1 ರಿಂದ 10 ನೇ ತರಗತಿಯ ಮಕ್ಕಳ ಬ್ಯಾಗ್ ಭಾರ ತಗ್ಗಿಸಲು ತೂಕ ನಿಗದಿ ಮಾಡಿದ ಶಿಕ್ಷಣ ಇಲಾಖೆ!
ಬೆಂಗಳೂರು: ಶಾಲಾ ಮಕ್ಕಳ ಬ್ಯಾಗ್ನ ಭಾರ ತಗ್ಗಿಸುವ ವಿಚಾರ ಇದೀಗ ಮತ್ತೆ ಮುನ್ನೆಲೆಗೆ ಬಂದಿದ್ದು, ಶಿಕ್ಷಣ ಇಲಾಖೆ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಸರ್ಕಾರವು 2019ರಲ್ಲಿಯೇ ಬ್ಯಾಗ್ ತೂಕವನ್ನು ವೈಜ್ಞಾನಿಕವಾಗಿ ನಿಗದಿ ಮಾಡಿದೆ. ಆದರೂ ಬಹುತೇಕ ಶಾಲೆಗಳು ವೇಳಾಪಟ್ಟಿಯನ್ನು ನಿಗದಿ ಮಾಡದ ಪರಿಣಾಮ ಮಕ್ಕಳು ಬೆನ್ನುಮೂಳೆ ಮುರಿಯುವಂತೆ ಪುಸ್ತಕಗಳನ್ನು ಹೊರುವಂತಾಗಿದೆ. ಶೈಕ್ಷಣಿಕ ವರ್ಷಾರಂಭ ಹಿನ್ನೆಲೆ ಕಡ್ಡಾಯವಾಗಿ ‘ಶಾಲಾ ಬ್ಯಾಗ್ ಹೊರೆ ತಗ್ಗಿಸುವಂತೆ’ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಸೂಚಿಸಿದ್ದಾರೆ. ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ಅಧ್ಯಯನ ನಡೆಸಿ 1-10ನೇ ಕ್ಲಾಸ್ ಮಕ್ಕಳ ಬ್ಯಾಗ್ ತೂಕ ಎಷ್ಟು ಇರಬೇಕು ಎಂಬುದನ್ನು ಸೂಚಿಸಿದೆ. ವಿದ್ಯಾರ್ಥಿಗಳ ದೇಹದ ತೂಕದ ಶೇ.10ರಿಂದ 15 ರಷ್ಟು ಮಾತ್ರ ಶಾಲಾ ಬ್ಯಾಗ್ ತೂಕವಿರಬೇಕು ಎಂದು ಶಿಫಾರಸು ಮಾಡಿದೆ. ಇದನ್ನು ಮೂಳೆತಜ್ಞರು ಕೂಡ ಅಂಗೀಕರಿಸಿದ್ದಾರೆ.
2016ರಲ್ಲಿ ಸಮಿತಿ ರಚನೆ: ರಾಜ್ಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಇಲಾಖೆ (ಡಿಎಸ್ಇಆರ್ಟಿ) ಮತ್ತು ಬೆಂಗಳೂರಿನ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಸಹಯೋಗದಲ್ಲಿ 2016ರಲ್ಲಿ ಶಾಲಾ ಬ್ಯಾಗ್ ತೂಕ ಕಡಿತಗೊಳಿಸುವ ಕುರಿತು ಸಮಿತಿ ರಚಿಸಲಾಗಿತ್ತು. ಸಮಿತಿಯು ಶಿಕ್ಷಣ ಇಲಾಖೆ ಆಯುಕ್ತರು, ಶಿಕ್ಷಣ ತಜ್ಞರು, ಮಕ್ಕಳ ವೈದ್ಯರು ಮತ್ತು ಖಾಸಗಿ ಶಾಲಾ ಆಡಳಿತ ಮಂಡಳಿ ಮುಖ್ಯಸ್ಥರನ್ನು ಒಳಗೊಂಡಿತ್ತು. ಈ ಸಮಿತಿಯು ಮಕ್ಕಳ ತೂಕದ ಆಧಾರದಲ್ಲಿ ವೈಜ್ಞಾನಿಕವಾಗಿ ಸಂಶೋಧನೆ ನಡೆಸಿ 2018ರಲ್ಲಿ ಶಿಕ್ಷಣ ಇಲಾಖೆಗೆ ವರದಿ ನೀಡಿತ್ತು. ಇಲಾಖೆಯು 2019-20ರ ಶೈಕ್ಷಣಿಕ ವರ್ಷದಿಂದ ಶಾಲಾ ಬ್ಯಾಗ್ ತೂಕ ಕಡಿಮೆ ಮಾಡುವ ಆದೇಶ ಹೊರಡಿಸಿತ್ತು. ಕರೊನಾ ಕಾರಣದಿಂದ ಸಮರ್ಪಕವಾಗಿ ವರದಿ ಅನುಷ್ಠಾನವಾಗಿರಲಿಲ್ಲ.
ಮಕ್ಕಳ ದೈಹಿಕ-ಮಾನಸಿಕ ಆರೋಗ್ಯ ಬೆಳವಣಿಗೆಯ ಕಾಳಜಿಯನ್ನು ಗಮನದಲ್ಲಿಟ್ಟುಕೊಂಡು ಶಾಲಾ ಬ್ಯಾಗ್ಗಳ ತೂಕಕ್ಕೆ ಮಿತಿ ನಿಗದಿಪಡಿಸಲಾಗಿದೆ. ಆದರೆ, ರಾಜ್ಯದಲ್ಲಿ ಅದನ್ನು ಸಮರ್ಪಕವಾಗಿ ಜಾರಿಗೆ ತರಲಾಗಿಲ್ಲ. ಆದ್ದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಬ್ಯಾಗ್ ತೂಕ ಇಳಿಸಲು ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಲಾಗಿತ್ತು. ಆದರೆ, ನೀತಿ ಜಾರಿಗೆ ಸಂಬಂಧಿಸಿದ ಮಾಹಿತಿಯನ್ನು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಕೋರಲಾಗಿಲ್ಲ. ಅರ್ಜಿದಾರರು ಶಾಲೆಗಳಿಗೆ ಭೇಟಿ ನೀಡಿದ ವಿವರ ಒದಗಿಸಿಲ್ಲ. ಈ ಕಾರಣದಿಂದ ಅರ್ಜಿ ವಜಾಗೆ ನ್ಯಾಯಪೀಠ ಮುಂದಾಯಿತು. ಸೂಕ್ತ ದಾಖಲೆಗಳನ್ನು ಸಂಗ್ರಹಿಸಿದ ಬಳಿಕ ಸಲ್ಲಿಸುವುದಾಗಿ ವಕೀಲ ರಮೇಶ್ ನಾಯಕ್ ಅರ್ಜಿ ಹಿಂಪಡೆದರು.
ಜಾರಿಯಾಗದ ನೋ ಬ್ಯಾಗ್ ಡೇ: ಶಾಲೆಗಳಲ್ಲಿ ಪ್ರತಿ ಶನಿವಾರ ಮಕ್ಕಳಿಗೆ ‘ನೋ ಬ್ಯಾಗ್ ಡೇ’ ಯೋಜನೆಯನ್ನು 2017ರಲ್ಲಿ ರೂಪಿಸಲಾಗಿತ್ತು. 2019ರಲ್ಲಿ ಈ ಯೋಜನೆಯನ್ನು ಜಾರಿಗೊಳಿಸಿ ಪ್ರತಿ ಶನಿವಾರ ಮಕ್ಕಳು ಬ್ಯಾಗ್ ತರದೆ ‘ಸಂಭ್ರಮ ಶನಿವಾರ’ ಆಚರಿಸಲು ಸೂಚಿಸಿತ್ತು. ವಿದ್ಯಾರ್ಥಿಗಳನ್ನು ವಾರದ ಒಂದು ದಿನ ಸಂಪೂರ್ಣವಾಗಿ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಮಾಡುವುದು ಇಲಾಖೆ ಉದ್ದೇಶವಾಗಿತ್ತು.