ಕಂಗನಾ ರಣಾವತ್ ವಿರುದ್ಧ ತಿರುಗಿ ಬಿದ್ದ ನವಾಜುದ್ದೀನ್ ಸಿದ್ದಿಕಿ ಪತ್ನಿ ಅಲಿಯಾ!
ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ (Nawazuddin Siddiqui) ಪತ್ನಿ ಅಲಿಯಾ ಸಿದ್ದಿಕಿ, ಖ್ಯಾತ ನಟಿ ಕಂಗನಾ ರಣಾವತ್ (Kangana Ranaut) ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಂಗನಾ ವಿರುದ್ಧ ಸಿಡಿಮಿಡಿಗೊಳ್ಳುವುದಕ್ಕೂ ಕಾರಣವಿದೆ. ಈ ಹಿಂದೆ ನವಾಜುದ್ದೀನ್ ಸಿದ್ದಿಕಿ ಪರ ಕಂಗಣಾ ಬ್ಯಾಟಿಂಗ್ ಮಾಡಿದ್ದರು. ಅಲಿಯಾ ವಿರುದ್ಧ ಮಾತನಾಡಿದ್ದರು. ನವಾಜುದ್ದೀನ್ ಮತ್ತು ಅಲಿಯಾ ದಾಂಪತ್ಯದಲ್ಲಿ ಬಿರುಕು ಬಿದ್ದಾಗ, ಅಲಿಯಾ ವಿರೋಧಿಸಿ ಕಂಗನಾ ಮಾತನಾಡಿದ್ದರು. ಇದೀಗ ಅದಕ್ಕೆ ತಕ್ಕ ಉತ್ತರ ನೀಡಿದ್ದಾರೆ ಅಲಿಯಾ.
ಕಂಗನಾ ರಣಾವತ್ ಎಲ್ಲದಕ್ಕೂ ಮೂಗು ತೂರಿಸುತ್ತಾರೆ. ಅವರ ಬದುಕಿನಲ್ಲೇ ನಾನಾ ತಪ್ಪುಗಳಿವೆ. ಅವುಗಳನ್ನು ತಿದ್ದಿಕೊಂಡರೆ ಸಾಕು. ಬೇರೆಯವರ ವಿಷಯದಲ್ಲಿ ಕಂಗನಾ ಬಾಯಿ ಹಾಕುವುದು ಒಳ್ಳೆಯದಲ್ಲ. ಕಂಗನಾ ಏನು ಸುಪ್ರೀಂ ಅಲ್ಲಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ. ಬೇರೆಯವರ ವಿಷಯದಲ್ಲಿ ಕಂಗನಾ ಮೂಗು ತೂರಿಸುವುದರ ಬದಲು, ಒಳ್ಳೊಳ್ಳೆ ಕೆಲಸಗಳನ್ನು ಮಾಡಲಿ ಎಂದು ಸಲಹೆಯನ್ನೂ ನೀಡಿದ್ದಾರೆ.
ಅಲಿಯಾ (Alia Siddiqui) ಈ ರೀತಿ ತಿರುಗಿ ಬೀಳುವುದು ಹೊಸದೇನೂ ಅಲ್ಲ. ಮೊನ್ನೆಯಷ್ಟೇ ಬಿಗ್ ಬಾಸ್ ಮನೆಯಿಂದ ಹೊರ ಬೀಳುತ್ತಿದ್ದಂತೆಯೇ ಆ ಕಾರ್ಯಕ್ರಮವನ್ನು ನಿರೂಪಿಸುವ ಸಲ್ಮಾನ್ ಖಾನ್ ವಿರುದ್ಧವೂ ಬಾಂಬ್ ಸಿಡಿಸಿದ್ದರು. ಬಿಗ್ ಬಾಸ್ (Big Boss) ಶೋ ಮೇಲೆಯೇ ಪಕ್ಷಪಾತದ ಆರೋಪ ಮಾಡಿದ್ದರು. ನನ್ನೊಳಗಿನ ಹಲವು ಸತ್ಯಗಳು ಆಚೆ ಬರುತ್ತಿದ್ದವು. ಅದು ಸಲ್ಮಾನ್ ಖಾನ್ ಗೆ ಇಷ್ಟವಿರಲಿಲ್ಲ. ಹಾಗಾಗಿ ಎರಡನೇ ವಾರಕ್ಕೆ ನನ್ನನ್ನು ಮನೆಯಿಂದ ಆಚೆ ಹಾಕಿದರು ಎಂದು ನೇರವಾಗಿಯೇ ಆರೋಪ ಮಾಡಿದ್ದರು.
ಆಲಿಯಾ ಸಿದ್ದಿಕಿ ಬಾಲಿವುಡ್ ಖ್ಯಾತ ನಟ ನವಾಜುದ್ದೀನ್ ಸಿದ್ದಿಕಿ ಅವರ ಮಾಜಿ ಪತ್ನಿ. ನವಾಜುದ್ದೀನ್ ಅವರು ಸಲ್ಮಾನ್ ಖಾನ್ (Salman Khan)ಗೆ ತೀರಾ ಆಪ್ತರು. ಬಿಗ್ ಬಾಸ್ ಮನೆಯಲ್ಲಿ ಪತಿ ನವಾಜುದ್ದೀನ್ ಬಗ್ಗೆ ಹಲವಾರು ವಿಚಾರಗಳನ್ನು ಮಾತನಾಡುವುದಕ್ಕೆ ಶುರು ಮಾಡಿದ್ದರು. ತಮ್ಮ ಪತಿ ಎಂಥವರು ಎನ್ನುವ ವಿಚಾರವನ್ನು ಹೇಳಿಕೊಳ್ಳಲು ಹೊರಟಿದ್ದರು. ಅದನ್ನು ತಡೆಯುವುದಕ್ಕಾಗಿಯೇ ತಮ್ಮನ್ನು ಮನೆಯಿಂದ ಆಚೆ ಹಾಕಲಾಗಿದೆ ಎಂದು ಆಲಿಯಾ ಮಾತನಾಡಿದ್ದಾರೆ
ನವಾಜುದ್ದೀನ್ ಜೊತೆಗಿನ ಬಾಂಧವ್ಯವನ್ನು ಮುರಿದುಕೊಂಡು ಆಲಿಯಾ ದೂರವಿದ್ದಾರೆ. ಈಗಾಗಲೇ ಪತಿಯ ಬಗ್ಗೆ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ. ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ. ಅವೆಲ್ಲವನ್ನೂ ಆಲಿಯಾ ದೊಡ್ಮನೆಯಲ್ಲಿ ಹೇಳಿಕೊಳ್ಳುತ್ತಿದ್ದರು. ಮೊದಲ ದಿನವೇ ಒಂದಷ್ಟು ಸಂಗತಿಗಳನ್ನು ಬಹಿರಂಗ ಪಡಿಸಿದ್ದರು. ಇನ್ನೂ ಹಲವು ವಿಷಯಗಳನ್ನು ಹಂಚಿಕೊಳ್ಳುವುದಾಗಿಯೂ ಅವರು ತಿಳಿಸಿದ್ದರು.
ನವಾಜುದ್ದೀನ್ ವಿಷಯಗಳು ಆಚೆ ಬರುತ್ತವೆ ಎನ್ನುವ ಕಾರಣದಿಂದಾಗಿಯೇ ಸಲ್ಮಾನ್ ಖಾನ್ ಮಧ್ಯ ಪ್ರವೇಶ ಮಾಡಿ ತಮ್ಮನ್ನು ಮನೆಯಿಂದ ಹೊರ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ನಾನು ಸುಮ್ಮನೆ ಇರಲಾರೆ. ಆಚೆ ಬಂದರೂ, ನನ್ನ ಜೀವನದಲ್ಲಿ ನಡೆದ ಸಂಗತಿಗಳನ್ನು ತಿಳಿಸುತ್ತಲೇ ಇರುತ್ತೇನೆ ಅಂದಿದ್ದಾರೆ ಆಲಿಯಾ. ಇಂತಹ ಪಕ್ಷಪಾತಗಳು ಶೋಗಳಲ್ಲಿ ಇರಬಾರದು ಎಂದು ಅವರು ಸಲಹೆಯನ್ನೂ ನೀಡಿದ್ದಾರೆ.