ಬಡವರಿಗೆ ಕೇಂದ್ರದಿಂದ ದ್ರೋಹ; ಜೂನ್ 20ರಂದು ಕೇಂದ್ರದ ವಿರುದ್ಧ ಪ್ರತಿಭಟನೆಗೆ ಕಾಂಗ್ರೆಸ್ ನಿರ್ಧಾರ
ಬೆಂಗಳೂರು(ಜೂ.17): ‘ಕೇಂದ್ರದ ಬಳಿ ಅಕ್ಕಿ ದಾಸ್ತಾನು ಇದ್ದರೂ ರಾಜ್ಯಕ್ಕೆ ಮಾರಾಟ ಮಾಡಲು ನಿರಾಕರಿಸಿರುವ ಕೇಂದ್ರ ಸರ್ಕಾರದ ದ್ವೇಷ ರಾಜಕಾರಣ, ಬಡವರ ವಿರೋಧಿ ನೀತಿ ವಿರುದ್ಧ ಜೂ.20ರಂದು ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರೂ ಆದ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ‘ಅಕ್ಕಿ ನೀಡುವುದಾಗಿ ಹೇಳಿ ನಿರಾಕರಿಸಿರುವುದು ಬಿಜೆಪಿಯ ದ್ವೇಷ ರಾಜಕಾರಣಕ್ಕೆ ಸಾಕ್ಷಿ. ಕೇಂದ್ರದ ಬಳಿ 7 ಲಕ್ಷ ಮೆಟ್ರಿಕ್ ಟನ್ ದಾಸ್ತಾನು ಇದೆ. ನಾವು ಕೇವಲ 2.85 ಲಕ್ಷ ಟನ್ ಖರೀದಿಗೆ ಕೇಳಿದ್ದೆವು. ದಾಸ್ತಾನು ಇದ್ದರೂ ಹಾಗೂ ಪ್ರತಿ ಕೆ.ಜಿ.ಗೆ 36.60 ರು.ಗಳಂತೆ ಹಣ ನೀಡಲು ನಾವು ಒಪ್ಪಿದ್ದರೂ ಅಕ್ಕಿ ನೀಡಲು ನಿರಾಕರಿಸಲಾಗುತ್ತಿದೆ. ಕೇಂದ್ರದ ಈ ಧೋರಣೆಯನ್ನು ಪ್ರತಿಭಟಿಸುವ ಮೂಲಕ ಜನರಿಗೆ ಅರಿವು ಮೂಡಿಸುವ ಜತೆಗೆ ಕೇಂದ್ರದ ಮೇಲೆ ಒತ್ತಡ ಹೇರಲು ಹೋರಾಟ ಮಾಡುತ್ತೇವೆ. ಆಯಾ ಪ್ರತಿಭಟನೆಯಲ್ಲಿ ಸಂಬಂಧಪಟ್ಟ ಶಾಸಕರು ಭಾಗವಹಿಸಲಿದ್ದಾರೆ’ ಎಂದು ಹೇಳಿದರು.
‘ಇನ್ನು ಕೇಂದ್ರ ಸರ್ಕಾರ ಯಾವುದೇ ರೀತಿಯ ಷಡ್ಯಂತ್ರ ನಡೆಸಿದರೂ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ತಲಾ 10 ಕೆ.ಜಿ. ಅಕ್ಕಿ ನೀಡಲು ರಾಜ್ಯ ಸರ್ಕಾರ ಬದ್ಧವಾಗಿದೆ. ಈ ಬಗ್ಗೆ ಅಕ್ಕಿ ಹೊಂದಿಸಲು ನೆರೆ ರಾಜ್ಯಗಳೊಂದಿಗೆ ಚರ್ಚೆ ನಡೆಸಲಾಗುತ್ತಿದೆ. ಜೂ.21ರಂದು ದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿ ಮಾಡಲೂ ಪ್ರಯತ್ನಿಸಲಾಗುವುದು’ ಎಂದು ಹೇಳಿದರು.
8 ಕೇಜಿ ಅಕ್ಕಿ ಜೊತೆ 2 ಕೇಜಿ ರಾಗಿ/ಜೋಳ: ಮುನಿಯಪ್ಪ
ದೇವನಹಳ್ಳಿ: ರಾಜ್ಯ ಸರ್ಕಾರದಿಂದ ನೀಡುವ 10 ಕೇಜಿ ‘ಅನ್ನಭಾಗ್ಯ’ದಲ್ಲಿ ದಕ್ಷಿಣ ಕರ್ನಾಟಕದಲ್ಲಿ 8 ಕೇಜಿ ಅಕ್ಕಿ ಜೊತೆಗೆ 2 ಕೇಜಿ ರಾಗಿ ಹಾಗೂ ಉತ್ತರ ಕರ್ನಾಟಕದಲ್ಲಿ 2 ಕೇಜಿ ಜೋಳ ನೀಡುವ ಬಗ್ಗೆ ಚಿಂತನೆ ನಡೆದಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್.ಮುನಿಯಪ್ಪ ಹೇಳಿದ್ದಾರೆ.