ಪ್ರವಾಸಕ್ಕೆಂದು ಬಂದ ಮಹಿಳೆ ಇಂಜೆಕ್ಷನ್ ಪಡೆದು ಸಾವು!
ಉತ್ತರ ಕನ್ನಡ: ಒಂದೆಡೆ ಆಸ್ಪತ್ರೆಯಲ್ಲಿ ಮೃತದೇಹದ ಮುಂದೆ ರೋದಿಸುತ್ತಿರುವ ಕುಟುಂಬ, ಇನ್ನೊಂದೆಡೆ ತಾಯಿಯ ಮುಖವನ್ನ ತೋರಿಸದೇ ಮಗುವಿನ ಜೊತೆ ಆಸ್ಪತ್ರೆ ಹೊರಗೆ ಪರದಾಡುತ್ತಿರುವ ತಂದೆ, ಮತ್ತೊಂದೆಡೆ ಆಸ್ಪತ್ರೆಗೆ ದೌಡಾಯಿಸಿರುವ ಪೊಲೀಸರು, ಈ ದೃಶ್ಯ ಕಂಡು ಬಂದಿದ್ದು ಉತ್ತರ ಕನ್ನಡ(Uttara Kannada) ಜಿಲ್ಲೆಯ ಕಾರವಾರದ ಜಿಲ್ಲಾ ಆಸ್ಪತ್ರೆಯಲ್ಲಿ. ಹೌದು ಕಾರವಾರದಲ್ಲಿ ಆಸ್ಪತ್ರೆಯೊಂದರ ನಿರ್ಲಕ್ಷಕ್ಕೆ ಮಹಿಳೆಯೋರ್ವಳು ಮೃತಪಟ್ಟ ಘಟನೆ ನಡೆದಿದೆ. ಮೂಲತ ಕೊಪ್ಪಳದ ಸ್ವಪ್ನ ರಾಯ್ಕರ್(32) ಎನ್ನುವ ಮಹಿಳೆ ಕುಟುಂಬದ ಜೊತೆ ಗೋವಾ ಹಾಗೂ ಉತ್ತರ ಕನ್ನಡ ಪ್ರವಾಸಕ್ಕಾಗಿ ಸೋಮವಾರ ಆಗಮಿಸಿದ್ದರು.
ಗೋವಾದಲ್ಲಿ ದೇವಸ್ಥಾನವೊಂದಕ್ಕೆ ಭೇಟಿ ನೀಡಿ ನಂತರ ಆಕೆಯ ತಂದೆ ಪ್ಯಾರಲಿಸಿಸ್(Paralysis) ಚಿಕಿತ್ಸೆ ಪಡೆಯುತ್ತಿದ್ದು, ಕಾರವಾರ ತಾಲೂಕಿನ ಹಳಗಾ ಗ್ರಾಮದ ಸೆಂಟ್ ಮೇರಿಸ್ ಆಸ್ಪತ್ರೆಗೆ ಭೇಟಿ ನೀಡಿದ್ದಳು. ಈ ವೇಳೆ ಆಸ್ಪತ್ರೆಯಲ್ಲಿ ಪ್ಯಾರಲಿಸಿಸ್ ಬರದಂತೆ ಮುಂಚೆಯೇ ಚುಚ್ಚುಮದ್ದು ತೆಗೆದುಕೊಳ್ಳುವಂತೆ ವೈದ್ಯರು ಸೂಚನೆ ನೀಡಿದ್ದರು ಎನ್ನಲಾಗಿದೆ. ಇನ್ನು ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದಂತೆ ಮಹಿಳೆ ಕುಸಿದು ಬಿದ್ದು ಮೃತಪಟ್ಟಿದ್ದಾಳೆ ಎಂದು ಮೃತಳ ಫೋಷಕರು ಆರೋಪಿಸಿದ್ದಾರೆ.
ಮಹಿಳೆ ಕುಸಿದು ಬೀಳುತ್ತಿದ್ದಂತೆ ತಕ್ಷಣ ಆಸ್ಪತ್ರೆಯವರೇ ಕಾರವಾರದ ಜಿಲ್ಲಾ ಆಸ್ಪತ್ರೆಗೆ ಮಹಿಳೆಯನ್ನ ರವಾನೆ ಮಾಡಿದ್ದರು. ಆಸ್ಪತ್ರೆಗೆ ಸಾಗಿಸುವ ವೇಳೆಯಲ್ಲೇ ಮಹಿಳೆ ಮೃತಪಟ್ಟಿದ್ದು, ವೈದ್ಯರು ಇವರು ಸಾವನ್ನಪ್ಪಿದ್ದಾರೆ ಎಂದು ಘೋಷಣೆ ಮಾಡಿದ್ದಾರೆ. ಇನ್ನು ಸೆಂಟ್ ಮೇರಿಸ್ ಆಸ್ಪತ್ರೆಯಲ್ಲಿ ಹಲವು ವರ್ಷದಿಂದ ಪ್ಯಾರಲಿಸಿಸ್ಗೆ ಚುಚ್ಚುಮದ್ದು ಕೊಡುತ್ತಿದ್ದು, ಈ ಆಸ್ಪತ್ರೆ ಮೇಲೆ ಹಿಂದಿನಿಂದಲೂ ಆರೋಪವಿರುವುದು ಕೇಳಿಬಂದಿತ್ತು. ಈ ಆಸ್ಪತ್ರೆಯಲ್ಲಿ ಯಾವ ಇಂಜೆಕ್ಷನ್,ಯಾವ ಔಷದಿ ಕೊಡುತ್ತಾರೆ ಎಂದು ತಿಳಿಸುವುದಿಲ್ಲ. ಇದು ಸರಿಯಾದ ಕ್ರಮವಲ್ಲ ಎಂದು ಹಲವರು ವಿರೋಧಿಸಿದ್ದರು. ಇನ್ನು ಸದ್ಯ ಮಹಿಳೆ ಇದೇ ಇಂಜೆಕ್ಷನ್ ತೆಗೆದುಕೊಂಡು ಮೃತಪಟ್ಟಿದ್ದು ಆಸ್ಪತ್ರೆ ಮೇಲೆ ಕ್ರಮ ಕೈಗೊಳ್ಳಲೇ ಬೇಕು ಎಂದು ಸ್ಥಳೀಯರು ಸೇರಿದಂತೆ ಸಾಮಾಜಿಕ ಹೋರಾಟಗಾರರಾದ ಮಾದವ ನಾಯ್ಕ ಆಗ್ರಹಿಸಿದ್ದಾರೆ.
ಇನ್ನು ಈ ಕುರಿತು ಮಾತನಾಡಿದ ಕ್ರೀಮ್ಸ್ ಆಸ್ಪತ್ರೆ ವೈದ್ಯರಾದ ಡಾ. ರೋಷನ್ ‘ ಮೃತ ಸ್ವಪ್ನ ರಾಯ್ಕರ್ ಎಂಬುವವರನ್ನ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಜೀವವಿರಲಿಲ್ಲ ಎಂದು ಸ್ಪಷ್ಟಪಡಿಸಿದ್ದೇವು. ಇನ್ನು ಸಾವಿಗೆ ನಿಖರವಾದ ಕಾರಣ ಶವ ಪರೀಕ್ಷೆಯ ರೀಪೋರ್ಟ್ ಜೊತೆಗೆ ಪೊಲೀಸರ ತನಿಖೆ ಬಳಿಕ ಗೊತ್ತಾಗಲಿದೆ ಎಂದರು.