ಕರಾವಳಿಯಲ್ಲಿ ಕೋಮುದ್ವೇಷಕ್ಕೆ ಬಲಿಯಾದ 4 ಕುಟುಂಬಗಳಿಗೆ ರಾಜ್ಯ ಸರ್ಕಾರದಿಂದ ತಲಾ 25 ಲಕ್ಷ ಪರಿಹಾರ ಘೋಷಣೆ!
ಬೆಂಗಳೂರು (ಜೂ.17): ಬೇರೆ ಬೇರೆ ಪ್ರಕರಣದಲ್ಲಿ ಕೋಮು ದ್ವೇಷದಲ್ಲಿ ಹತ್ಯೆಗೀಡಾದ ದಕ್ಷಿಣ ಕನ್ನಡ ಜಿಲ್ಲೆಯ ನಾಲ್ವರ ಕುಟುಂಬಗಳಿಗೆ ರಾಜ್ಯ ಸರ್ಕಾರ ಪರಿಹಾರ ಘೋಷಿಸಿದೆ. ಬಿಜೆಪಿ ಕಾರ್ಯಕರ್ತನ ಜೊತೆ ಮೂವರು ಮುಸ್ಲಿಂ ಯುವಕರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಿದೆ. ಮಂಗಳೂರಿನ ನಾಲ್ಕು ಜನರ ಕುಟುಂಬಕ್ಕೆ ತಲಾ 25 ಲಕ್ಷ ಪರಿಹಾರ ಘೋಷಿಸಿ ಆದೇಶ ಹೊರಡಿಸಿದ್ದು, ನಾಲ್ವರ ಕುಟುಂಬಕ್ಕೆ ಒಟ್ಟು ಒಂದು ಕೋಟಿ ರೂ. ಪರಿಹಾರ ಘೋಷಣೆಯಾಗಿದೆ.
ಸುಳ್ಯದ ಬೆಳ್ಳಾರೆಯ ಕಳಂಜ ಎಂಬಲ್ಲಿ ಮಸೂದ್, ಸುರತ್ಕಲ್ ನ ಫಾಜಿಲ್, ಜಲೀಲ್ ಹಾಗೂ ದೀಪಕ್ ರಾವ್ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಲಾಗಿದೆ. ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ತಲಾ 25 ಲಕ್ಷ ರೂ. ಪರಿಹಾರ ಘೋಷಣೆಯಾಗಿದ್ದು, ರಾಜ್ಯ ಪೊಲೀಸ್ ಮಹಾನಿರ್ದೇಶಕರು ಪರಿಹಾರ ಘೋಷಿಸಲು ಮನವಿ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ಜೂ.19ರಂದು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಪರಿಹಾರ ಚೆಕ್ ಪಡೆಯಲು ಸಂಬಂಧಿಸಿದ ಕುಟುಂಬಗಳಿಗೆ ಸೂಚನೆ ನೀಡಲಾಗಿದೆ.
2018 ಜ.3ರಂದು ಮಧ್ಯಾಹ್ನ ಕಾಟಿಪಳ್ಳದಲ್ಲಿ ಮೊಬೈಲ್ ಅಂಗಡಿಯಿಂದ ಹೊರಗೆ ಬರುತ್ತಿದ್ದಾಗ ದೀಪಕ್ ರಾವ್ ಅವರನ್ನು ತಲವಾರಿನಿಂದ ಕೊಚ್ಚಿ ಕೊಲ್ಲಲಾಗಿತ್ತು, ಈ ಪ್ರಕರಣವೂ ಸುರತ್ಕಲ್‌ನಲ್ಲಿ ಸಾಕಷ್ಟು ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಆ ಬಳಿಕ ಸ್ವಲ್ಪ ತಣ್ಣಗಿದ್ದ ಕರಾವಳಿಯಲ್ಲಿ ಸರಣಿ ಹತ್ಯೆಗಳು ನಡೆದಿತ್ತು. 2022 ಜುಲೈ 19ರಂದು ಬೆಳ್ಳಾರೆಯ ಕಳಂಜ ಎಂಬಲ್ಲಿ ಹಲ್ಲೆಗೊಳಗಾಗಿ ಜುಲೈ .21ರಂದು ಮಸೂದ್ ಸಾವನ್ನಪ್ಪಿದ್ದ, ಇದಕ್ಕೆ ಪ್ರತಿಕಾರ ಎಂಬಂತೆ ನಡೆದ ಭೀಕರ ಹತ್ಯೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು. ಜುಲೈ 26 ಇವರನ್ನು ಮಾರಾಕಾಸ್ತ್ರಗಳಿಂದ ದಾಳಿ ನಡೆಸಿ ಕೊಲ್ಲಲಾಯ್ತು. ನಡೆಯಿತು. ಇದು ದೇಶ ಮಟ್ಟದಲ್ಲಿ ಸುದ್ದಿಯಾಗಿತ್ತು.
ಇದಾದ ಎರಡೇ ದಿನಕ್ಕೆ ಅಂದರೆ ಜುಲೈ 28 ರಂದು ಮಂಗಳೂರಿನ ಸುರತ್ಕಲ್‌ನಲ್ಲಿ ಫಾಝಿಲ್ ಎಂಬ ಯುವಕನನ್ನು ದುಷ್ಕರ್ಮಿಗಳ ತಂಡ ಭೀಕರವಾಗಿ ಹತ್ಯೆ ಮಾಡಿತ್ತು. ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಯಾದಾಗ ಆಗಿನ ಬಿಜೆಪಿ ಸರ್ಕಾರ ಪರಿಹಾರ ನೀಡಿದ್ದು, ಫಾಜಿಲ್ ಹತ್ಯೆಗೆ ಪರಿಹಾರ ನೀಡದೇ ತಾರತಮ್ಯ ಎಸಗಿತ್ತು. ಆದರೆ ಇದೀಗ ಕಾಂಗ್ರೆಸ್ ಸರ್ಕಾರ ಮುಸ್ಲಿಂ ಯುವಕರ ಕುಟುಂಬದ ಜೊತೆಗೆ ಬಿಜೆಪಿ ಕಾರ್ಯಕರ್ತ ದೀಪಕ್ ರಾವ್ ಹತ್ಯೆಗೂ ಪರಿಹಾರ ಘೋಷಣೆ ಮಾಡಿದೆ. ಒಟ್ಟಿನಲ್ಲಿ ಮತ, ರಾಜಕಾರಣ, ಮತೀಯತೆಗೆ ಅಮಾಯಕರ ಬಲಿಗಳು ನಡೆಯುತ್ತಿರುವುದು ಸುಳ್ಳಲ್ಲ.