗಳಲ್ಲಿ ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಇತರರು ಮುನ್ನಡೆ ಸಾಧಿಸಿದ್ದಾರೆ. 203 ಗ್ರಾಮ ಪಂಚಾಯಿತಿಗಳು ಅತಂತ್ರ ಸ್ಥಿತಿಗೆ ತಲುಪಿವೆ. ಉಳಿದ ಸ್ಥಾನಗಳಲ್ಲಿ ಮತ ಎಣಿಕೆ ನಡೆಯುತ್ತಿದೆ.
ಪಂಚಾಯತ್ ಸಮಿತಿ ಸ್ಥಾನಗಳ ಪ್ರಕಾರ, ಒಟ್ಟು 9,740 ರಲ್ಲಿ 6,430 ಸ್ಥಾನಗಳನ್ನು ಟಿಎಂಸಿ ಗೆದ್ದಿದೆ. ಬಿಜೆಪಿ 982 ಸ್ಥಾನಗಳನ್ನು ಗೆದ್ದುಕೊಂಡಿದ್ದರೆ ಎಡರಂಗ 180 ಸ್ಥಾನಗಳನ್ನು ಗೆದ್ದಿದೆ. ಕಾಂಗ್ರೆಸ್ 266 ಪಂಚಾಯತ್ ಸಮಿತಿ ಸ್ಥಾನಗಳನ್ನು ಗೆದ್ದಿದೆ. ಪಕ್ಷೇತರರು ಅಭ್ಯರ್ಥಿಗಳು ಸೇರಿದಂತೆ ಇತರರು 279 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದ ಸ್ಥಾನಗಳಿಗೆ ಮತ ಎಣಿಕೆ ನಡೆಯುತ್ತಿದೆ.
ಒಟ್ಟು 341 ಪಂಚಾಯಿತಿ ಸಮಿತಿಗಳಲ್ಲಿ 264ರಲ್ಲಿ ಟಿಎಂಸಿ ಗೆಲುವು ಸಾಧಿಸಿದೆ. ಬಿಜೆಪಿ ಒಂಬತ್ತು ಪಂಚಾಯತ್ ಸಮಿತಿಗಳನ್ನು ಗೆದ್ದುಕೊಂಡಿದ್ದು, ಎಡರಂಗ ಮೂರು ಗೆದ್ದಿದೆ. ಪಕ್ಷೇತರರು ಒಂಬತ್ತು ಪಂಚಾಯತಿ ಸಮಿತಿಗಳಲ್ಲಿ ಗೆಲುವು ಸಾಧಿಸಿದ್ದು, ನಾಲ್ಕು ಪಂಚಾಯತಿ ಸಮಿತಿಗಳಲ್ಲಿ ಅತಂತ್ರ ಸ್ಥಿತಿ ಇದೆ.
ಒಟ್ಟು 928 ಜಿಲ್ಲಾ ಪರಿಷತ್ ಸ್ಥಾನಗಳಲ್ಲಿ ಟಿಎಂಸಿ 674 ಮತ್ತು ಬಿಜೆಪಿ 21 ಸ್ಥಾನ ಗೆದ್ದಿದೆ. ಎಡರಂಗ ಎರಡು ಜಿಲ್ಲಾ ಪರಿಷತ್ ಸ್ಥಾನಗಳನ್ನು ಗೆದ್ದಿದ್ದು, ಕಾಂಗ್ರೆಸ್ 6 ಸ್ಥಾನಗಳನ್ನು ಗೆದ್ದಿದೆ. ಒಂದು ಸ್ಥಾನ ಪಕ್ಷೇತರರ ಪಾಲಾಯಿತು. ಮತ ಎಣಿಕೆ ನಡೆಯುತ್ತಿರುವುದರಿಂದ ಉಳಿದ ಸೀಟುಗಳ ಫಲಿತಾಂಶ ಇನ್ನಷ್ಟೇ ಬರಬೇಕಿದೆ. ರಾಜ್ಯದ ಎಲ್ಲಾ 20 ಜಿಲ್ಲಾ ಪರಿಷತ್ಗಳನ್ನು ಟಿಎಂಸಿ ಗೆದ್ದಿದೆ.
ರಾಜ್ಯವು 63,229 ಸ್ಥಾನಗಳೊಂದಿಗೆ 3,317 ಗ್ರಾಮ ಪಂಚಾಯತ್ಗಳನ್ನು ಹೊಂದಿದೆ. 9,730 ಸ್ಥಾನಗಳೊಂದಿಗೆ 341 ಪಂಚಾಯತ್ ಸಮಿತಿಗಳು ಮತ್ತು 928 ಸ್ಥಾನಗಳಿರುವ 20 ಜಿಲ್ಲಾ ಪರಿಷತ್ತುಗಳನ್ನು ಹೊಂದಿದೆ. ಜುಲೈ 8 ರಂದು 61,000 ಬೂತ್ಗಳಲ್ಲಿ ಚುನಾವಣೆ ನಡೆದಿದ್ದು, 80.71 ರಷ್ಟು ಮತದಾನವಾಗಿದೆ. ಕನಿಷ್ಠ 21 ಜನರ ಸಾವಿಗೆ ಕಾರಣವಾದ ವ್ಯಾಪಕ ಹಿಂಸಾಚಾರದಿಂದ ಆಸ್ತಿಗೂ ಹಾನಿಯಾಗಿದೆ. ಮತಗಟ್ಟೆ ವಶಪಡಿಸಿಕೊಳ್ಳುವಿಕೆ, ಮತಪೆಟ್ಟಿಗೆ ಲೂಟಿ ಮತ್ತು ಮತಯಂತ್ರಗಳನ್ನು ನಾಶಪಡಿಸಿದ ಘಟನೆಗಳು ಹಲವಾರು ಜಿಲ್ಲೆಗಳಿಂದ ವರದಿಯಾಗಿವೆ.