ನೈತಿಕ ಪೊಲೀಸ್ ಗಿರಿ: ಸೋಮೇಶ್ವರ ಬೀಚ್ನಲ್ಲಿ ಕೇರಳ ಮೂಲದ ವಿದ್ಯಾರ್ಥಿಗಳ ಮೇಲೆ ಹಲ್ಲೆ
ಮಂಗಳೂರು: ಕರ್ನಾಟಕದಲ್ಲಿ ಮತ್ತೊಂದು ನೈತಿಕ ಪೊಲೀಸ್ ಗಿರಿ ವರದಿಯಾಗಿದ್ದು, ಸೋಮೇಶ್ವರ ಬೀಚ್ನಲ್ಲಿ ಕೇರಳ ಮೂಲದ 6 ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಕರಾವಳಿ ನಗರ ಮಂಗಳೂರಿನ ಸೋಮೇಶ್ವರ ಬೀಚ್ನಲ್ಲಿ (Someshwar Beach) ನೈತಿಕ ಪೊಲೀಸ್ ಗಿರಿ (Moral Policing) ನಡೆದಿದ್ದು, ಕೇರಳ ಮೂಲದ 6 ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಲಾಗಿದೆ. ಮೂವರು ಹಿಂದೂ ವಿದ್ಯಾರ್ಥಿನಿಯರು, ಮೂವರು ಮುಸ್ಲಿಂ ವಿದ್ಯಾರ್ಥಿಗಳ ಮೇಲೆ ದಾಳಿ ನಡೆದಿದೆ.
ಮೂಲಗಳ ಪ್ರಕಾರ ಮಂಗಳೂರಿನ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಸಮುದ್ರ ತೀರದಲ್ಲಿ ವಿಹರಿಸುತ್ತಿದ್ದರು. ಇದೇ ವೇಳೆ ತಂಡವೊಂದು ಹಲ್ಲೆ ನಡೆಸಿದೆ ಎನ್ನಲಾಗಿದೆ.
ಕೇರಳದ ಕಣ್ಣೂರಿನ ಯುವಕರು ಹಾಗೂ ಕಾಸರಗೋಡಿನ ಯುವತಿಯರು ಸೋಮೇಶ್ವರ ಬೀಚ್ಗೆ ವಿಹಾರಕ್ಕೆ ಬಂದಿದ್ದರು. ಹಿಂದೂ ವಿದ್ಯಾರ್ಥಿನಿಯರ ಜೊತೆ ಬಂದಿದ್ದಕ್ಕೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಮೂವರು ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆದಿದೆ. ಗಾಯಾಳು ವಿದ್ಯಾರ್ಥಿಗಳನ್ನು ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರು ವಿದ್ಯಾರ್ಥಿನಿಯರು ವಾಪಸ್ ಊರಿಗೆ ತೆರಳಿದ್ದಾರೆ ಎನ್ನಲಾಗಿದೆ. ಘಟನೆ ಬಗ್ಗೆ ಉಳ್ಳಾಲ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ 3ನೇ ಘಟನೆ
ಇನ್ನು ರಾಜ್ಯದಲ್ಲಿ ಇನ್ಮುಂದೆ ನೈತಿಕ ಪೊಲೀಸ್ಗಿರಿಗೆ ಅವಕಾಶ ಇಲ್ಲ, ಹೀಗೆ ಮಾಡುವವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಇತ್ತೀಚೆಗೆ ಪೊಲೀಸ್ ಇಲಾಖೆಗೆ ಖಡಕ್ ಸೂಚನೆ ನೀಡಿದ್ದರು. ಬಳಿಕ ಅಧಿಕಾರಿಗಳು ಕೂಡ ನೈತಿಕ ಪೊಲೀಸ್ ಗಿರಿ ನಡೆಸುವವರಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಇದರ ಬೆನ್ನಲ್ಲೇ ನೈತಿಕ ಪೊಲೀಸ್ ಗಿರಿಯ 3ನೇ ಘಟನೆ ವರದಿಯಾಗಿದೆ.
ಈ ಹಿಂದೆ ಚಿಕ್ಕಬಳ್ಳಾಪುರ ನಗರದ ಗೋಪಿಕಾ ಚಾಟ್ಸ್ ಬಳಿ ಹಿಂದೂ ಯುವಕನ ಜೊತೆ ಮುಸ್ಲಿಂ ಯುವತಿ ಹೋಟೆಲ್ಗೆ ಹೋಗಿದಕ್ಕೆ ಮುಸ್ಲಿಂ ಯುವಕರ ಗುಂಪು ನೈತಿಕ ಪೊಲೀಸ್ ಗಿರಿ ನಡೆಸಿತ್ತು. ಆ ನಂತರ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಕೂಡ ನೈತಿಕ ಪೊಲೀಸ್ ಗಿರಿ ನಡೆದಿತ್ತು.
ಮಳೆ: ಹೆಬ್ರಿ ಪರಿಸರದಲ್ಲಿ ಮನೆಗಳು, ತೋಟಕ್ಕೆ ಹಾನಿ
ಉಡುಪಿ: ಜಿಲ್ಲೆಯ ಹಲವೆಡೆ ಗುರುವಾರ ಸಾಧಾರಣ ಮಳೆಯಾಗಿದೆ. ಬುಧವಾರ ತಡರಾತ್ರಿ, ಗುರುವಾರ ಮುಂಜಾನೆ ಸುರಿದ ಮಳೆ, ಗಾಳಿಗೆ ಹೆಬ್ರಿ ಭಾಗದಲ್ಲಿ ಮನೆಗಳು, ತೋಟಕ್ಕೆ ಹಾನಿ ಸಂಭವಿಸಿದೆ.
ಬ್ರಹ್ಮಾವರ, ಉಡುಪಿ, ಹೆಬ್ರಿ ಭಾಗದಲ್ಲಿ ಹೆಚ್ಚು ಮಳೆ ಸುರಿದಿದೆ. ಹೆಬ್ರಿ ತಾಲೂಕಿನ ಬೆಳ್ವೆಯಲ್ಲಿ ಭಾರತಿ, ಗಿರಿಯ ಪೂಜಾರಿ ಅವರ ಮನೆಗೆ ಹಾನಿ ಸಂಭವಿಸಿದೆ. ಶ್ರೀಮತಿ, ಬಚ್ಚಹಾಂಡ, ಶೀನಹಾಂಡ ಅವರ ಅಡಿಕೆ, ತೆಂಗು, ಮಾವಿನ ಮರಗಳಿಗೆ ಹಾನಿಯಾಗಿದೆ.
ಗುರುವಾರ ಹಗಲು ಮೋಡ, ಬಿಸಿಲಿನ ವಾತಾವರಣವಿತ್ತು. ಸಂಜೆ ಮಣಿಪಾಲ, ಉಡುಪಿ ಸುತ್ತಮುತ್ತ ಅಲ್ಪ ಮಳೆಯಾಗಿದೆ.
ಮೂಲ್ಕಿಯಲ್ಲಿ ಉತ್ತಮ ಮಳೆ
ಮಂಗಳೂರು: ಮೂಲ್ಕಿಯಲ್ಲಿ ಗುರುವಾರ ಮಧ್ಯಾಹ್ನ ಉತ್ತಮ ಮಳೆಯಾಗಿದೆ. ಜೂ. 2ರಿಂದ 5ರ ವರೆಗೆ ಎಲ್ಲೋ ಅಲರ್ಟ್ ಘೋಷಿಸ ಲಾಗಿದ್ದು, ಈ ವೇಳೆ ಕರಾವಳಿ ಭಾಗದಲ್ಲಿ ಗುಡುಗು ಸಹಿತ ಭಾರೀ ಮಳೆ ಯಾಗುವ ಸಾಧ್ಯತೆ ಇದೆ.
ಮಂಗಳೂರು ನಗರ ಸೇರಿದಂತೆ ದ.ಕ. ಜಿಲ್ಲೆ ಯಾದ್ಯಂತ ಬಿಸಿಲು ಮತ್ತು ಮೋಡದಿಂದ ಕೂಡಿದ ವಾತಾವರಣ ಇತ್ತು. ಕೆಲವೆಡೆ ಸಾಧಾ ರಣ ಮಳೆ ಸುರಿದಿದೆ.
ಸಿಡಿಲು ಬಡಿದು ಗಾಯ
ಪುತ್ತೂರು : ಕೊಟ್ಟಿಗೆಯಲ್ಲಿ ಮಲಗಿದ್ದ ವ್ಯಕ್ತಿಗೆ ಸಿಡಿಲು ಬಡಿದು ಗಾಯ ಗೊಂಡ ಘಟನೆ ಪುತ್ತೂರಿನ ಅರಿಯಡ್ಕ ಗ್ರಾಮದ ಶೇಖಮಲೆ ಜಾರತ್ತಾರಿನಲ್ಲಿ ಬುಧವಾರ ಮಧ್ಯರಾತ್ರಿ ಸಂಭವಿಸಿದೆ.
ಜಾರತ್ತಾರು ರಾಮ ಅವರ ಮನೆಯ ಕೊಟ್ಟಿಗೆಗೆ ಸಿಡಿಲು ಬಡಿದಿದೆ. ರಾಮ ಕೊಟ್ಟಿಗೆಯಲ್ಲಿ ಮಲಗಿದ್ದರು. ಅವರ ಬೆನ್ನಿನ ಭಾಗಕ್ಕೆ ಗಾಯಗಳಾಗಿದ್ದು ಪುತ್ತೂರು ಆಸ್ಪತ್ರೆಗೆ ದಾಖಲಿಸಲಾಗಿದೆ.