ಮಹಿಳಾ ಏಷ್ಯಾ ಕಪ್ ಗೆ ಭಾರತ ಎ ತಂಡದಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಗೆ ಅವಕಾಶ
ಮುಂಬೈ: ಜೂನ್ 12 ರಂದು ಹಾಂಗ್ ಕಾಂಗ್ ನಲ್ಲಿ ಪ್ರಾರಂಭವಾಗುವ ಎಸಿಸಿ ಎಮರ್ಜಿಂಗ್ ಮಹಿಳಾ ಏಷ್ಯಾ ಕಪ್ ಹೆ ಭಾರತೀಯ ಎ ತಂಡವನ್ನು ಪ್ರಕಟಿಸಲಾಗಿದೆ. ಬ್ಯಾಟಿಂಗ್ ಆಲ್ ರೌಂಡರ್ ಶ್ವೇತಾ ಸೆಹ್ರಾವತ್ ಅವರು 14 ಸದಸ್ಯರ ಭಾರತೀಯ ‘ಎ’ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತ ‘ಎ’ ಜೂನ್ 13 ರಂದು ಆತಿಥೇಯ ಹಾಂಕಾಂಗ್ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.
“ಅಖಿಲ ಭಾರತ ಮಹಿಳಾ ಆಯ್ಕೆ ಸಮಿತಿಯು ಮುಂಬರುವ ಎಸಿಸಿ ಎಮರ್ಜಿಂಗ್ ಮಹಿಳಾ ಏಷ್ಯಾ ಕಪ್ 2023 ಗಾಗಿ ಭಾರತ ‘ಎ’ (ಉದಯೋನ್ಮುಖ) ತಂಡವನ್ನು ಶುಕ್ರವಾರ ಪ್ರಕಟಿಸಿದೆ” ಎಂದು ಬಿಸಿಸಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಭಾರತ ಎ ತಂಡದಲ್ಲಿ ಕರ್ನಾಟಕದ ಶ್ರೇಯಾಂಕಾ ಪಾಟೀಲ್ ಸ್ಥಾನ ಪಡೆದಿದ್ದಾರೆ. ಅಲ್ಲದೆ ಕರ್ನಾಟಕ ಮೂಲದ ಆಟಗಾರ್ತಿ ಮಮತಾ ಮಡಿವಾಳ ಕೂಡಾ ಸ್ಥಾನ ಗಿಟ್ಟಿಸಿದ್ದಾರೆ.
ಪಂದ್ಯಾವಳಿಯಲ್ಲಿ ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಭಾರತ ತಂಡವು ಎ ಗುಂಪಿನ ಭಾಗವಾಗಿದ್ದು, ಇದರಲ್ಲಿ ಆತಿಥೇಯ ಹಾಂಗ್ ಕಾಂಗ್, ಥಾಯ್ಲೆಂಡ್ ‘ಎ’ ಮತ್ತು ಪಾಕಿಸ್ತಾನ ‘ಎ’ ಸಹ ಇದೆ. ಬಾಂಗ್ಲಾದೇಶ ‘ಎ’, ಶ್ರೀಲಂಕಾ ‘ಎ’, ಮಲೇಷ್ಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್ ತಂಡಗಳು ಬಿ ಗುಂಪಿನಲ್ಲಿವೆ. ಜೂನ್ 21 ರಂದು ಫೈನಲ್ ಪಂದ್ಯ ನಡೆಯಲಿದೆ.
ಭಾರತ ‘ಎ’ ತಂಡ: ಶ್ವೇತಾ ಸೆಹ್ರಾವತ್ (ನಾಯಕಿ), ಸೌಮ್ಯ ತಿವಾರಿ (ಉಪನಾಯಕಿ), ತ್ರಿಶಾ ಗೊಂಗಡಿ, ಮುಸ್ಕಾನ್ ಮಲಿಕ್, ಶ್ರೇಯಾಂಕಾ ಪಾಟೀಲ್, ಕನಿಕಾ ಅಹುಜಾ, ಉಮಾ ಚೆಟ್ರಿ (ವಿಕೆಟ್ ಕೀಪರ್), ಮಮತಾ ಮಡಿವಾಳ (ವಿಕೆಟ್ ಕೀಪರ್), ಟಿಟಾ ಯಶಸ್ರಿ ಎಸ್, ಕಶ್ವೀ ಗೌತಮ್, ಪಾರ್ಶವಿ ಚೋಪ್ರಾ, ಮನ್ನತ್ ಕಶ್ಯಪ್, ಬಿ ಅನುಷಾ.