ಬೆಳ್ತಂಗಡಿ: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 3.30 ಲಕ್ಷ ರೂ. ವಂಚನೆ
ವೇಣೂರು: ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ 3.30 ಲಕ್ಷ ರೂ. ಪಡೆದು ವಂಚಿಸಿರುವ ಬಗ್ಗೆ ಇಬ್ಬರು ಆರೋಪಿಗಳ ವಿರುದ್ಧ ವೇಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾರಾವಿಯ ಅಟ್ಯಡ್ಕ ನಿವಾಸಿ ಲಿಯೋ ಪಾಯಸ್ ವಂಚನೆಗೊಳಗಾದವರು.
ಪ್ರಕರಣದ ಓರ್ವ ಆರೋಪಿ ತಲೆಮರೆಸಿಕೊಂಡಿದ್ದು, ಮತ್ತೋರ್ವ ಆರೋಪಿಯನ್ನು ಮಂಗಳೂರಿನ ಸುಧೀರ್ ಎಂದು ಗುರುತಿಸಲಾಗಿದ್ದು, ಈತನ ಮೇಲೇ ಈಗಾಗಲೇ ಬಂಟ್ವಾಳ ನಗರ, ಗ್ರಾಮಾಂತರ, ಮೂಡುಬಿದಿರೆ, ಮಂಗಳೂರು ಸೇರಿದಂತೆ ಹಲವು ಠಾಣೆಗಳಲ್ಲಿ ಕೇಸುಗಳಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.
ಆರೋಪಿಗಳಿಬ್ಬರು ಜ. 18ರಂದು ನಾರಾವಿಯ ಅಟ್ಯಡ್ಕ ನಿವಾಸಿ ಲಿಯೋ ಪಾಯಸ್‌ರವರ ಮನೆಗೆ ಬಂದು ಅವರ ಪುತ್ರ ಸುರೇಶ್ ಪಾಯಸ್‌ಗೆ ವಿದೇಶದಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಮಾತುಕತೆ ನಡೆಸಿದ್ದಾರೆ.
ಈ ಬಗ್ಗೆ 1.25 ಲಕ್ಷ ರೂ. ನಗದು ಪಡೆದು ಬಳಿಕ ವಿವಿಧ ಹಂತಗಳಲ್ಲಿ 1.37 ಲಕ್ಷ ರೂ., 40 ಸಾವಿರ, 28 ಸಾವಿರ ರೂ. ನಗದನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡಿದ್ದಾರೆ. ಆರೋಪಿಗಳು ಬಳಿಕ ಸುರೇಶ್ ಪಾಯಸ್‌ಗೆ ಮೊಬೈಲ್ ಮೂಲಕ ಬಲ್ಗೇರಿಯಾಕ್ಕೆ ವಿಮಾನ ಟಿಕೆಟ್ ಬುಕ್ ಮಾಡಿದ ನಕಲಿಪ್ರತಿಯನ್ನು ವಾಟ್ಸ್ ಆ್ಯಪ್‌ನಲ್ಲಿ ಕಳುಹಿಸಿರುವ ಆರೋಪಿಗಳು ಮುಂಬಯಿಗೆ ಬರುವಂತೆ ತಿಳಿಸಿದ್ದಾರೆ. ಅದರಂತೆ ಸುರೇಶ್ ಪಾಯಸ್ ಮುಂಬಯಿಗೆ ತೆರಳಿದ್ದು, ಅಲ್ಲಿ ಆರೋಪಿಗಳು ವೀಸಾ ಹಾಗೂ ವಿದೇಶಿ ಕರೆನ್ಸಿ ತರುವುದಾಗಿ ಹೇಳಿ ಹೋದವರು ಮರಳದೇ ವಂಚಿಸಿದ್ದಾರೆ.
ಈ ಬಗ್ಗೆ ಕಳೆದ ಮಾರ್ಚ್ ತಿಂಗಳಲ್ಲಿ ಲಿಯೋ ಪಾಯಸ್‌ರವರ ಮೊಬೈಲ್‌ಗೆ ಮೆಸೇಜ್ ಮಾಡಿ ನಿಮ್ಮ ಪುತ್ರನ ಟಿಕೆಟ್ ಕ್ಯಾನ್ಸಲ್ ಆಗಿದ್ದು, ಹಣ ಮತ್ತು ಪಾಸ್‌ಪೋರ್ಟನ್ನು ಕೊರಿಯರ್ ಮೂಲಕ ಕಳುಹಿಸುವುದಾಗಿ ತಿಳಿಸಿ ಪಾಸ್‌ಪೋರ್ಟ್ ಮಾತ್ರ ಕಳುಹಿಸಿ ವಂಚಿಸಿದ್ದರು.
ಪ್ರಕರಣದ ಓರ್ವ ಆರೋಪಿ ಈಗಾಗಲೇ ಬಂಧನ ದಲ್ಲಿದ್ದು, ಮತ್ತೋರ್ವ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.