ಕಳೆದ ಅಕ್ಟೋಬರ್ ನಿಂದ ಸಿಗದ ಹಾಲಿನ ಪ್ರೋತ್ಸಾಹ ಧನ!
ಉಡುಪಿ: ರಾಜ್ಯ ಸರಕಾರವು ಕ್ಷೀರ ಸಿರಿ ಯೋಜನೆ ಅಡಿಯಲ್ಲಿ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಎಂಟು ತಿಂಗಳಿಂದ ಜಮೆಯಾಗದೆ ದಕ್ಷಿಣ ಕನ್ನಡ, ಉಡುಪಿಯ ಹಾಲು ಉತ್ಪಾದಕರು ಸಂಕಷ್ಟಕ್ಕೊಳಗಾಗಿದ್ದಾರೆ.
ಪ್ರೋತ್ಸಾಹ ಧನ 2022ರ ಅಕ್ಟೋಬರ್ನಿಂದ ಸ್ಥಗಿತಗೊಂ ಡಿದೆ. ಈಗಾಗಲೇ ದನಗಳ ಚರ್ಮಗಂಟು ರೋಗದಿಂದ ತತ್ತರಿಸಿ ಹೋಗಿರುವ ಹೈನುಗಾರರು ಸಿಗುವ ಕನಿಷ್ಠ ಮೊತ್ತದ ಪ್ರೋತ್ಸಾಹ ಧನವೂ ಸಕಾಲದಲ್ಲಿ ಲಭಿಸದೆ ಚಿಂತಿತರಾಗಿದ್ದಾರೆ.
ಸಾಮಾನ್ಯ ವರ್ಗದ ಹಾಲು ಉತ್ಪಾದಕರಿಗೆ ಕಳೆದ ಅಕ್ಟೋಬರ್ನಿಂದ ಪ್ರತೀ ಲೀ. ಹಾಲಿಗೆ ನೀಡುವ 5 ರೂ. ಪ್ರೋತ್ಸಾಹ ಧನ, ಎಸ್ಸಿ/ಎಸ್ಟಿ ಸಮುದಾಯದ ಹಾಲು ಉತ್ಪಾದಕರಿಗೆ ಫೆಬ್ರವರಿಯಿಂದ 5 ರೂ. ಪ್ರೋತ್ಸಾಹ ಧನ ಬಾಕಿ ಇದೆ ಎಂದು ಒಕ್ಕೂಟದ ಮೂಲಗಳಿಂದ ತಿಳಿದು ಬಂದಿದೆ.
5 ರೂ. ಪ್ರೋತ್ಸಾಹ ಧನ
ಹಾಲು ಉತ್ಪಾದಕರಿಗೆ ಹಾಲು ಒಕ್ಕೂಟಗಳು ವೈಜ್ಞಾನಿಕವಾಗಿ ಬೆಲೆ ನೀಡುತ್ತಿಲ್ಲ ಎಂಬ ಅಸಮಾಧಾನದ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು ಹೈನುಗಾರಿಕೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಒಕ್ಕೂಟಗಳು ನೀಡುವ ಬೆಲೆಯ ಜತೆಗೆ ಪ್ರತೀ ಲೀ.ಗೆ 5 ರೂ. ಪ್ರೋತ್ಸಾಹ ಧನ ನೀಡಲಾರಂಭಿಸಿತ್ತು. ಆದರೆ ಕಾಲಕಾಲಕ್ಕೆ ರೈತರಿಗೆ ತಲುಪಿಸುವಲ್ಲಿ ಸರಕಾರ ಆಸಕ್ತಿ ತೋರದೆ ಇರುವುದು ಸಮಸ್ಯೆಯಾಗಿ ಪರಿಣಮಿಸಿದೆ.
ಸರಕಾರದಿಂದ ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನ ಸಾಮಾನ್ಯವಾಗಿ 3-4 ತಿಂಗಳಿಗೊಮ್ಮೆ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ನಡುವೆ ಚುನಾವಣೆ ಪ್ರಕ್ರಿಯೆಯಿಂದಾಗಿ ತಡವಾಗಿರಬಹುದು. ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಪತ್ರ ಬರೆದು ಶೀಘ್ರ ಹೈನುಗಾರರಿಗೆ ಪ್ರೋತ್ಸಾಹಧನ ಬಿಡುಗಡೆ ಮಾಡುವಂತೆ ಮನವಿ ಮಾಡಲಾಗುವುದು.
ಕೆ. ಪಿ. ಸುಚರಿತ ಶೆಟ್ಟಿ, ಅಧ್ಯಕ್ಷರು, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ
ಹಿಂಡಿ ದರ ಏರಿಕೆ
ಹೈನುಗಾರರಿಗೆ ಪಶು ಆಹಾರ ಹಿಂಡಿಯ ದರ ಏರಿಕೆಯೂ ಹೊಡೆತ ನೀಡಿದೆ. ನಾಲ್ಕೈದು ತಿಂಗಳ ಹಿಂದೆ 50 ಕೆ.ಜಿ.ಗೆ 950 ರೂ. ಇದ್ದ ಹಿಂಡಿಯ ದರ ಪ್ರಸ್ತುತ 1,205 ರೂ.ಗೆ ಏರಿಕೆಯಾಗಿದೆ.
ಏಳೆಂಟು ತಿಂಗಳಿಂದ ಹೈನುಗಾರರಿಗೆ ಪ್ರೋತ್ಸಾಹ ಧನ ಬಿಡುಗಡೆಯಾಗಿಲ್ಲ. ಈಗ ಹೊಸ ಸರಕಾರ ಅಧಿಕಾರಕ್ಕೆ ಬಂದಿದ್ದು, ಆದ್ಯತೆ ಮೇರೆಗೆ ಶೀಘ್ರ ಪ್ರೋತ್ಸಾಹ ಧನ ಬಿಡುಗಡೆಗೆ ಕ್ರಮ ತೆಗೆದುಕೊಳ್ಳುವ ಮೂಲಕ ಹೈನುಗಾರರ ಸಂಕಷ್ಟಕ್ಕೆ ಸ್ಪಂದಿಸಬೇಕು. ಪಶು ಆಹಾರದ ಬೆಲೆಯು ಏರಿಕೆಯಾಗಿದ್ದು, ಐದು ರೂ. ಪ್ರೋತ್ಸಾಹ ಧನ ನೀಡಲು ಕ್ರಮ ತೆಗೆದುಕೊಳ್ಳಬೇಕು.
– ಸಾಣೂರು ನರಸಿಂಹ ಕಾಮತ್ ರಾಜ್ಯ ಸಂಚಾಲಕರು,ಹಾಲು ಪ್ರಕೋಷ್ಠ, ಸಹಕಾರ ಭಾರತಿ
735 ಸಹಕಾರ ಸಂಘಗಳಿವೆ
ದ.ಕ.ದಲ್ಲಿ 396, ಉಡುಪಿಯಲ್ಲಿ 339 ಸೇರಿದಂತೆ ಅವಿಭಜಿತ ದ.ಕ. ಜಿಲ್ಲೆಯಲ್ಲಿ 735 ಹಾಲು ಉತ್ಪಾದಕರ ಸಹಕಾರ ಸಂಘಗಳಿವೆ. ಈ ಪೈಕಿ ಉಡುಪಿಯಲ್ಲಿ 101, ದ.ಕ.ದಲ್ಲಿ 105 ಸಂಘಗಳು ಮಹಿಳೆಯರಿಂದಲೇ ನಡೆಸಲ್ಪಡುತ್ತಿವೆ. ಪ್ರಸ್ತುತ ದ.ಕ.ದಲ್ಲಿ 2.85 ಲಕ್ಷ ಲೀ., ಉಡುಪಿಯಲ್ಲಿ 1.65 ಲಕ್ಷ ಲೀ.ಗೂ ಅಧಿಕ ಸೇರಿದಂತೆ ದ.ಕ. ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ದೈನಂದಿನ 4.50 ಲಕ್ಷ ಲೀ. ಹಾಲು ಉತ್ಪಾದನೆಯಾಗುತ್ತಿದೆ. ಎರಡೂ ಜಿಲ್ಲೆಗಳಲ್ಲಿ ಸಾವಿರಾರು ಬಡ ಕುಟುಂಬಗಳು ಹೈನುಗಾರಿಕೆಯನ್ನೇ ಜೀವನಾಧಾರವಾಗಿ ಮಾಡಿಕೊಂಡಿವೆ.