ಮಗ- ಸೊಸೆಯಿಂದಲೇ ಮಾನಸಿಕ ಕಿರುಕುಳ; ದೂರು ದಾಖಲಿಸಿದ ಹಿರಿಯ ನಟಿ ಶ್ಯಾಮಲಾದೇವಿ
ಸ್ಯಾಂಡಲ್ವುಡ್ನ ಹಿರಿಯ ನಟಿ ಶ್ಯಾಮಲಾದೇವಿ ಅವರು ಪೊಲೀಸ್ ಠಾಣೆ ಮಟ್ಟಿಲೇರಿದ್ದಾರೆ. ಹೌದು, ಸ್ವಂತ ಮಗ ಮತ್ತು ಸೊಸೆಯಿಂದಲೇ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಒಳಗಾಗಿರುವ ನಟಿ ಶ್ಯಾಮಲಾದೇವಿ, ಮಗ- ಸೊಸೆ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ‘ಮಗ ನನಗೆ ಕೊಲೆ ಬೆದರಿಕೆ ಹಾಕುತ್ತಾನೆ’ ಅಂತಲೂ ಆರೋಪಿಸಿದ್ದಾರೆ. ಈ ಸಂಬಂಧ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಮಗ- ಸೊಸೆ ವಿರುದ್ಧ ದೂರು ದಾಖಲು ಮಾಡಿರುವ ಶ್ಯಾಮಲಾದೇವಿ, ತಮ್ಮ ಕಷ್ಟಗಳನ್ನು ವಿವರವಾಗಿ ಹೇಳಿಕೊಂಡಿದ್ದಾರೆ.
ನನ್ನ ಮಗ ಚೆನ್ನಾಗಿಯೇ ಇದ್ದ. ಅವನ ಮದುವೆ ಆಗಿ ಐದು ವರ್ಷ ಆಗಿದೆ. ಸೊಸೆ ಯಾವಾಗಲೂ ಜಗಳ ಮಾಡೋದು, ವಾಪಸ್ ಹೋಗುವುದು, ಬರೀ ಇದೇ ಮಾಡುತ್ತಿದ್ದಳು. ನಾನು ಕೂಡ ಸುಮ್ಮನೇ ಇದ್ದೆ. ಆದರೆ ಈಗ ಮಗ- ಸೊಸೆ ಒಂದಾಗಿ, ನನಗೆ ಕಿರುಕುಳ ನೀಡುತ್ತಿದ್ದಾರೆ. ‘ನೀವು ಮನೆ ಬಿಟ್ಟು ಹೋಗಿ, ನನಗೂ ಟಾರ್ಚರ್ ಬೇಡ, ನಿಮಗೂ ಟಾರ್ಚರ್ ಬೇಡ. ಹೊರಗಡೆ ಆರಾಮಾಗಿ ಇರಿ’ ಅಂತ ಅಂತ ಮಗ- ಸೊಸೆಗೆ ಹೇಳಿದ್ದೇನೆ. ಆದರೆ ಮನೆಯಿಂದ ಹೊರಗೆ ಹೋಗಲು ಅವರು ಸಿದ್ಧರಿಲ್ಲ. ನನ್ನ ಮಗ ಸದಾ ನನಗೆ ಬೈಯುತ್ತಾನೆ. ಕೆಟ್ಟ ಕೆಟ್ಟ ಮಾತುಗಳಿಂದ ನನಗೆ ಅವಮಾನ ಮಾಡುತ್ತಾನೆ. ಮಗನ ಜೊತೆಗೆ ಸೊಸೆ ಕೂಡ ಸೇರಿಕೊಂಡು ಬೈಯುತ್ತಾಳೆ’ ಎಂದು ಆರೋಪಿಸಿದ್ದಾರೆ ಶ್ಯಾಮಲಾದೇವಿ.
‘ನನಗೆ ಒಬ್ಬಳು ಮಗಳು ಇದ್ದಾಳೆ. ಅವಳಿಗೂ ಇವರು ಬೆದರಿಕೆ ಹಾಕುತ್ತಾರೆ. ಮಗ-ಸೊಸೆ ಜೊತೆ ಮಾತನಾಡಿದ್ರೆ ಸಮಸ್ಯೆ ಆಗುತ್ತೆ ಅಂತ, ಅವರ ಜೊತೆಗೆ ಮಾತನಾಡುವುದನ್ನೇ ನಾನು ಬಿಟ್ಟಿದ್ದೇನೆ. ನನ್ನ ಪಾಡಿಗೆ ಇರುತ್ತೇನೆ. ನನಗೆ ಸರಿಯಾಗಿ ಊಟ ನೀಡುತ್ತಿಲ್ಲ. ನನಗೆ ಬೇಕಿರುವಷ್ಟು ಆಹಾರವನ್ನು ನಾನೇ ತಯಾರಿಸಿಕೊಳ್ಳುತ್ತೇನೆ. ಅಡುಗೆ ಮನೆಗೂ ನಾನು ಹೋಗುವಂತೆ ಇಲ್ಲ’ ಎಂದು ಕಣ್ಣೀರಿಡುತ್ತಾರೆ ಶ್ಯಾಮಲಾದೇವಿ.
‘ನನ್ನ ಹೆಸರಿನಲ್ಲಿ ಎರಡು ಅಂತಸ್ತಿನ ಮನೆ ಇದೆ. ಮೇಲ್ಗಡೆ ಮನೆಯಲ್ಲಿ ನಾವು ಇದ್ದೇವೆ. ಕೆಳಗಡೆ ಮನೆಯನ್ನು ಬಾಡಿಗೆ ಕೊಟ್ಟಿದ್ದೇವೆ. ಈಗ ಆ ಕೆಳಗಡೆ ಮನೆ ನನಗೆ ಬೇಕು ಅಂತ ಮಗ ಇಷ್ಟೆಲ್ಲ ಸಮಸ್ಯೆ ಮಾಡುತ್ತಿದ್ದಾನೆ. ಆ ಮನೆ ಬಾಡಿಗೆ ದುಡ್ಡಲ್ಲೇ ನಾನು ಜೀವನ ಮಾಡುತ್ತಿದ್ದೇನೆ. ಆದರೆ ಮಗ ಆ ಮನೆಯನ್ನು ನನಗೆ ಬಿಟ್ಟುಕೊಡು ಅಂತಾನೆ. ಕೆಲಸ ಇದ್ರೆ ನಾನು ಮಾಡುತ್ತೇನೆ. ಇಲ್ಲದೇ ಇದ್ದಾಗ ನಾನು ಏನು ಮಾಡಬೇಕು? ಮಗ ಏನಾದರೂ ನನಗೆ ದುಡ್ಡು ಕೊಡುತ್ತಾನಾ? ನನಗೆ ಆಸರೆ ಅಂತ ಇರುವುದೇ ಆ ಬಾಡಿಗೆ ಮನೆ. ‘ನಾನು ಸತ್ತ ನನ್ನ ಆಸ್ತಿ ನಿನಗೆ ಸೇರುತ್ತದೆ. ಅಲ್ಲಿವರೆಗೂ ನಿನ್ನ ಪಾಡಿಗೆ ನೀನು ಇರು’ ಅಂತ ಹೇಳಿದ್ದೀನಿ. ಆದರೆ ಈಗ ಹೆಂಡತಿ ಮೂಲಕ ಜಗಳ ಮಾಡಿಸಲು ಆರಂಭಿಸಿದ್ದಾನೆ. ಕೈಗೆ ಸಿಕ್ಕಿದ ವಸ್ತುಗಳನ್ನು ನನ್ನ ಮೇಲೆ ಎಸೆಯುತ್ತಾನೆ. ಕೊಲೆ ಮಾಡ್ತಿನಿ ಅಂತೆಲ್ಲ ಬೆದರಿಕೆ ಹಾಕುತ್ತಾನೆ’ ಎಂದು ಬೇಸರ ಹೊರಹಾಕಿದ್ದಾರೆ ಶ್ಯಾಮಲಾದೇವಿ.