Byju’sಗೆ ಗುಡ್‌ಬೈ – Dream11 ತೆಕ್ಕೆಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ
ಮುಂಬೈ: ಕ್ರಿಕೆಟ್ ಅಭಿಮಾನಿಗಳ ಜನಪ್ರಿಯ ಗೇಮಿಂಗ್ ಪ್ಲಾಟ್‌ಫಾರ್ಮ್ ಡ್ರೀಮ್-11 (Dream11) ಭಾರತ ಕ್ರಿಕೆಟ್ ತಂಡದ ಜೆರ್ಸಿ (Jerseys) ಪ್ರಾಯೋಜಕತ್ವ ಪಡೆದುಕೊಂಡಿದೆ. ಮುಂದಿನ 3 ವರ್ಷಗಳ ಅವಧಿಗೆ ಪ್ರಾಯೋಜಕತ್ವದ ಹಕ್ಕನ್ನು ಪಡೆದುಕೊಂಡಿರುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಘೋಷಿಸಿದೆ.
ಬೈಜೂಸ್‌ಗೆ (Byju’s) ಬದಲಾಗಿ ಡ್ರೀಮ್-11 ಜೆರ್ಸಿ ಪ್ರಾಯೋಜಕತ್ವ ತನ್ನದಾಗಿಸಿಕೊಂಡಿದೆ. ಇನ್ಮುಂದೆ ಟೀಂ ಇಂಡಿಯಾ (Team India) ಡ್ರೀಮ್-11 ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ. ಇದೇ ತಿಂಗಳಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಟೆಸ್ಟ್ ಸರಣಿ ಮೂಲಕ ಭಾರತ ಡ್ರೀಮ್-11 ಜೆರ್ಸಿಯೊಂದಿಗೆ ಕಾಣಿಸಿಕೊಳ್ಳಲಿದೆ.
ಈವರೆಗೆ ಟೀಂ ಇಂಡಿಯಾ ಜೆರ್ಸಿ (Team India Jerseys) ಪ್ರಾಯೋಜಕತ್ವ ವಹಿಸಿದ್ದ ಬೈಜೂಸ್ ಕಳೆದ ಮಾರ್ಚ್ ತಿಂಗಳಲ್ಲಿ ಒಪ್ಪಂದದಿಂದ ಹಿಂದೆ ಸರಿಯಲು ನಿರ್ಧರಿಸಿತು. ಅಂದಿನಿಂದ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕರಿಲ್ಲದೇ ಕಣಕ್ಕಿಳಿದಿತ್ತು. ಇತ್ತೀಚೆಗೆ ನಡೆದ ವಿಶ್ವಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದಲ್ಲೂ ಟೀಂ ಇಂಡಿಯಾ ಪ್ರಾಯೋಜಕತ್ವದಿಂದ ವಂಚನೆಯಾಗಿತ್ತು.
ಬೈಜೂಸ್ ಪ್ರಾಯೋಜಕತ್ವದಲ್ಲಿ ಬಿಸಿಸಿಐ ದ್ವಿಪಕ್ಷೀಯ ಸರಣಿಯಲ್ಲಿ ಪ್ರತಿ ಪಂದ್ಯಕ್ಕೆ ಸುಮಾರು 5.50 ಕೋಟಿ ರೂ. ಜೆರ್ಸಿಯಲ್ಲಿ ಲೋಗೋವನ್ನ ಇರಿಸಿದ್ದರೆ, ಐಸಿಸಿ ಟೂರ್ನಿ ಪಂದ್ಯಗಳಲ್ಲಿ ಈ ಮೊತ್ತವು 1.70 ಕೋಟಿ ರೂ.ಗೆ ಇಳಿದಿತ್ತು. ಆದ್ರೆ ಡ್ರೀಮ್-11 ಒಪ್ಪಂದಕ್ಕೆ ಹೋಲಿಸಿದರೆ, ಬೈಜೂಸ್‌ಗಿಂತಲೂ ಕಡಿಮೆ ಮೊತ್ತ ಬೀಳುತ್ತದೆ. ಡ್ರೀಮ್-11 358 ಕೋಟಿ ರೂ.ಗಳಿಗೆ ಟೀಂ ಇಂಡಿಯಾ ಜೆರ್ಸಿ ಪ್ರಾಯೋಜಕತ್ವದ ಹಕ್ಕನ್ನು ಖರೀದಿಸಿದೆ.
ಇದಕ್ಕೆ ಸಂತಸ ವ್ಯಕ್ತಪಡಿಸಿರುವ ಸಹ-ಸಂಸ್ಥಾಪಕ ಮತ್ತು ಸಿಇಒ ಹರ್ಷ್ ಜೈನ್, ಭಾರತೀಯ ಕ್ರೀಡಾ ಪರಿಸರ ವ್ಯವಸ್ಥೆಯನ್ನು ಬೆಂಬಲಿಸಲು, ಅದನ್ನು ಮುಂದುವರಿಸಲು ನಾವು ಎದುರು ನೋಡುತ್ತಿದ್ದೇವೆ. ಅಂತಹ ಅವಕಾಶ ಈಗ ನಮಗೆ ಸಿಕ್ಕಿರೋದು ಸಂತಸ ತಂದಿದೆ. ಕೋಟ್ಯಂತರ ಕ್ರೀಡಾಭಿಮಾನಿಗಳಿಗೆ ನಾವು ಧನ್ಯವಾದ ಸಲ್ಲಿಸುತ್ತೇವೆ ಎಂದು ಹೇಳಿದ್ದಾರೆ.