ಮಂಗಳೂರಿನ ಹಿರಿಯ ವಕೀಲ ಬಿ ಹರೀಶ್ ಆಚಾರ್ಯರವರ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ!
ಮಂಗಳೂರು, ಜು 12: ನಗರದ ಹಿರಿಯ ವಕೀಲ ಬಿ.ಹರೀಶ್ ಆಚಾರ್ಯ ಅವರ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಮಂಗಳವಾರದಂದು ಬಿಜೈ ಬಾರಬೈಲ್‌ನಲ್ಲಿರುವ ಅವರ ಮನೆಯಲ್ಲಿ ಪತ್ತೆಯಾಗಿದೆ.
60 ವರ್ಷ ವಯಸ್ಸಿನ ಹರೀಶ್ ಆಚಾರ್ಯ ಒಂಟಿಯಾಗಿ ವಾಸಿಸುತ್ತಿದ್ದರು. ಕಳೆದ ಶುಕ್ರವಾರ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದರು. ಆದರೆ ಸೋಮವಾರದಂದು ನ್ಯಾಯಾಲಯಕ್ಕೆ ಹಾಜರಾಗದ ಹಿನ್ನಲೆ, ಅವರ ಕಿರಿಯ ಸಹೋದ್ಯೋಗಿಗಳು ಅವರಿಗೆ ಕರೆ ಮಾಡಿದ್ದಾರೆ. ಕರೆ ಸ್ವೀಕರಿಸಿದ ಹಿನ್ನಲೆ ಮಂಗಳವಾರ ಕಿರಿಯ ವಕೀಲರು ಹರೀಶ್ ನಿವಾಸಕ್ಕೆ ಆಗಮಿಸಿದಾಗ ಅವರ ಮನೆಗೆ ಬೀಗ ಹಾಕಲಾಗಿತ್ತು. ನಂತರ ಪೊಲೀಸರು ಬಾಗಿಲು ತೆರೆದು ಒಳಪ್ರವೇಶಿಸಿ ನೋಡಿದಾಗ ಹರೀಶ್ ಆಚಾರ್ಯ ಶವ ಭಾಗಶಃ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಜುಲೈ 9 ರಂದು ಬೆಳಿಗ್ಗೆ 10 ಗಂಟೆ ಮತ್ತು ಜುಲೈ 11 ರಂದು ಬೆಳಿಗ್ಗೆ 11 ಗಂಟೆಯ ಮಧ್ಯಂತರ ಅವಧಿಯಲ್ಲಿ ಹರೀಶ್ ಹೃದಯಾಘಾತ ಅಥವಾ ಇತರ ಕಾರಣಗಳಿಂದ ಸಾವನ್ನಪ್ಪಿರಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಅವರ ಪಾರ್ಥಿವ ಶರೀರವನ್ನು ವೆನ್ಲಾಕ್ ಆಸ್ಪತ್ರೆಯಲ್ಲಿ ಶವಗಾರದಲ್ಲಿ ಇರಿಸಲಾಗಿದೆ. ಉರ್ವಾ ಪೊಲೀಸ್ ರಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅವರ ಸಂಬಂಧಿಕರು ಉರ್ವಾ ಪೊಲೀಸ್ ರಾಣೆಯನ್ನು 0824-2220822/2220800ಗೆ ಸಂಪರ್ಕಿಸಲು ಕೋರಲಾಗಿದೆ.
ಸುಳ್ಯ: ನಾಶದಂಚಿನಲ್ಲಿರುವ ಹಾರುವ ಅಳಿಲುಗಳನ್ನು ಬೇಟೆ -ಆರೋಪಿಗಳಿಗೆ ಶೋಧ
ಸುಳ್ಯ, ಜು 12: ಸಂಪಾಜೆ ವಲಯದ ಡಬ್ಬಡ್ಕ ಪಟ್ಟಿಘಾಟ್ ಮೀಸಲು ಅರಣ್ಯಕ್ಕೆ ಅಕ್ರಮವಾಗಿ ಪ್ರವೇಶಿಸಿ ವಿನಾಶದಂಚಿನಲ್ಲಿರುವ ಮಲಬಾರ್ ದೈತ್ಯ ಅಳಿಲು ಹಾಗೂ ಹಾರುವ ಅಳಿಲುಗಳನ್ನು ಬೇಟೆಯಾಡಿ ಮಾಂಸವನ್ನಾಗಿ ಪರಿವರ್ತಿಸಿದ ಪ್ರಕರಣವನ್ನು ಸಂಪಾಜೆ ವಲಯ ಅರಣ್ಯ ಇಲಾಖೆ ಬಯಲಿಗೆಳೆದಿದೆ.
ವನ್ಯ ಜೀವಿಗಳನ್ನು ಕೆಲವರು ಬೇಟೆಯಾಡಿರುವ ಬಗ್ಗೆ ಸಂಪಾಜೆ ವಲಯ ಅರಣ್ಯ ಇಲಾಖೆಗೆ ಖಚಿತ ಮಾಹಿತಿ ಲಭಿಸಿತ್ತು. ಅದರಂತೆ ಆರೋಪಿಗಳಾದ ದಬ್ಬಡ್ಕ ಗ್ರಾಮದ ಮದನ್ ಕುಮಾರ್(38), ಗಣಪತಿ ಬಿನ್ ಮಾಚಯ್ಯ(50) ಹಾಗೂ ಪ್ರಸನ್ನ ಕುಮಾರ್(35) ಎಂಬುವವರ ಮನೆಗಳ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿ ದಾಳಿ ನಡೆಸಿದರು. ಈ ಸಂದರ್ಭ ಮೂವರು ಆರೋಪಿಗಳು ಪರಾರಿಯಾಗಿದ್ದಾರೆ. ಮನೆಯಲ್ಲಿದ್ದ 2 ವನ್ಯಜೀವಿಗಳ ಮಾಂಸವನ್ನು ಪಾತ್ರೆ ಸಹಿತ ಅರಣ್ಯ ಇಲಾಖೆ ವಶಕ್ಕೆ ಪಡೆದಿದೆ. ಕೋವಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಪಿಗಳ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಟಿ.ಪೂವಯ್ಯ ಮತು ವಲಯ ಅರಣ್ಯಾಧಿಕಾರಿ ಮಧುಸೂದನ ಮಾರ್ಗದರ್ಶನದಲ್ಲಿ ಉಪ ವಲಯ ಅರಣ್ಯಾಧಿಕಾರಿ ನಿಸಾರ್ ಮುಹಮ್ಮದ್, ಗಸ್ತು ಅರಣ್ಯ ಪಾಲಕರಾದ ಚಂದ್ರಪ್ಪ, ಕಾರ್ತಿಕ್, ಮನೋಜ್ ಕುಮಾರ್, ದುರ್ಗಾಪ್ರಸಾದ್, ಗಗನ್, ಶರತ್, ಶಂಕರ ಅವರು ಕಾರ್ಯಾಚರಣೆ ನಡೆಸಿದ್ದಾರೆ.