ತಿ. ನರಸೀಪುರದಲ್ಲಿ ಯುವ ಬ್ರಿಗೇಡ್ ಕಾರ್ಯಕರ್ತನ ಕೊಲೆ
ಮೈಸೂರು: ಕ್ಷುಲ್ಲಕ ಕಾರಣಕ್ಕೆ ಗಲಾಟೆ ನಡೆದು ಯುವಾ ಬ್ರಿಗೇಡ್ (Yuva Brigade) ಕಾರ್ಯಕರ್ತ ಕೊಲೆಯಾಗಿರುವ ಘಟನೆ ಜಿಲ್ಲೆಯ ಟಿ.ನರಸೀಪುರ (T Narasipur) ಪಟ್ಟಣದ ಹೊರವಲಯದಲ್ಲಿ ನಡೆದಿದೆ. ವೇಣುಗೋಪಾಲ್ ನಾಯಕ್ (32) ಮೃತ ಯುವಾ ಬ್ರಿಗೇಡ್ ಕಾರ್ಯಕರ್ತ. ಮೃತ ಕಾರ್ಯಕರ್ತ ಟಿ.ನರಸೀಪುರದ ಶ್ರೀರಾಂಪುರ ಕಾಲೋನಿ ನಿವಾಸಿಯಾಗುದ್ದು, ನಿನ್ನೆ (ಜು.09) ಹನುಮ ಜಯಂತಿ ವೇಳೆ ಗುಂಪುಗಳ ನಡುವೆ ವಾಗ್ವಾದ ಆಗಿತ್ತು. ವಾಗ್ವಾದ ತಾರಕಕ್ಕೆ ಏರಿ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯವಾಗಿದೆ.
ಟಿ.ನರಸೀಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಗೋವಿಂದರಾಜು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಟಿ.ನರಸೀಪುರ ಠಾಣೆ ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
ಟಿ.ನರಸೀಪುರ ಸರ್ಕಾರಿ ಆಸ್ಪತ್ರೆಗೆ ಮೃತದೇಹ ರವಾನೆ ಮಾಡಲಾಗಿದ್ದು, ಆಸ್ಪತ್ರೆ ಮುಂದೆ ನೂರಾರು ಕಾರ್ಯಕರ್ತರು ಜಮಾಯಿಸಿದ್ದಾರೆ. ಅಲ್ಲದೇ ಆಸ್ಪತ್ರೆಗೆ ಚಿಂತಕ, ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಭೇಟಿ ನೀಡಿ ಮೃತ ಯುವಕನ ಅಂತಿಮ ದರ್ಶನ ಪಡೆದರು. ಬಳಿಕ ಮೃತ ಯುವಕನ ವೇಣುಗೋಪಾಲ್ ಕುಟುಂಬಕ್ಕೆ ಸಾಂತ್ವನ ಹೇಳಿದರು.
ಲಾಡ್ಜ್ ಮೇಲೆ ಪೊಲೀಸರ ದಾಳಿ:
ಕಲಬುರಗಿ: ಇಲ್ಲಿನ ಜೇವರ್ಗಿ ಕ್ರಾಸ್‌ನಲ್ಲಿರುವ ಕೈಗಾರಿಕಾ ವಸಾಹತು ಪ್ರದೇಶ (ಇಂಡಸ್ಟ್ರಿಯಲ್ ಏರಿಯಾ)ದಲ್ಲಿರುವ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆದಿದೆ ಎಂಬ ಮಾಹಿತಿ ಮೇಲೆ ಸ್ಟೇಷನ್ ಪೊಲೀಸ್ ಠಾಣೆಯ ಪಿಎಸ್‌ಐ ವಂದನಾ, ಸಿಬ್ಬಂದಿ ಮಹೇಶ್ವರಿ, ಮಲ್ಲನಗೌಡ, ರಾಘವೇಂದ್ರ ಮತ್ತು ಸಂಗಣ್ಣ ಅವರು ದಾಳಿ ನಡೆಸಿ ವೇಶ್ಯಾವಾಟಿಕೆಯಲ್ಲಿ ತೊಡಗಿದ್ದ ಚಿತ್ತಾಪುರ ತಾಲೂಕಿನ ಗುಂಡಗುರ್ತಿ ಗ್ರಾಮದ ಕರಣಕುಮಾರ ತಂದೆ ಮಾರುತಿ ದೊಡ್ಡಮನಿ ಎಂಬಾತನನ್ನು ವಶಕ್ಕೆ ಪಡೆದು ಮಹಿಳೆಯನ್ನು ರಕ್ಷಣೆ ಮಾಡಿದ್ದಾರೆ.
ಚಿದಾನಂದ ಪುಟಗಿ ಎಂಬಾತ ಲಾಡ್ಜ್ ಬಾಡಿಗೆ ಪಡೆದು ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ಕಡೆಯಿಂದ ಹೆಣ್ಣು ಮಕ್ಕಳನ್ನು ಕರೆಯಿಸಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಎಂಬುದು ಪೊಲೀಸರು ನಡೆಸಿದ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.
ಈ ಸಂಬಂಧ ಲಾಡ್ಜ್ ಮಾಲೀಕ ರಾಘವೇಂದ್ರ, ಮ್ಯಾನೇಜರ್ ಸಂದೀಪ್, ಹೆಣ್ಣು ಮಕ್ಕಳನ್ನು ಕರೆತಂದು ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಚಿದಾನಂದ ಪುಟಗಿ ವಿರುದ್ಧ ಪ್ರಕರಣ ದಾಖಲಾಗಿದೆ.
150 ಕೋಟಿ ಮೊತ್ತದ ಡ್ರಗ್ಸ್‌ಗೆ ಬೆಂಕಿಯಿಟ್ಟ ಕರ್ನಾಟಕ ಪೊಲೀಸರು
ತುಮಕೂರು: ರಾಜ್ಯದಲ್ಲಿ ಬೀಡುಬಿಟ್ಟಿರುವ ಡ್ರಗ್ಸ್ ದಂಧೆಯ ಕಡಿವಾಣಕ್ಕೆ ಸರ್ಕಾರಿಂದ ಕಠಿಣ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಕಳೆದ ಒಂದೂವರೆ ತಿಂಗಳಲ್ಲಿ ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆಯಲಾದ 150 ಕೋಟಿ ರೂ. ಬೆಲೆಯ ಡ್ರಗ್ಸ್ ವಸ್ತುಗಳನ್ನು ಪೊಲೀಸರು ಸುಟ್ಟು ಹಾಕಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾಹಿತಿ ನೀಡಿದ್ದಾರೆ.
ಈ ಕುರಿತು ತುಮಕೂರು ಜಿಲ್ಲೆಯ ಕೊರಟಗೆರೆಯ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಡ್ರಗ್ಸ್ ದಂಧೆ ಕಡಿವಾಣಕ್ಕೆ ನಿರ್ಧಾರ ಮಾಡಿದ್ದೇನೆ. ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದ ಪೊಲೀಸರು 150 ಕೋಟಿ ರೂ.ಗೂ ಅಧಿಕ ಮಾದಕ ವಸ್ತುಗಳನ್ನು ಸುಟ್ಟು ಹಾಕಿದ್ದಾರೆ. ಮೊದಲೆಲ್ಲಾ ಹಳ್ಳಿಗಳಲ್ಲಿ ಟೊಮ್ಯಾಟೊ ಗಿಡಗಳ ಮಧ್ಯೆ ಗಾಂಜಾ ಬೆಳೆಯುತಿದ್ದರು. ನಂತರ, ಅದನ್ನ ಒಣಗಿಸಿ ಸೇವಿಸುತ್ತಿದ್ದರು ಈಗ ಮಾತ್ರೆಗಳ ಬಂದಿರುವುದು ದುರಾದೃಷ್ಟಕರ ಎಂದು ಹೇಳಿದರು.
ಬೆಳಗಾವಿ:ಮನೆಯಲ್ಲೇ ದಂಪತಿಯ ಭೀಕರ ಹತ್ಯೆ
ಚಿಕ್ಕೋಡಿ: ಮಾರಕಾಸ್ತ್ರಗಳಿಂದ ಕೊಚ್ಚಿ ದಂಪತಿಯ (couple) ಬರ್ಬರ ಹತ್ಯೆ ಮಾಡಿದ್ದು, ತಡವಾಗಿ ಬೆಳಕಿಗೆ ಬಂದಿರುವಂತಹ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಾವನೂರ ಗ್ರಾಮದಲ್ಲಿ ನಡೆದಿದೆ. ಗಜೇಂದ್ರ ವಣ್ಣೂರೆ(60), ಪತಿ ದ್ರಾಕ್ಷಾಯಿಣಿ ವಣ್ಣೂರೆ(48) ಮೃತರು. ಜುಲೈ 7ರ ಮಧ್ಯರಾತ್ರಿ ಮನೆಯಲ್ಲೇ ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ನಿನ್ನೆಯಿಂದ ಬಾಗಿಲು ತೆರೆಯದ ಹಿನ್ನೆಲೆ ಸ್ಥಳೀಯರಿಂದ ಪೊಲೀಸರಿಗೆ ಮಾಹಿತಿ ನೀಡಿದ್ದು, ಇಂದು ಬಾಗಿಲು ತೆಗೆದು ನೋಡಿದಾಗ ದಂಪತಿ ಕೊಲೆ ಆಗಿರುವುದು ಬೆಳಕಿಗೆ ಬಂದಿದೆ. ಕೇಸ್ ದಾಖಲಿಸಿ ಕೊಲೆ ಆರೋಪಿಗಳಿಗಾಗಿ ಯಮಕನಮರಡಿ ಪೊಲೀಸ್ರು ಹುಡುಕಾಟ ಆರಂಭಿಸಿದ್ದಾರೆ.