ನೋಟಿನ ಕಂತೆಗಳೊಂದಿಗೆ ಪತ್ನಿ, ಮಕ್ಕಳ ಸೆಲ್ಫಿ; ಫೋಟೋ ವೈರಲ್, ಅಧಿಕಾರಿಗೆ ವರ್ಗಾವಣೆ ಮಾಡಿ ತನಿಖೆ!
ಲಖನೌ: ನೋಟಿನ ಕಂತೆಗಳೊಂದಿಗೆ ಪತ್ನಿ ಮತ್ತು ಮಕ್ಕಳು ಸೆಲ್ಫಿ ತೆಗೆದುಕೊಂಡ ಫೋಟೋ ವೈರಲ್ ಆದ ಬೆನ್ನಲ್ಲೇ ಪೊಲೀಸ್ ಅಧಿಕಾರಿಯೊಬ್ಬರನ್ನು ತಕ್ಷಣ ವರ್ಗಾವಣೆ ಮಾಡಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದಿದೆ.
500 ರೂಪಾಯಿ ನೋಟಿನ ಕಂತೆಗಳನ್ನು ಮಂಚದ ಮೇಲೆ ಜೋಡಿಸಿ ಅಧಿಕಾರಿಯ ಪತ್ನಿ ಮತ್ತು ಮಕ್ಕಳಿಬ್ಬರು ಸೆಲ್ಫಿ ತೆಗೆದುಕೊಂಡಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಸಾಕಷ್ಟು ಆಕ್ರೋಶಗಳು ವ್ಯಕ್ತವಾಗುತ್ತಿದೆ. ಇದು ಭ್ರಷ್ಟ ವ್ಯವಸ್ಥೆಗೆ ಹಿಡಿದ ಕನ್ನಡಿ ಎಂಬ ಟೀಕೆಗಳು ಕೇಳಿಬರುತ್ತಿವೆ. ಇದರ ಬೆನ್ನಲ್ಲೇ ಅಧಿಕಾರಿಯನ್ನು ವರ್ಗಾವಣೆ ಮಾಡಿ ತನಿಖೆ ಆರಂಭಿಸಲಾಗಿದೆ.
ಸುಮಾರು 14 ಲಕ್ಷ ರೂ. ಮೌಲ್ಯದ ಹಣ ಕತೆಗಳೊಂದಿಗೆ ಸೆಲ್ಫಿ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಹಿರಿಯ ಅಧಿಕಾರಿಗಳು ತನಿಖೆಗೆ ಆದೇಶಿಸಿದ್ದು, ಠಾಣೆಯ ಉಸ್ತುವಾರಿಯಾಗಿದ್ದ ರಮೇಶ್ ಚಂದ್ರ ಸಹನಿ ಎಂಬುವರನ್ನು ಬೇರೆಡೆಗೆ ವರ್ಗಾಯಿಸಲಾಗಿದೆ. ಕುಟುಂಬಬದ ಆಸ್ತಿಯನ್ನು 2021ರ ನವೆಂಬರ್ 14ರಂದು ಮಾರಾಟ ಮಾಡಿದಾಗ ಬಂದಂತಹ ಹಣದ ಜೊತೆ ತೆಗೆದಂತಹ ಸೆಲ್ಫಿ ಫೋಟೋ ಅದಾಗಿದೆ ಎಂದು ಸಹನಿ ಅವರು ಸಮರ್ಥನೆ ನೀಡಿದ್ದಾರೆ.ಆದರೆ, ಸಾಮಾಜಿಕ ಜಾಲತಾಣದಲ್ಲಿ ಸಹನಿ ಅವರ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗಿದೆ. ತನಿಖೆಯಲ್ಲಿ ಅಕ್ರಮ ಬೆಳಕಿಗೆ ಬಂದಲ್ಲಿ ಸಹನಿ ಕೆಲಸಕ್ಕೆ ಕುತ್ತು ಬರುವ ಸಾಧ್ಯತೆ ದಟ್ಟವಾಗಿದೆ.