ಇತಿಹಾಸ ಬರೆದ ಅಶ್ವಿನ್, ಅಪ್ಪ-ಮಗನ ವಿಕೆಟ್ ಪಡೆದ ಮೊದಲ ಭಾರತೀಯ ಬೌಲರ್
India vs West Indies: ಇದುವರೆಗೆ ಆರ್ ಅಶ್ವಿನ್ ಹೊರತುಪಡಿಸಿ, ಇಯಾನ್ ಬೋಥಮ್, ವಾಸಿಂ ಅಕ್ರಮ್, ಮಿಚೆಲ್ ಸ್ಟಾರ್ಕ್, ಸೈಮನ್ ಹಾರ್ಮರ್ ಟೆಸ್ಟ್ ಕ್ರಿಕೆಟ್ನಲ್ಲಿ ತಂದೆ ಮತ್ತು ಮಗನ ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಇತ್ತೀಚೆಗೆ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ (WTC) ಫೈನಲ್ ಪಂದ್ಯದಲ್ಲಿ ಆಡುವ ಬಳಗಕ್ಕೆ ಆಯ್ಕೆಯಾಗದೆ ಉಳಿದಿದ್ದ ಅನುಭವಿ ಸ್ಪಿನ್ನರ್ ಆರ್ ಅಶ್ವಿನ್ (R Ashwin), ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ (West Indies vs India 1st Test) ತಮ್ಮ ಸಾಮರ್ಥ್ಯ ಪ್ರದರ್ಶಿಸಿದ್ದಾರೆ. ಡೊಮಿನಿಕಾದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ನ ಮೊದಲ ದಿನದಾಟದಲ್ಲಿ ಟೀಮ್ ಇಂಡಿಯಾಗೆ ಮುನ್ನಡೆ ತಂದುಕೊಟ್ಟ ಅಶ್ವಿನ್, ದಾಖಲೆಯನ್ನೂ ಮಾಡಿದ್ದಾರೆ.
ವಿಂಡೀಸ್ ಬಳಗದ ಆರಂಭಿಕ ಆಟಗಾರ ಟಾಗೆನರೈನ್ ಚಂದ್ರಪಾಲ್ ಅವರನ್ನು 12 ರನ್ಗಳಿಗೆ ಔಟ್ ಮಾಡುವ ಮೂಲಕ, ಅಶ್ವಿನ್ ತಮ್ಮ ವಿಕೆಟ್ ಬೇಟೆಯನ್ನು ಆರಂಭಿಸಿದರು. ಆ ಬಳಿಕ ಮತ್ತೋರ್ವ ಆರಂಭಿಕ ಆಟಗಾರ ನಾಯಕ ಕ್ರೈಗ್ ಬ್ರಾಥ್ವೈಟ್ ಅವರನ್ನು ಕೂಡಾ 20 ರನ್ಗಳಿಗೆ ಪೆವಿಲಿಯನ್ಗೆ ಕಳುಹಿಸಿದರು.
ಅದ್ಭುತ ಪ್ರದರ್ಶನದೊಂದಿಗೆ ಅಶ್ವಿನ್ ವಿಶಿಷ್ಟ ದಾಖಲೆ ನಿರ್ಮಿಸಿದರು. ಟೆಸ್ಟ್ನಲ್ಲಿ ತಂದೆ ಮತ್ತು ಮಗನ ಜೋಡಿಯನ್ನು ಔಟ್ ಮಾಡಿದ ವಿಶ್ವ್ ಐದನೇ ಬೌಲರ್ ಎಂಬ ಖ್ಯಾತಿಗೆ ಪಾತ್ರರಾದರು. ಇಂದು ಅಶ್ವಿನ್ ಮೋಡಿಗೆ ಬಲಿಯಾದ ಟಗೆನರೈನ್, ವಿಂಡೀಸ್ನ ದಿಗ್ಗಜ ಬ್ಯಾಟರ್ ಶಿವನಾರಾಯಣ್ ಚಂದ್ರಪಾಲ್ ಅವರ ಮಗ. ಶಿವನಾರಾಯಣ್ ಅವರನ್ನು ಅಶ್ವಿನ್ ತಮ್ಮ ವೃತ್ತಿಜೀವನದಲ್ಲಿ ಹಲವು ಬಾರಿ ಔಟ್ ಮಾಡಿದ್ದರು.
ಅಶ್ವಿನ್ ಹೊರತುಪಡಿಸಿ ಈ ಹಿಂದೆ ಇಯಾನ್ ಬೋಥಮ್, ವಾಸಿಂ ಅಕ್ರಮ್, ಮಿಚೆಲ್ ಸ್ಟಾರ್ಕ್ ಮತ್ತು ಸೈಮನ್ ಹಾರ್ಮರ್ ಮಾತ್ರ ಟೆಸ್ಟ್ನಲ್ಲಿ ಈ ಸಾಧನೆ ಮಾಡಿದ್ದಾರೆ. ಅಂದರೆ ತಂದೆ ಮತ್ತು ಮಗನ ವಿಕೆಟ್ಗಳನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಪಡೆದಿದ್ದಾರೆ.
ಈ ನಡುವೆ ಟಾಗೆನರೈನ್ ಅವರನ್ನು ಕ್ಲೀನ್ ಬೌಲ್ಡ್ ಮಾಡುವ ಮೂಲಕ ಅಶ್ವಿನ್ ಟೆಸ್ಟ್ನಲ್ಲಿ ಅತಿ ಹೆಚ್ಚು ಬೌಲ್ಡ್ ಔಟ್ ಮಾಡಿದ ಭಾರತೀಯ ಬೌಲರ್ಗಳ ಪಟ್ಟಿಯಲ್ಲಿ ಭಾರತದ ಮಾಜಿ ನಾಯಕ ಹಾಗೂ ಕನ್ನಡಿಗ ಅನಿಲ್ ಕುಂಬ್ಳೆ ಅವರನ್ನು ಹಿಂದಿಕ್ಕಿದ್ದಾರೆ. ಅಶ್ವಿನ್ ಒಟ್ಟು 95 ಬಾರಿ ಕ್ಲೀನ್ ಬೌಲ್ಡ್ ಮಾಡುವ ಮೂಲಕ ಬ್ಯಾಟರ್ ಅನ್ನು ಔಟ್ ಮಾಡಿದ್ದಾರೆ. ಇದು ಕುಂಬ್ಳೆಗಿಂತ ಒಂದು ವಿಕೆಟ್ ಹೆಚ್ಚು. 88 ಬಾರಿ ಸ್ಟಂಪ್ಗಳನ್ನು ಉರುಳಿಸಿರುವ ಕಪಿಲ್ ದೇವ್ ಈ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಅತಿ ಹೆಚ್ಚು ಬೌಲ್ಡ್ ಔಟ್ ಮಾಡಿದ ಭಾರತೀಯರು
95 – ರವಿಚಂದ್ರನ್ ಅಶ್ವಿನ್
94 – ಅನಿಲ್ ಕುಂಬ್ಳೆ
88 – ಕಪಿಲ್ ದೇವ್
66 – ಮೊಹಮ್ಮದ್ ಶಮಿ