ಅಕ್ರಮ ಮರಳು ಸಾಗಾಣಿಕೆ ಟ್ರ್ಯಾಕ್ಟರ್ ಹರಿದು ಪೊಲೀಸ್ ಪೇದೆ ಸಾವು
ಕಲಬುರಗಿ: ಅಕ್ರಮ ಮರಳು ಸಾಗಾಣಿಕೆ (Illegal Sand Trafficking) ಮಾಡುತ್ತಿದ್ದ ಟ್ರ್ಯಾಕ್ಟರ್ (Tractor) ಹರಿದು ಪೊಲೀಸ್ ಪೇದೆಯೊಬ್ಬರು (Police Constable) ಸಾವನ್ನಪ್ಪಿದ ಘಟನೆ ಕಲಬುರಗಿ (Kalaburagi) ಜಿಲ್ಲೆಯ ಜೇವರ್ಗಿ (Jevargi) ತಾಲೂಕಿನ ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಹುಲ್ಲೂರು ಚೆಕ್ಪೋಸ್ಟ್ ಬಳಿ ಕರ್ತವ್ಯ ನಿರತ ಮುಖ್ಯ ಪೊಲೀಸ್ ಪೇದೆ ಮಯೂರ (51) ಅವರ ಮೇಲೆ ಅಕ್ರಮ ಮರಳು ಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಮೃತಪಟ್ಟಿದ್ದಾರೆ. ಈ ಕುರಿತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಿಯಾಂಕ್ ಖರ್ಗೆ (Priyank Kharge) ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದು, ಪೊಲೀಸ್ ಪೇದೆ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ.
ಅಕ್ರಮ ಮರುಳುಸಾಗಾಣಿಕೆ ಮಾಡುತ್ತಿದ್ದ ಟ್ರ್ಯಾಕ್ಟರ್ ಹರಿದು ಜೇವರ್ಗಿ ತಾಲೂಕು ನೆಲೋಗಿ ಪೊಲೀಸ್ ಠಾಣಾ ವ್ಯಾಪ್ತಿಯ ಹುಲ್ಲೂರು ಚೆಕ್ ಪೋಸ್ಟ್ ಬಳಿ ಕರ್ತವ್ಯ ನಿರತ ಪೊಲೀಸ್ ಪೇದೆಯೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದು ಅತ್ಯಂತ ನೋವಿನ ಸಂಗತಿಯಾಗಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ಕರೆ ಮಾಡಿ ಮಾತನಾಡಿದ್ದು, ತನಿಖೆಗೆ ಆದೇಶಿಸಿದ್ದೇನೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅಲ್ಲದೇ ಮೃತ ಪೊಲೀಸ್ ಪೇದೆ ಕುಟುಂಬಕ್ಕೆ ಸರ್ಕಾರದ ವತಿಯಿಂದ ಶಿಘ್ರದಲ್ಲಿಯೇ ಪರಿಹಾರವನ್ನು ಒದಗಿಸಿಕೊಡುವ ಭರವಸೆಯನ್ನೂ ನೀಡಿದ್ದಾರೆ. ಜಿಲ್ಲೆಯಲ್ಲಿ ಅಕ್ರಮ ಮರಳು ಸಾಗಾಣಿಕೆ ತಡೆಯಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಈಗಾಗಲೇ ಕಂದಾಯ ಹಾಗೂ ಪೊಲೀಸ್ ಇಲಾಖೆಗಳಿಗೆ ನಿರ್ದೇಶನ ನೀಡಲಾಗಿದ್ದರೂ ಕೂಡ ಈ ಘಟನೆ ನಡೆದಿದೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಂಬಂಧಿಸಿದ ಹಾಗೂ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಿ ಈ ಕೂಡಲೇ ಅಕ್ರಮ ಮರುಳು ಸಾಗಾಣಿಕೆ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿರ್ದೇಶಿಸಿದ್ದೇನೆ ಎಂದು ಭರವಸೆ ನೀಡಿದರು.