ಬಿಜೆಪಿ ಅವಧಿಯ ಎಲ್ಲಾ ಹಗರಣಗಳನ್ನು ಹಂತ ಹಂತವಾಗಿ ತನಿಖೆ ನಡೆಸುತ್ತೇವೆ - ಪ್ರಿಯಾಂಕಾ ಖರ್ಗೆ
ಬೆಂಗಳೂರು: ಬಿಜೆಪಿ ಸರ್ಕಾರದ ಹಗರಣಗಳ ಕುರಿತಾಗಿ ಹಂತ ಹಂತವಾಗಿ ತನಿಖೆ ನಡೆಸಲಾಗುವುದು, ಜನರಿಗೆ ನಾವು ಕೊಟ್ಟ ಮಾತಿಗೆ ಬದ್ದರಾಗಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.
ಬೆಂಗಳೂರಿನಲ್ಲಿ ಶುಕ್ರವಾರ ಮಾತನಾಡಿದ ಅವರು, ಜನರಿಗೆ ಗ್ಯಾರಂಟಿ ಕೊಟ್ಟಿದ್ದೆವು ತನಿಖೆ ಮಾಡುಸ್ತೇವೆ ಎಂದು, ಬಿಜೆಪಿ ಹಗರಣಗಳ ಕುರಿತು ಯಾವ ತಂಡಗಳಿಗೆ ತನಿಖೆಗೆ ಕೊಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರದಲ್ಲಿ ತೀರ್ಮಾನ ಆಗ್ತಾ ಇದೆ ಎಂದರು.
ಬೇರೆ ಬೇರೆ ರೀತಿಯ ಹಗರಣಗಳು ಇವೆ. ಬಿಟ್ ಕಾಯಿನ್ ಪ್ರಕರಣಕ್ಕೆ ಸೈಬರ್ ಎಕ್ಸಪರ್ಟ್ ತಂಡದ ಅಗತ್ಯವಿದೆ. ಕೆಲವು ಹಗರಣಗಳ ತನಿಖೆಗೆ ಎಸ್ ಐಟಿ ಮಾಡಲಿದೆ. ಕೆಲವು ಇಲಾಖಾವಾರು ತನಿಖೆ ಆಗುತ್ತೆ ಹಾಗೂ ಕೆಲವೊಂದು ನ್ಯಾಯಾಂಗ ತನಿಖೆ ಆಗಲಿದೆ ಎಂದರು.
ಯಾವ್ಯಾವ ಹಗರಣ ಯಾವ ರೀತಿಯಲ್ಲಿ ಮಾಡಿದ್ದಾರೆ. ಆ ರೀತಿಯಲ್ಲಿ ತನಿಖೆ ಆಗುತ್ತೆ. ನಾವು ಜನರಿಗೆ ಗ್ಯಾರಂಟಿ ಕೊಟ್ಟಿದ್ವಿ ತನಿಖೆ ಮಾಡಿಸ್ತೇವೆ ಎಂದು, ಅದಕ್ಕೆ ನಾವು ಬದ್ಧವಾಗಿದ್ದೇವೆ ಎಂದು ತಿಳಿಸಿದರು.
ಬಿಟ್ ಕಾಯಿನ್, ಪಿಎಸ್ಐ ಹಗರಣ, ಗಂಗಾ ಕಲ್ಯಾಣ ಹಗರಣ, ಕೆಪಿಟಿಸಿಎಲ್ ನೇಮಕಾತಿ ಹಗರಣ, ಅಸಿಸ್ಟೆಂಟ್ ಪ್ರೊಫೆಸರ್ ಹಗರಣ, ಕೋವಿಡ್ ಸಮಯದ ಭ್ರಷ್ಟಾಚಾರ ಈ ಎಲ್ಲ ವಿಚಾರಗಳನ್ನು ತನಿಖೆ ಮಾಡಿಸುತ್ತೇವೆ ಎಂದರು.
ಈ ಹಿಂದೆ ಈ ಹಗರಣಗಳ ಆರೋಪದ ಬಗ್ಗೆ ತನಿಖೆಗೆ ನಾವೇ ಹಿಂದೆ ಒತ್ತಾಯ ಮಾಡಿದ್ವಿ, ಜನ ಆಶೀರ್ವಾದ ಮಾಡಿದ್ದಾರೆ. ಜನರ ನಿರೀಕ್ಷೇಗೆ ತಕ್ಕಂತೆ ನಾವು ನಡೆಸುಕೊಳ್ಳುತ್ತೇವೆ ಎಂದು ಹೇಳಿದರು.
ಗಂಗಾ ಕಲ್ಯಾಣ ಅಕ್ರಮ ಕುರಿತು ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಎರಡು ಎಫ್ ಐಆರ್ ಆಗಿದೆ. ಕಲ್ಯಾಣ ಕರ್ನಾಟಕ ಯೋಜನೆ ಸಾವಿರಾರು ಕೋಟಿ ಅಕ್ರಮ ಆಗಿದೆ. ಇದರ ಬಗ್ಗೆ ಇಲಾಖಾವಾರು ತನಿಖೆ ನಡಿಯತ್ತಿದೆ. ಉನ್ನತ ಅಧಿಕಾರಗಳನ್ನು ತನಿಖಾ ತಂಡಕ್ಕೆ ನೇಮಕ ಮಾಡುತ್ತಾ ಇದ್ದೇವೆ. ಹಂತ ಹಂತವಾಗಿ ತನಿಖೆ ಮಾಡಿಕೊಂಡು ಹೋಗುತ್ತೇವೆ ಎಂದರು.
ಹಗರಣದಲ್ಲಿ ಬಿಜೆಪಿ ಸಚಿವರು, ಶಾಸಕರು ಭಾಗಿ ವಿಚಾರವಾಗಿ ಮಾತನಾಡಿ, ಯಾರೇ ಭಾಗಿಯಾಗಿದ್ರು ಶಿಕ್ಷೆ ಆಗಬೇಕು.
ನಾನೇ ಭಾಗಿಯಾಗಿದ್ರು ಕೂಡ ಶಿಕ್ಷೆ ಆಗಬೇಕು. ಬಿಜೆಪಿಯವರು ಹೇಳ್ತಾ ಇದ್ರು ಪ್ರಿಯಾಂಕ್ ಖರ್ಗೆ ಸಿಕ್ಕಿಹಾಕಿಕೊಳ್ತಾರೆ ಅಂತ, ಕಾಂಗ್ರೆಸ್ ಅವರೆ ಸಿಕ್ಕಿ ಹಾಕಿಕೊಳ್ತಾರೆ ಅಂತಿದ್ರು. ಬರಲಿ, ಯಾರೇ ತಪ್ಪು ಮಾಡಿದರೂ ಅವರು ಸಿಕ್ಕಿಹಾಕಿಕೊಳ್ತಾರೆ ಎಂದರು.
ನಮ್ಮ ಹೆಸರು ಆದ್ರೂ ಬರಲಿ, ಬಿಜೆಪಿಯವರ ಹೆಸರು ಆದ್ರೂ ಬರಲಿ, ಯಾರೇ ಭಾಗಿಯಾಗಿದ್ರು ಮುಲಾಜಿಲ್ಲದೆ ಒಳಗೆ ಹಾಕ್ತೇವೆ.
ನನ್ನ ಪ್ರಕಾರ ಕೆಪಿಎಸ್ಸಿ , ಕೆಇಎ ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಅವರ ಭವಿಷ್ಯ ಏನಾಗಬೇಕು, ಕೆಲವರಿಗೆ ವಯಸ್ಸಾಗುತ್ತಿದೆ. ಕೆಲವರು ಪ್ರಾಮಾಣಿಕರು ಇದ್ದಾರೆ. ನಮಗೆ ಯುವಕರ ಭವಿಷ್ಯ ಮುಖ್ಯ ಈ ಹಿನ್ನಲೆಯಲ್ಲಿ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗದುಕೊಳ್ಳುತ್ತೇವೆ ಎಂದರು.