ಜಾತಿಗೆ ಬಲಿಯಾಯ್ತು ಎರಡು ಜೀವ!: ಮಗಳ ಕತ್ತು ಹಿಸುಕಿ ಕೊಂದ ತಂದೆ; ನೊಂದ ಪ್ರಿಯಕರ ಸಾವಿಗೆ ಶರಣು!
ಕೋಲಾರ: ಅಂತರ್ಜಾತಿ ಯುವಕ-ಯುವತಿಯ ಮಧ್ಯೆ ಮೂಡಿದ ಪ್ರೀತಿಗೆ ಜಾತಿಯೇ ಅಡ್ಡಿಯಾಗಿದ್ದಲ್ಲದೆ, ಕೊನೆಗೆ ಎರಡು ಜೀವಗಳು ಬಲಿಯಾಗಿವೆ. ಯುವತಿಯನ್ನು ತಂದೆಯೇ ಕತ್ತು ಹಿಸುಕಿ ಕೊಂದರೆ, ಪ್ರೇಯಸಿಯನ್ನು ಕಳೆದುಕೊಂಡು ನೊಂದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕು ಕಾಮಸಮುದ್ರ ಹೋಬಳಿ ಬೋಡಗುರ್ಕಿ ಗ್ರಾಮದಲ್ಲಿ ಈ ದುರಂತ ಪ್ರಕರಣ ಸಂಭವಿಸಿದೆ. ಗೊಲ್ಲ ಸಮುದಾಯಕ್ಕೆ ಸೇರಿದ ಕೀರ್ತಿ (20) ತಂದೆಯಿಂದಲೇ ಕೊಲೆಯಾದ ಯುವತಿ. ಪರಿಶಿಷ್ಟ ಜಾತಿಗೆ ಸೇರಿದ ಗಂಗಾಧರ್ (24) ಆತ್ಮಹತ್ಯೆ ಮಾಡಿಕೊಂಡ ಪ್ರಿಯಕರ.ಇವರಿಬ್ಬರೂ ಒಂದು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಪ್ರೀತಿಯ ವಿಚಾರವನ್ನು ಕೀರ್ತಿಯ ತಂದೆ ಕೃಷ್ಣಮೂರ್ತಿಗೆ ತಿಳಿಸಿದ ಗಂಗಾಧರ್, ಮದುವೆ ಮಾಡಿಕೊಡಲು ಕೇಳಿದ್ದಾರೆ. ಆದರೆ ಜಾತಿಯ ಕಾರಣಕ್ಕೆ ಕೀರ್ತಿಯ ಮನೆಯವರು ಈ ಮದುವೆಗೆ ನಿರಾಕರಿಸಿದ್ದರು.
ಕೀರ್ತಿಯ ಪೋಷಕರು ಗಂಗಾಧರ್‌ನನ್ನು ಮರೆತುಬಿಡು ಎಂದು ಹಲವು ಬಾರಿ ಬುದ್ಧಿವಾದ ಹೇಳಿದ್ದಾರೆ. ಅದಾಗ್ಯೂ ಇಬ್ಬರ ನಡುವಿನ ಪ್ರೀತಿ ಮುಂದುವರಿದಿತ್ತು. ಇದೇ ವಿಚಾರವಾಗಿ ಕೀರ್ತಿ ಹಾಗೂ ಆಕೆಯ ತಂದೆ ನಡುವೆ ವಾಗ್ವಾದ ನಡೆದಿದ್ದು, ಕೋಪಗೊಂಡ ಕೃಷ್ಣಮೂರ್ತಿ (42) ಮಗಳ ಕತ್ತು ಹಿಸುಕಿ ಸಾಯಿಸಿದ್ದಾರೆ.
ಪ್ರೀತಿಯ ಕೀರ್ತಿ ಸಾವಿಗೀಡಾದ್ದರಿಂದ ತೀವ್ರವಾಗಿ ನೊಂದ ಗಂಗಾಧರ್ ಅದೇ ಗ್ರಾಮದ ಬಳಿ ಚಲಿಸುತ್ತಿದ್ದ ರೈಲಿಗೆ ಸಿಲುಕಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕಾಮಸಮುದ್ರ ಪೊಲೀಸ್ ಠಾಣೆಯಲ್ಲಿ ಕೃಷ್ಣಮೂರ್ತಿ ವಿರುದ್ಧ ಪ್ರಕರಣ ದಾಖಲಾಗಿದೆ.