ಮಂಡ್ಯ : ಸುತ್ತಿಗೆಯಿಂದ ಹೊಡೆದು ಇಬ್ಬರು ಪುಟ್ಟ ಕಂದಮ್ಮಗಳನ್ನು ಕೊಂದ ಪಾಪಿ ತಂದೆ
ಮಂಡ್ಯ: ಮನುಷ್ಯರಲ್ಲಿ ಮಾನವೀಯತೆ ಮರೆಯಾಗುತ್ತಿದೆ. ನನ್ನವರು ಎಂಬ ಭಾವನೆ ನಶಿಸುತ್ತಿದೆ. ಪ್ರೀತಿ,ಪ್ರೇಮಗಳು ಬೆಲೆ ಕಳೆದುಕೊಳ್ಳುತ್ತಿವೆ. ಸಕ್ಕರೆ ನಾಡು ಮಂಡ್ಯದಲ್ಲಿ ಮನಕಲಕುವ ಘಟನೆಯೊಂದು ನಡೆದಿದೆ. ತಂದೆಯೇ ತನ್ನ ಇಬ್ಬರು ಪುಟ್ಟ ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ(Father Killed Daughters). ಪತ್ನಿಯ ಮೇಲೂ ಹಲ್ಲೆ ಮಾಡಿದ್ದಾನೆ.
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಮರಳಗಾಲ ಗ್ರಾಮದಲ್ಲಿ ಶ್ರೀಕಾಂತ್ ಎಂಬ ವ್ಯಕ್ತಿ ತನ್ನ ಪತ್ನಿ ಲಕ್ಷ್ಮೀಗೆ ಗಂಭೀರವಾಗಿ ಹಲ್ಲೆ ಮಾಡಿದ್ದಾನೆ. ಅಷ್ಟೇ ಅಲ್ಲದೆ ಜಗತ್ತನ್ನೇ ಅರಿಯದ ಮೂರು ವರ್ಷದ ಆದಿತ್ಯ ಹಾಗೂ ನಾಲ್ಕು ವರ್ಷದ ಅಮೂಲ್ಯ ಎಂಬ ಇಬ್ಬರು ಮುದ್ದಾದ ಹೆಣ್ಣು ಮಕ್ಕಳನ್ನು ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.
ಕಲಬುರಗಿ ಜಿಲ್ಲೆ ಜೇವರ್ಗಿಯಿಂದ ಬಂದು ಮರಳಗಾಲದ ಆಲೆಮನೆಯಲ್ಲಿ ಈ ಕುಟುಂಬ ಕೆಲಸ ಮಾಡುತ್ತಿತ್ತು. ಇಂದು ಮುಂಜಾನೆ 4 ಗಂಟೆಯ ವೇಳೆ ಮಕ್ಕಳನ್ನು ಕೊಂದು ಪತ್ನಿ ಮೇಲೆ ಹಲ್ಲೆ ನಡೆಸಿ ಶ್ರೀಕಾಂತ್ ಪರಾರಿಯಾಗಿದ್ದಾನೆ. ಗಂಭೀರ ಗಾಯಗೊಂಡ ಲಕ್ಷ್ಮೀಯನ್ನು ಮೈಸೂರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಸ್ಥಳಕ್ಕೆ ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.