ಒಡಿಶಾ ರೈಲು ಅಪಘಾತದಲ್ಲಿ ಮೃತಪಟ್ಟವರ ಸಂಖ್ಯೆ 233 ಕ್ಕೆ ಏರಿಕೆ ; 900 ಕ್ಕೂ ಅಧಿಕ ಮಂದಿಗೆ ಗಂಭೀರ ಗಾಯ! ಕ್ಷಣ ಕ್ಷಣಕ್ಕೂ ಹೆಚ್ಚುತ್ತಿದೆ ಸಾವಿನ ಸಂಖ್ಯೆ!
ಒಡಿಶಾ(ಜೂ.02): ಚೆನ್ನೈ -ಕೊರೊಮಂಡೆಲ್ ಎಕ್ಸ್‌ಪ್ರೆಸ್ ರೈಲು, ಯಶವಂತಪುರ-ಹೌರ ರೈಲು ಹಾಗೂ ಗೂಡ್ಸ್ ರೈಲು ಮುಖಾಮುಖಿ ಡಿಕ್ಕಿಯಾಗಿದೆ.ಒಡಿಶಾದ ಬಾಲಾಸೋರ್ ಜಿಲ್ಲೆಯ ಬಹನಗ ರೈಲು ನಿಲ್ದಾಣದ ಬಳಿ ಈ ಅಪಘಾತ ಸಂಭವಿಸಿದೆ. 12841 ಎಕ್ಸ್‌ಪ್ರೆಸ್ ರೈಲು ಡಿಕ್ಕಿಯಾದ ರಭಸಕ್ಕೆ ಪ್ರಯಾಣಿಕರಿದ್ದ ರೈಲಿನ ಹಲವು ಬೋಗಿಗಳು ಹಳಿ ತಪ್ಪಿದೆ. ಭೀಕರ ಅಪಘಾತದಲ್ಲಿ ಹಲವರು ಮೃತಪಟ್ಟಿದ್ದಾರೆ. ಪಶ್ಚಿಮ ಬಂಗಾಳದ ಶಾಲಿಮಾರ್ ರೈಲು ನಿಲ್ದಾಣದಿಂದ ಚೆನ್ನೈಗೆ ಆಗಮಿಸುತ್ತಿದ್ದ ಈ ರೈಲು ಒಡಿಶಾದಲ್ಲಿ ಯಶವಂತಪುರ ಪ್ಯಾಸೆಂಜರ್ ರೈಲು ಹಾಗೂ ಸರಕು ಸಾಗಾಣೆ ರೈಲಿಗೆ ಡಿಕ್ಕಿ ಹೊಡೆದಿದೆ. ಕ್ಷಣ ಕ್ಷಣಕ್ಕೂ ಸಾವಿನ ಸಂಖ್ಯೆ ಹೆಚ್ಚುತ್ತಿದೆ. 200 ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಗಾಯಾಳುಗಳ ಸಂಖ್ಯೆ 900ಕ್ಕೂ ಹೆಚ್ಚಿದೆ. ಮೃತರ ಕುಟುಂಬಕ್ಕೆ 10 ಲಕ್ಷ ರೂಪಾಯಿ, ಗಂಭೀರಗಾಯಗೊಂಡವರಿಗೆ 2 ಲಕ್ಷ ರೂಪಾಯಿ ಹಾಗೂ ಸಣ್ಣ ಗಾಯಗಳಾದ ಪ್ರಯಾಣಿಕರಿಗೆ 50,000 ರೂಪಾಯಿ ಪರಿಹಾರವನ್ನು ರೈಲ್ವೇ ಇಲಾಖೆ ಘೋಷಿಸಿದೆ.
ಎಕ್ಸ್‌ಪ್ರೆಸ್ ರೈಲಿನ 20ಕ್ಕೂ ಹೆಚ್ಚು ಬೋಗಿಗಳು ಹಳಿ ತಪ್ಪಿದೆ. ಮಾಹಿತಿ ತಿಳಿದ ತಕ್ಷಣ ರೈಲ್ವೇ ಪೊಲೀಸರು, ರಕ್ಷಣಾ ತಂಡ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ. ಬಾಲಾಸೋರ್ ಜಿಲ್ಲಾಧಿಕಾರಿ ಸ್ಥಳಕ್ಕೆ ಧಾವಿಸಿದ್ದು, ಅಗತ್ಯ ಕ್ರಮಕ್ಕೆ ಸೂಚಿಸಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸುವ ಕಾರ್ಯ ನಡೆಯುತ್ತಿದೆ. ಹಲವು ಬೋಗಿಗಳು ಹಳಿ ತಪ್ಪಿದ ಕಾರಣ ರಕ್ಷಣಾ ಕಾರ್ಯ ನಿರಂತರವಾಗಿ ಸಾಗಿದೆ.
#WATCH | Coromandel Express derails near Bahanaga station in Balasore, Odisha. pic.twitter.com/9Lk2qauW9v
— ANI (@ANI) June 2, 2023
ಶಾಲಿಮಾರ್ ರೈಲು ನಿಲ್ದಾಣದಿಂದ ಇಂದು 3.30pm ಕ್ಕೆ ಪ್ರಯಾಣ ಆರಂಭಿಸಿದ ಕೊರೊಮಂಡಲ್ ಎಕ್ಸ್‌ಪ್ರೆಸ್ ರೈಲು, ಸಂಜೆ 6.30ರ ವೇಳೆಗೆ ಒಡಿಶಾದ ಬಾಲಾಸೋರ್ ಜಿಲ್ಲೆಗೆ ತಲುಪಿದೆ. ನಾಳೆ ಸಂಜೆ 4.30ಕ್ಕೆ ಈ ರೈಲು ಚೆನ್ನೈನ ಡಾ. ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ತಲುಪಬೇಕಿತ್ತು. ಆದರೆ ಸಂಜೆ 7.30ರ ಸುಮಾರಿಗೆ ಬಹನಗ ರೈಲು ನಿಲ್ದಾಣದ ಸಮೀಪಿದಲ್ಲಿ ಅಪಘಾತಕ್ಕೀಡಾಗಿದೆ. ಬೆಂಗಳೂರಿನ ಯಶವಂತಪುರದಿಂದ ಪಶ್ಚಿಮ ಬಂಗಾಳದ ಹೌರಾಗೆ ಸಾಗುತ್ತಿದ್ದ ರೈಲು ಡಿಕ್ಕಿಯಾಗಿದೆ. ಜೊತೆಗೆ ಸರಕು ಸಾಗಣೆ ರೈಲು ಡಿಕ್ಕಿಯಾಗಿದೆ. ಯಶವಂತಪುರ ರೈಲಿನ ನಾಲ್ಕು ಬೋಗಿಗಳು ಹಳಿ ತಪ್ಪಿ ಅಪಘಾತವಾಗಿದ್ದರೆ, ಇತ್ತ ಕೊರೊಮಂಡಲ್ ರೈಲಿನ 20ಕ್ಕೂ ಹೆಚ್ಚು ಬೋಗಿಗಳು ಅಪಘಾತಕ್ಕೀಡಾಗಿದೆ.
ಘಟನೆ ಮಾಹಿತಿ ಪಡೆದ ಪ್ರಧಾನಿ ಮೋದಿ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ಒಡಿಶಾದಲ್ಲಿ ಸಂಭವಿಸಿದ ರೈಲು ಅಪಘಾತದಿಂದ ತೀವ್ರ ನೋವಾಗಿದೆ. ಈ ಕಠಿಣ ಸಂದರ್ಭದಲ್ಲಿ ದುಃಖಿತ ಕುಟುಂಬದ ಜೊತೆ ನಿಲ್ಲುತ್ತೇನೆ. ಗಾಯಾಳುಗಳು ಬೇಗ ಚೇತರಿಸಿಕೊಳ್ಳಲಿ. ರೈಲ್ವೇ ಸಚಿವರ ಜೊತೆ ಮಾತನಾಡಿದ್ದೇನೆ. ದುರಂತ ಸ್ಥಳದಲ್ಲಿ ರಕ್ಷಣಾ ಕಾರ್ಯ ನಡೆಯುತ್ತಿದೆ. ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲಾ ನೆರವು ನೀಡಲಾಗುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಕೋಲ್ಕತಾದಿಂದ ಈ ರೈನಲ್ಲಿ ಕೆಲ ಕನ್ನಡಿಗರು ಪ್ರಯಾಣ ಮಾಡಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗುತ್ತಿದೆ. ಮೂಲಗಳ ಪ್ರಕಾರ 20ಕ್ಕೂ ಹೆಚ್ಚು ಭೋಗಿಗಳು ಹಳಿ ತಪ್ಪಿದೆ. ಇದರಿಂದ ದುರಂತ ಅತ್ಯಂತ ಗಂಭೀರವಾಗಿದ್ದು, ಸಾವು ನೋವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಇತ್ತ ಯಶವಂತಪುರ ರೈಲಿನಲ್ಲಿ ಹಲವು ಕನ್ನಡಿಗರು ಪ್ರಯಾಣ ಮಾಡಿದ್ದಾರೆ. ಇದೀಗ ಆತಂಕ ಹೆಚ್ಚಾಗಿದೆ.
ಅಪಘಾತ ಮಾಹಿತಿ ತಿಳಿಯುತ್ತಿದ್ದಂತೆ ಎಕ್ಸ್‌ಪ್ರೆಸ್ ರೈಲಿನಲ್ಲಿದ್ದ ಪ್ರಯಾಣಿಕರ ಸಂಬಂಧಿಕರು, ಆಪ್ತರು ಒಡಿಶಾದತ್ತ ದೌಡಾಯಿಸಿದ್ದಾರೆ. ಇತ್ತ ರೈಲ್ವೇ ಇಲಾಖೆ ಸಹಾಯವಾಣಿ ತೆರೆದಿದೆ.