ರ್ಯಾಂಪ್ವಾಕ್ ಮಾಡುವಾಗ ಕಬ್ಬಿಣದ ಪಿಲ್ಲರ್ ಬಿದ್ದು ಮಾಡೆಲ್ ಸಾವು
ನೋಯ್ಡಾದಲ್ಲಿ ನಡೆಯುತ್ತಿದ್ದ ಫ್ಯಾಷನ್ ರನ್ವೇನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಕಬ್ಬಿಣದ ಪಿಲ್ಲರ್ ಬಿದ್ದು 24 ವರ್ಷದ ಮಾಡೆಲ್ ಮೃತಪಟ್ಟಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮಹಿಳೆಯನ್ನು ವಂಶಿಕಾ ಚೋಪ್ರಾ ಎಂದು ಗುರುತಿಸಲಾಗಿದೆ. ನೋಯ್ಡಾದ ಸೆಕ್ಟರ್ 16 ಎ ನಲ್ಲಿರುವ ಫಿಲ್ಮ್ ಸಿಟಿಯ ಲಕ್ಷ್ಮಿ ಸುಡಿಯೋದಲ್ಲಿ ಅಪಘಾತ ಸಂಭವಿಸಿದೆ. ಬೆಳಕಿನ ಉದ್ದೇಶಕ್ಕಾಗಿ ಕಬ್ಬಿಣದ ಕಂಬವನ್ನು ನಿರ್ಮಿಸಲಾಗಿದೆ ಆದರೆ ಅದು ವೇದಿಕೆಯ ಮೇಲೆ ಬಿದ್ದು ಮಾಡೆಲ್ ತಕ್ಷಣವೇ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದಲ್ಲಿ ಬಾಬಿ ರಾಜ್ ಎಂಬ ವ್ಯಕ್ತಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಫ್ಯಾಷನ್ ಶೋ ಆಯೋಜಕರು ಮತ್ತು ಇತರ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ವಂಶಿಕಾ ಅವರ ಸಾವಿನ ಬಗ್ಗೆ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಈ ಸಂಬಂಧ ಪೊಲೀಸರು ಫ್ಯಾಷನ್ ಶೋ ಆಯೋಜಕ ಮತ್ತು ಲೈಟಿಂಗ್ ಕೆಲಸದಲ್ಲಿ ತೊಡಗಿದ್ದ 4 ಜನರನ್ನು ಬಂಧಿಸಿದ್ದಾರೆ ಎಂದು ನೋಯ್ಡಾದ ಹೆಚ್ಚುವರಿ ಡಿಸಿಪಿ ಮೋಹನ್ ಅವಸ್ತಿ ತಿಳಿಸಿದ್ದಾರೆ. ಫ್ಯಾಷನ್ ಶೋಗೆ ಅನುಮತಿ ನೀಡಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಎಲೆಕ್ಟ್ರಿಷಿಯನ್ ಕೈಗೆ ಸರಪಳಿ ಹಾಕಿ, ತಳ್ಳುವ ಗಾಡಿಗೆ ಕಟ್ಟಿದ ಅಂಗಡಿ ಮಾಲೀಕ:
ಅಂಗಡಿ ಮಾಲೀಕನೊಬ್ಬ ಎಲೆಕ್ಟ್ರಿಷಿಯನ್ ಒಬ್ಬರ ಕೈಗೆ ಸರಪಳಿ ಹಾಕಿ ಹಾಕಿ ತಳ್ಳುವ ಗಾಡಿಗೆ ಕಟ್ಟಿರುವ ಘಟನೆ ಜಾರ್ಖಂಡ್ನ ಧನ್ಬಾದ್ನಲ್ಲಿ ನಡೆದಿದೆ.ಎಲೆಕ್ಟ್ರಿಷಿಯನ್ ಯಾವುದೋ ಕೆಲಸ ಮಾಡಿಕೊಡುತ್ತೇನೆ ಎಂದು ಹೇಳಿ ಮುಂಗಡ 15 ಸಾವಿರ ರೂ. ಪಡೆದಿದ್ದರು, ಕೆಲವು ದಿನಗಳಿಂದ ಕಾಲ್ ಕೂಡ ರಿಸೀವ್ ಮಾಡುತ್ತಿರಲಿಲ್ಲ, ಹೀಗಾಗಿ ಅಂಗಡಿಯವ ಏನಾದರೂ ಮಾಡಲೇಬೇಕು, ಈತನಿಗೆ ಬುದ್ಧಿ ಕಲಿಸಬೇಕು ಎಂದು ಆಲೋಚಿಸಿದ್ದ.
ಒಂದೆಡೆ ಹಣವೂ ಹೋಯ್ತು ಇನ್ನೊಂದೆಡೆ ಕೆಲಸವೂ ಆಗಿಲ್ಲ ಎನ್ನುವ ಬೇಸರದಿಂದ ಆತ ಎಲೆಕ್ಟ್ರಿಷಿಯನ್ನ ಕೈಗೆ ಕೋಳ ಹಾಕಿ ಗಾಡಿಗೆ ಕಟ್ಟಿದ್ದಾರೆ.
ಬಳಿಕ ಪೊಲೀಸರು ಆಗಮಿಸಿದಾಗ ಇದ್ದ ವಿಚಾರವನ್ನು ಅಂಗಡಿ ಮಾಲೀಕ ವಿವರಿಸಿದ್ದಾರೆ, ಇದಾದ ಬಳಿಕ ಎಲೆಕ್ಟ್ರಿಷಿಯನ್ ಬಳಿ ಕೇಳಿದಾಗ ಹೌದು ನನಗೆ ಅವರು ಹಣ ನೀಡಿದ್ದರು, ನಾನು ಕೆಲಸವನ್ನೂ ಮಾಡಿಲ್ಲ ಹಣವನ್ನೂ ಹಿಂದಿರುಗಿಸಿಲ್ಲ ಎಂದು ಒಪ್ಪಿಕೊಂಡಿದ್ದಾನೆ.