ಕೆನಡಾದಿಂದ 700 ಭಾರತೀಯ ವಿದ್ಯಾರ್ಥಿಗಳು ಗಡಿಪಾರು! ವಿದೇಶಾಂಗ ಸಚಿವರ ಮಧ್ಯ ಪ್ರವೇಶಕ್ಕೆ ಒತ್ತಾಯ
ನವದೆಹಲಿ: ಕೆನಡಾದಿಂದ ಗಡಿಪಾರು ಎದುರಿಸುತ್ತಿರುವ 700 ಭಾರತೀಯ ವಿದ್ಯಾರ್ಥಿಗಳ ವಿಷಯದಲ್ಲಿ ಮಧ್ಯ ಪ್ರವೇಶಿಸುವಂತೆ ವಿದೇಶಾಂಗ ವ್ಯವಹಾರ ಸಚಿವ ಎಸ್. ಜೈಶಂಕರ್ ಅವರನ್ನು ಪಂಜಾಬ್ ಎನ್ ಆರ್ ಐ ವ್ಯವಹಾರ ಸಚಿವ ಕುಲದೀಫ್ ಸಿಂಗ್ ಧಲಿವಾಲ್ ಕೋರಿದ್ದಾರೆ.
ಜೈಶಂಕರ್‌ಗೆ ಪತ್ರ ಬರೆದಿರುವ ಧಲಿವಾಲ್, ಈ ವಿಚಾರವಾಗಿ ಅವರನ್ನು ಭೇಟಿಯಾಗಲು ಸಮಯಾವಕಾಶ ಕೋರಿದ್ದಾರೆ. ಕೆನಡಾದ ಶಿಕ್ಷಣ ಸಂಸ್ಥೆಗಳ ಪ್ರವೇಶ ಪತ್ರಗಳು ನಕಲಿ ಎಂಬುದನ್ನು ಆ ದೇಶದ ಅಧಿಕಾರಿಗಳು ಕಂಡುಹಿಡಿದ ನಂತರ ಬಹುತೇಕ ಪಂಜಾಬ್‌ನ ಸುಮಾರು 700 ಭಾರತೀಯ ವಿದ್ಯಾರ್ಥಿಗಳು ಕೆನಡಾದಿಂದ ಗಡಿಪಾರು ಎದುರಿಸುತ್ತಿದ್ದಾರೆ. ಮಾರ್ಚ್‌ನಲ್ಲಿ ಈ ವಿದ್ಯಾರ್ಥಿಗಳು ಕೆನಡಾದಲ್ಲಿ ಶಾಶ್ವತವಾಗಿ ನೆಲೆಸಲು ಅರ್ಜಿ ಸಲ್ಲಿಸಿದಾಗ ವಿಷಯ ಬೆಳಕಿಗೆ ಬಂದಿದೆ.
ವಿದೇಶಾಂಗ ಸಚಿವರನ್ನು ಭೇಟಿಯಾಗಲು ಸಮಯಾವಕಾಶ ಕೇಳಿದ್ದೇನೆ. ಇದರಿಂದಾಗಿ ಇಡೀ ವಿಷಯವನ್ನು ವೈಯಕ್ತಿಕವಾಗಿ ಕೇಂದ್ರ ಸರ್ಕಾರದ ಗಮನಕ್ಕೆ ತರಬಹುದು” ಎಂದು ಧಲಿವಾಲ್ ಹೇಳಿದರು. ಗಡಿಪಾರು ಆಗಿರುವ 700 ವಿದ್ಯಾರ್ಥಿಗಳು ಮುಗ್ದರು ಮತ್ತು ವಂಚಕರ ಗುಂಪಿನಿಂದ ಮೋಸ ಹೋಗಿದ್ದಾರೆ ಎಂದು ವಿದೇಶಾಂಗ ಸಚಿವರಿಗೆ ಬರೆದಿರುವ ಪತ್ರದಲ್ಲಿ ಧಲಿವಾಲ್ ಹೇಳಿದ್ದಾರೆ. ಮತ್ತೊಮ್ಮೆ ಈ ವಿಷಯವನ್ನು ವೈಯಕ್ತಿಕವಾಗಿ ಪರಿಶೀಲಿಸಿದರೆ ಮತ್ತು ಕೆನಡಾದ ಹೈಕಮಿಷನ್, ಕೆನಡಾದ ಸರ್ಕಾರ ಸೇರಿದಂತೆ ಸಂಬಂಧಪಟ್ಟ ಏಜೆನ್ಸಿಗಳೊಂದಿಗೆ ಮಾತನಾಡಿದರೆ ಈ ವಿದ್ಯಾರ್ಥಿಗಳನ್ನು ಗಡಿಪಾರು ಮಾಡದಂತೆ ತಡೆಯಬಹುದು ಎಂದು ಧಲಿವಾಲ್ ಮನವಿ ಮಾಡಿದ್ದಾರೆ.