ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕ ಸರ್ಕಾರ ಅನುಮತಿ!
ನ್ಯೂಯಾರ್ಕ್ (ಜುಲೈ 1, 2023): ರಸ್ತೆಯ ಮೇಲೆ ಕಾರು ಓಡಿಸಬೇಕು ಎಂದರೆ ಟ್ರಾಫಿಕ್ ಸಮಸ್ಯೆಯೆ? ಹಾಗಿದ್ದರೆ ಇನ್ನು ಈ ಚಿಂತೆ ಇಲ್ಲ. ಅಲೆಫ್ ಕಾರು ಕಂಪನಿಯವರು ತಯಾರು ಮಾಡಿದ್ದ ವಿಶ್ವದ ಮೊದಲ ಹಾರುವ ಕಾರಿಗೆ ಅಮೆರಿಕದಲ್ಲಿ ಅನುಮತಿ ನೀಡಲಾಗಿದೆ. ಅಮೆರಿಕದ ಏವಿಯೇಶನ್ ಆಡಳಿತ ಸಂಸ್ಥೆ ಈ ಅನುಮತಿಯನ್ನು ನೀಡಿದ್ದು, ಈ ರೀತಿಯ ಕಾರಿಗೆ ಅನುಮತಿ ಸಿಕ್ಕಿದ್ದು ಇದೇ ಮೊದಲು.
2022ರಲ್ಲಿ ಈ ಕಾರನ್ನು ಅನಾವರಣಗೊಳಿಸಿದ್ದು, ಸಾರ್ವಜನಿಕ ರಸ್ತೆಗಳನ್ನು ಓಡಿಸಬಹುದು ಎಂದು ಕಂಪನಿ ಹೇಳಿತ್ತು. ಅಲ್ಲದೇ ಇದು ಲಂಬಾಕಾರದಲ್ಲಿ ಟೇಕಾಫ್ ಮತ್ತು ಲ್ಯಾಂಡ್ ಆಗುವ ಸಾಮರ್ಥ್ಯವನ್ನು ಹೊಂದಿದ್ದು, ಟ್ರಾಫಿಕ್, ಅಪಘಾತಗಳು ಸಂಭವಿಸಿದಾಗ ಸರಾಗವಾಗಿ ಈ ಕಾರಿನಲ್ಲಿ ಪ್ರಯಾಣಿಸಬಹುದು ಎಂದು ಕಂಪನಿ ಹೇಳಿತ್ತು.
ಈ ಕಾರಿನ ಬೆಲೆ 8.6 ಕೋಟಿ ರೂ. ಆಗಿದ್ದು, ಸಂಪೂರ್ಣವಾಗಿ ಎಲೆಕ್ಟ್ರಿಕ್ ಕಾರ್ ಆಗಿದೆ. ಇದು ಸುಮಾರು 322 ಕಿ.ಮೀ. ದೂರ ಹಾರುವ ಸಾಮರ್ಥ್ಯ ಹೊಂದಿದ್ದು, ಮುಂಗಡವಾಗಿ ಕಾಯ್ದಿರಿಸಿದ ಬಳಿಕ ಉತ್ಪಾದನೆಯನ್ನು ಆರಂಭಿಸಲಾಗುವುದು ಎಂದು ಕಂಪನಿ ಹೇಳಿದೆ. 2025ಕ್ಕೆ ಈ ಕಾರುಗಳು ಲಭ್ಯವಾಗುವ ಸಾಧ್ಯತೆಗಳಿವೆ.