ಹಾಸನ:ತಿಂಗಳ ಹಿಂದೆ ಮದ್ವೆಯಾದ ಜೋಡಿ ಸೇರಿ ಯಾತ್ರೆಗೆ ತೆರಳಿರೋ 7 ಮಂದಿ ಸುರಕ್ಷಿತ
ಹಾಸನ: ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ಜೋಡಿ ಸೇರಿ ಅಮರನಾಥ ಯಾತ್ರೆಗೆ (Amarnth Yatre) ತೆರಳಿರುವ 7 ಮಂದಿ ಸುರಕ್ಷಿತವಾಗಿದ್ದಾರೆ.
ಹಾಸನದ (Hassan) ನಿವಾಸಿ ದಿನೇಶ್ ಜೂ.7 ರಂದು ಅರ್ಪಿತಾ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಹೀಗಾಗಿ ಮದುವೆಯಾಗಿ ಒಂದು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಹನಿಮೂನ್ ಟ್ರಿಪ್ ಜೊತೆಗೆ ಅಮರನಾಥಯಾತ್ರೆಗೆ ಹೊರಟಿದ್ದರು. ಇವರ ಜೊತೆ ದಿನೇಶ್ ಸ್ನೇಹಿತರು ಹಾಗೂ ನವ ದಂಪತಿಗಳಾದ ರಕ್ಷಿತ್-ಕೃಪಾ, ನವೀನ್-ಶ್ವೇತಾ ಹಾಗೂ ಸಾಗರ್ ತೆರಳಿದ್ದರು.
ಜು.7 ರಂದು ಹಾಸನದಿಂದ ಹೊರಟು ಜು.8 ರಂದು ಬೆಂಗಳೂರಿನಿಂದ ವಿಮಾನ ಮೂಲಕ ಪ್ರಯಾಣ ಬೆಳೆಸಿದ್ದರು. ಭಾನುವಾರ ರಾತ್ರಿ ಕುಲುಮೊನಾಲಿಯಿಂದ ತನ್ನ ತಾಯಿಗೆ ಫೋನ್ ಮಾಡಿದ್ದ ದಿನೇಶ್ ಎಲ್ಲರೂ ಸೇಫ್ ಆಗಿದ್ದೀವಿ ಯಾರೂ ಗಾಬರಿಯಾಗಬೇಡಿ ಎಂದು ಹೇಳಿದ್ದರು. ನಂತರ ಸಹೋದರ ದೀಪುಗೂ ಫೋನ್ ಮಾಡಿದ್ದ ದಿನೇಶ್, ಭಾರೀ ಮಳೆಯಾಗುತ್ತಿದೆ. ಯಾರು ಹೆದರುವುದು ಬೇಡ. ಎಲ್ಲರೂ ಸುರಕ್ಷಿತವಾಗಿದ್ದೇವೆ ಎಲ್ಲರ ಕುಟುಂಬಕ್ಕೂ ವಿಷಯ ತಿಳಿಸು ಎಂದಿದ್ದರು.
ಅದಾದ ಬಳಿಕ ಎಲ್ಲರ ಫೋನ್ ಸ್ವಿಚ್ ಆಫ್ ಆಗಿದೆ. ಇತ್ತ ಮಕ್ಕಳು ಸಂಪರ್ಕಕ್ಕೆ ಸಿಗದಿರುವ ಕಾರಣ ಕುಟುಂಬಸ್ಥರು ಆತಂಕಗೊಂಡಿದ್ದರು. ದರೆ ಇದೀಗ ಎಲ್ಲರೂ ಸುರಕ್ಷಿತವಾಗಿದ್ದಾರೆ. ಸದ್ಯ ತಮ್ಮ ಪೋಷಕರಿಗೆ ಕರೆ ಮಾಡಿ ಎಲ್ಲರೂ ಸುರಕ್ಷಿತವಾಗಿದ್ದೇವೆ ಎಂದು ದಿನೇಶ್ ಹಾಗೂ ರಕ್ಷಿತ್ ಹೇಳಿದ್ದಾರೆ. ಕುಲುಮೊನಾಲಿಯಿಂದ ಇಪ್ಪತ್ತು ಕಿಲೋಮೀಟರ್ ದೂರದಲ್ಲಿ ಸುರಕ್ಷಿತವಾಗಿದ್ದಾರೆ.
ಭೂಕುಸಿತದಲ್ಲಿ ಇಡೀ ಕುಟುಂಬವನ್ನೇ ಕಳೆದುಕೊಂಡ; ಹೆಂಡತಿ-ಮಕ್ಕಳ ನೆನಪಿಗಾಗಿ ಬಡಜನರಿಗೆ ಮನೆ ನಿರ್ಮಿಸಿಕೊಟ್ಟ ಕುಟುಂಬ ಪ್ರೇಮಿ
ಮಡಿಕೇರಿ: ಅದು 2019.. ಕೊಡಗು (Kodagu) ಜಿಲ್ಲೆಯಲ್ಲಿ ಮಹಾಮಳೆಯ ಸಮಯ. ಜುಲೈ-ಆಗಸ್ಟ್ ತಿಂಗಳಲ್ಲಿ ಸುರಿದ ಬಾರಿ ಮಳೆಗೆ ಅ ಊರಿನಲ್ಲಿ ಬೆಟ್ಟವೇ ಕುಸಿದು ಸಾವು-ನೋವುಗಳು ಸಂಭವಿಸಿದವು. ಅದರಲ್ಲೂ ವ್ಯಕ್ತಿಯೊಬ್ಬರ ಹೆಂಡತಿ-ಮಕ್ಕಳು ಭೂಕುಸಿತದಿಂದ ಮರಣ ಹೊಂದಿದರು. ಅ ಘಟನೆಯಿಂದ ಹೊರಗೆ ಬಾರದೇ ಇರುವ ಅ ಊರಿನ ಜನರು ಇಂದಿಗೂ ಸಣ್ಣಮಳೆ ಬಂದರೂ ಭಯಪಡುತ್ತಾರೆ. ಅದರೆ ಅ ವ್ಯಕ್ತಿ ಮಾತ್ರ ತನ್ನ ಹೆಂಡತಿ-ಮಕ್ಕಳ ಮೇಲಿನ ಆಪಾರವಾದ ಪ್ರೀತಿಗಾಗಿ ಅವರಿಗೆ ಬಂದ ಪರಿಹಾರದ ಹಣದಲ್ಲಿ ಬಡ ಜನರಿಗೆ ಒಂದು ಸೂರು ಕಲ್ಪಿಸುವ ಮೂಲಕ ಜಿಲ್ಲೆಯ ಜನರಿಗೆ ಮಾದರಿಯಾಗಿದ್ದಾರೆ.
2019 ರಲ್ಲಿ ಕೊಡಗಿನ ವಿರಾಜಪೇಟೆ ತಾಲ್ಲೂಕಿನ ತೋರ ಗ್ರಾಮದಲ್ಲಿ ಮಹಾಮಳೆಗೆ ದುರ್ಘಟನೆಯೊಂದು ನಡೆದುಹೋಗಿತ್ತು. ಭಾರೀ ಮಳೆ ಇರುವ ಹಿನ್ನೆಲೆಯಲ್ಲಿ ಮನೆಯ ಮುಂದೆ ಪ್ರವಾಹ ಬರುತ್ತದೆ ಎಂದು ಬೆಟ್ಟದ ಮೇಲೆ ಆಶ್ರಯ ಪಡೆಯಲು ಹೊರಟಿದ್ದ ಜನರಿಗೆ ಪ್ರಕೃತಿಯೇ ಮುನಿಸಿಕೊಂಡು ಆ ಬೆಟ್ಟ ಪ್ರದೇಶವೇ ಭೂಕುಸಿತವಾಗಿತ್ತು. ಸುಮಾರು 10 ಜನರು ಮಣ್ಣಿನ ಅವಶೇಷಗಳಲ್ಲಿ ಸಿಲುಕಿ ಸಾವನ್ನಪ್ಪಿದ್ದರು. ಶವಗಳ ಹುಡುಕಾಟವು ಸುಮಾರು ವಾರಗಟ್ಟಲೇ ನಡೆಯಿತು.
ಅಂದು ಈ ಗ್ರಾಮದ ಪ್ರಭು ಕುಮಾರ್ ಎಂಬವರು ತನ್ನ ಹೆಂಡತಿ ಅನಸೂಯ ಹಾಗೂ ಮಕ್ಕಳಾದ ಅಮೃತ ಅದಿತಿಯನ್ನು ಕಳೆದುಕೊಂಡಿದ್ದರು. ಸರ್ಕಾರದಿಂದ ಪರಿಹಾರದ ಹಣವನ್ನು ಮೃತಪಟ್ಟವರ ಕುಟುಂಬಸ್ಥರಿಗೆ ನೀಡಲಾಗಿತ್ತು. ಪರಿಹಾರದ ಹಣವನ್ನು ಪಡೆದ ಪ್ರಭುಕುಮಾರ್, ಹೆಂಡತಿ-ಮಕ್ಕಳ ಹೆಸರಿನಲ್ಲಿ ಏನನ್ನಾದರೂ ಮಾಡಬೇಕು ಎಂದು ಯೋಚಿಸಿ, ತೋಟದ ಕಾರ್ಮಿಕರಾಗಿ ಸಂಕಷ್ಟದ ಬದುಕು ನಡೆಸುತ್ತಿರುವ ಬೋಜು, ಬೊಳ್ಳಕ್ಕಿ ಕುಟುಂಬಕ್ಕೆ ಒಂದು ಮನೆಯನ್ನು ನಿರ್ಮಿಸಿಕೊಟ್ಟಿದ್ದಾರೆ. ತನ್ನ ಹೆಂಡತಿ-ಮಕ್ಕಳ ಆಸೆಯಂತೆ ಬಡವರ್ಗದ ಜನರಿಗೆ ಸಹಾಯ ಮಾಡಬೇಕು ಎಂಬ ಹಂಬಲದಿಂದ ತನ್ನ ಆಸೆ ಈಡೇರಿಸುವ ಕೆಲಸ ಮಾಡಿದ್ದಾರೆ.
ಈ ತೋರಾ ಗ್ರಾಮದಲ್ಲೇ ಚಿಕ್ಕ ತೋಟವನ್ನು ಹೊಂದಿರುವ ಬೋಜು, ಬೊಳ್ಳಚ್ಚಿ ಅವರ ಮಕ್ಕಳಾದ ಶರಣು, ಶಾಂತಿ ಕುಟುಂಬ ಚಿಕ್ಕ ಮತ್ತು ಹಳೆಯದಾದ ಹುಲ್ಲಿನ ಗುಡಿಸಲಿನಲ್ಲಿ ಜೀವನ ಸಾಗಿಸುತ್ತಿತ್ತು. ಇದನ್ನು ಗಮನಿಸಿದ ಪ್ರಭುಕುಮಾರ್ 80 ಸಾವಿರ ವೆಚ್ಚದಲ್ಲಿ ಸಿಮೆಂಟ್ ಕಾಂಪೌಂಡ್ ಗೋಡೆಗಳನ್ನು ಬಳಸಿ, ಸಿಮೆಂಟ್ ಶೀಟುಗಳನ್ನು ಹೊದಿಸಿ ಬೆಚ್ಚನೆಯ ಸೂರೊಂದನ್ನು ನಿರ್ಮಿಸಿಕೊಟ್ಟಿದ್ದಾರೆ. ಮಳೆಗಾಲ ಬಂತೆಂದರೆ ಕೆಸರು ಗದ್ದೆಯಂತಾಗುತ್ತಿದ್ದ ನೆಲ, ಹುಲ್ಲಿನ ಸಂದಿಗಳಿಂದ ತೊಟ್ಟಿಕ್ಕುವ ನೀರ ಹನಿಗಳಲ್ಲಿ ನೆನೆಯುತ್ತಲೇ ಬದುಕು ದೂಡುತ್ತಿತ್ತು ಶರಣು, ಶಾಂತಿ ಕುಟುಂಬ. ಇವರನ್ನು ಕಂಡಾಗಲೆಲ್ಲಾ ಪ್ರಭುಕುಮಾರ್ ಪತ್ನಿ ಅನಸೂಯ ಮಮ್ಮಲ ಮರುಗುತಿದ್ದರಂತೆ. ಹೀಗಾಗಿ ಈ ಕುಟುಂಬಕ್ಕೇ ತನ್ನ ಮೊದಲ ಮಡದಿಯ ಸವಿನೆನಪಿಗಾಗಿ ಸೂರೊಂದನ್ನು ನಿರ್ಮಿಸಿಕೊಟ್ಟು, ಹೆಂಡತಿ-ಮಕ್ಕಳ ಆಶಯ ಈಡೇರಿಸುವ ಕೆಲಸ ಮಾಡಿದ್ದಾರೆ. ಮನೆ ಕಲ್ಪಿಸಿಕೊಟ್ಟ ಪ್ರಭು ಅವರ ಕಾರ್ಯಕ್ಕೆ ಈ ಬಡ ಕುಟುಂಬ ಚಿರರುಣಿ ಎನ್ನುತ್ತಿದ್ದಾರೆ.