ಪುನರ್ಪುಳಿ ಹಣ್ಣಿನಲ್ಲಿ ಮತ್ತು ಸಿಪ್ಪೆಯಲ್ಲಿರುವ ಬಹಳ ಉಪಕಾರಿ ಪ್ರಯೋಜನಗಳಾವು? ಇಲ್ಲಿದೆ ಮಾಹಿತಿ
ಪುನರ್ಪುಳಿ ಹಣ್ಣನ್ನು (kokum fruit) ನೀವು ನೋಡಿರುವಿರಿ ಇದನ್ನು ಕೋಕಂ ಎಂದೂ ಕರೆಯಲಾಗುತ್ತದೆ. ಇದೊಂದು ರೀತಿಯ ಔಷಧೀಯ ಹಣ್ಣು ಎಂದೇ ಹೇಳಬಹುದು. ಪುನರ್ಪುಳಿಯನ್ನು ಒಣಗಿಸಿ ವರ್ಷಾನುಗಟ್ಟಲೆ ಇಡಬಹುದಾಗಿದೆ. ಪುನರ್ಪುಳಿ ದೇಹವನ್ನು ತಂಪಾಗಿಸುವುದಲ್ಲದೆ ಪಿತ್ತ ದೋಷಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ. ಗ್ಯಾಸ್ಟ್ರಿಕ್, ಉರಿ ಸಂವೇದನೆ, ಆಮ್ಲೀಯತೆಯ ಸಮಸ್ಯೆಗೂ ಈ ಹಣ್ಣು ಪ್ರಯೋಜನಕಾರಿಯಾಗಿದೆ.
ಬೇಸಿಗೆ ಹಣ್ಣು ಅಂತಲೇ ಹೆಸರುವಾಸಿಯಾದ ಪುನರ್ಪುಳಿಯ (ಮುರುಗಲ ಹಣ್ಣು) ಶರಬತ್ತು ಬೇಸಿಗೆಯಲ್ಲಿ ಸೇವನೆ ಮಾಡಲು ಯೋಗ್ಯವಾದ ಪಾನೀಯವಾಗಿದೆ. ಇದು ಉತ್ಕರ್ಷಣ ನಿರೊಧಕಗಳಿಂದ ಸಮೃದ್ಧವಾಗಿರುವ ಹಣ್ಣಾಗಿದ್ದು, ಹಲವಾರು ಆರೋಗ್ಯ ಪ್ರಯೋಜಗಳನ್ನು ಹೊಂದಿದೆ.
ಬೇಸಿಗೆಯಲ್ಲಿ ಹೆಚ್ಚಿನ ತಾಪಮಾನ ಮತ್ತು ಶಾಖದಿಂದ ಪರಿಹಾರ ಪಡೆಯಲು ದೇಹವನ್ನು ತಂಪಾಗಿರಿಸುವ ಮತ್ತು ಉಲ್ಲಾಸದಾಯಕವಾಗಿರಿಸುವ ಪಾನೀಯಗಳನ್ನು ನಾವು ಸೇವಿಸುತ್ತಿರುತ್ತೇವೆ. ಆದರೆ ಈ ಕೆಲವೊಂದು ಶೂನ್ಯ ಕ್ಯಾಲೋರಿ ಪಾನೀಯಗಳ ಜೊತೆಗೆ ನಮಗೆ ಈ ಬೇಸಿಗೆಯಲ್ಲಿ ಸ್ವಲ್ಪ ಹೆಚ್ಚು ಪೌಷ್ಟಿಕಾಂಶದ ಅಗತ್ಯವಿರುತ್ತದೆ. ಈ ಕ್ರಮದಲ್ಲಿ ಬೇಸಿಗೆಯಲ್ಲಿ ಸಿಗುವ ಋತುಮಾನದ ಹಣ್ಣುಗಳು ಉತ್ತಮ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ. ಬೇಸಿಯಲ್ಲಿ ಸಿಗುವ ಹಣ್ಣುಗಳಲ್ಲಿ ಕೋಕಮ್ ಅಥವಾ ಪುನರ್ಪುಳಿ (ಮುರುಗಲ ಹಣ್ಣು) ಕೂಡಾ ಒಂದು. ಈ ಹಣ್ಣಿನ ಜ್ಯೂಸ್ ಬೇಸಿಗೆಯಲ್ಲಿ ಸೇವನೆ ಮಾಡಲು ಉತ್ತಮವಾದ ಪಾನೀಯವಾಗಿದೆ. ಪುನರ್ಪುಳಿಯು ವಿಟಮಿನ್ ಎ, ವಿಟಮಿನ್ ಬಿ 3, ವಿಟಮಿನ್ ಸಿ ಮತ್ತು ಖನಿಜಗಳಾದ ಕ್ಯಾಲ್ಸಿಯಂ, ಕಬ್ಬಿಣ, ಮ್ಯಾಂಗನೀಸ್, ಪೊಟ್ಯಾಸಿಯಮ್ ಮತ್ತು ಸತುವುಗಳಂತಹ ಅಗತ್ಯ ಜೀವಸತ್ವಗಳಲ್ಲಿ ಸಮೃದ್ಧವಾಗಿದೆ. ಇದು ಉತ್ತಮ ಪ್ರಮಾಣದ ಫೋಲಿಕ್ ಆಮ್ಲ, ಆಸ್ಕೋರ್ಬಿಕ್ ಆಮ್ಲ, ಅಸಿಟಿಕ್ ಆಮ್ಲ, ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ ಮತ್ತು ಫೈಬರ್ ಅನ್ನು ಸಹ ಒಳಗೊಂಡಿದೆ.
- ಬುದ್ಧಿ ಶಕ್ತಿಯನ್ನು ಹೆಚ್ಚಿಸುತ್ತದೆ.
- ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಸಮತೋಲನದಲ್ಲಿ ಇಡುತ್ತದೆ.
- ಒಡೆದ ಹಿಮ್ಮುಡಿಗಳಿಗೆ ಇದರ ಎಣ್ಣೆ ಉಪಯೋಗಿಸಬಹುದು.
- ಜೀರ್ಣ ಕ್ರಿಯೆಗೆ ಸಹಾಯಕ .
- ಪಿತ್ತದ ತೊಂದರೆಗೆ ಉತ್ತಮ.
- ತೂಕ ನಿಯಂತ್ರಣಕ್ಕೆ ಸಹಾಯಕ.
- ರೋಗಪ್ರತಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ.
- ಎಂಟಿ ಏಜಿಂಗ್ ಗುಣಗಳನ್ನು ಹೊಂದಿದೆ.
- ಸೌಂದರ್ಯ ವರ್ಧಕದಲ್ಲಿ ಉಪಯೋಗ.
- ತಲೆ ಸುತ್ತುವುದನ್ನ ಕಡಿಮೆ ಮಾಡುತ್ತದೆ.
- ಸುಸ್ತು ನಿವಾರಣೆಗೆ ಅತ್ಯಂತ ಉಪಯುಕ್ತ.
- ದೇಹವನ್ನು ತಂಪಾಗಿಡುತ್ತದೆ
ತೂಕ ಇಳಿಕೆಗೆ ಸಹಕಾರಿ
ಪುನರ್ಪುಳಿ HCA ಹೈಡ್ರಾಕ್ಸಿಸಿಟ್ರಿಕ್ ಆಮ್ಲ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದು ಹಸಿವನ್ನು ಕಡಿಮೆ ಮಾಡುವ ಮೂಲಕ ಕೆಲಸ ಮಾಡುತ್ತದೆ, ಇದು ತೂಕ ನಷ್ಟ ಪ್ರಯಾಣವನ್ನು ಸುಲಭಗೊಳಿಸುತ್ತದೆ. ಇದರೊಂದಿಗೆ, ಇದು ಕಾರ್ಬೋಹೈಡ್ರೇಟ್ಗಳನ್ನು ಕೊಬ್ಬಾಗಿ ಪರಿವರ್ತಿಸುವ ಪ್ರಕ್ರಿಯೆಯನ್ನು ನಿಯಂತ್ರಿಸುತ್ತದೆ. ಇದು ದೇಹದಲ್ಲಿ ಹೆಚ್ಚುವರಿ ಕೊಬ್ಬಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಹೃದಯದ ಆರೋಗ್ಯ:
ಪುನರ್ಪುಳಿ ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಫೈಬರ್ನಿಂದ ಸಮೃದ್ಧವಾಗಿದೆ. ಅಲ್ಲದೆ ಇದು ಶೂನ್ಯ ಕೊಲೆಸ್ಟ್ರಾಲ್ನ್ನು ಹೊಂದಿರುತ್ತದೆ. ಆದ್ದರಿಂದ ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದೆ. ಇದರಲ್ಲಿರುವ ಮೆಗ್ನೇಷಿಯಂ, ಪೊಟ್ಯಾಷಿಯಂ, ಮತ್ತು ಮ್ಯಾಂಗನೀಸ್ ನಂತಹ ಖನಿಜಗಳು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಪರಿಣಾಮವಾಗಿ ಇದು ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ.
ಖಿನ್ನತೆ ಮತ್ತು ಒತ್ತಡವನ್ನು ನಿವಾರಿಸುತ್ತದೆ
ಪುನರ್ಪುಳಿ ಫ್ಲೇವನಾಯ್ಡ್ಗಳು, ಹೈಡ್ರಾಕ್ಸಿಸಿಟ್ರಿಕ್ ಆಮ್ಲ, ಗಾರ್ಸಿನಾಲ್ ಮತ್ತು ಆಂಥೋಸಯಾನಿನ್ಗಳನ್ನು ಹೊಂದಿರುತ್ತದೆ. ಇವೆಲ್ಲವೂ ಮೆದುಳಿನಲ್ಲಿ ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಲು ಕೊಡುಗೆ ನೀಡುತ್ತವೆ. ಇದು ಆತಂಕ ಮತ್ತು ಖಿನ್ನತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಜೀರ್ಣಕ್ರಿಯೆಗೆ ಸಹಕಾರಿ:
ಸಿಹಿಯಾದ, ಕಟುವಾದ ಮತ್ತು ಹೆಚ್ಚು ಉಲ್ಲಾಸಕರವಾದ ಪುನರ್ಪುಳಿ ಶರಬತ್ತು ಕರುಳಿನ ಆರೋಗ್ಯವನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಆಮ್ಲೀಯತೆ ಮತ್ತು ಅಜೀರ್ಣದಿಂದ ಬಳಲುತ್ತಿರುವ ರೋಗಿಗಳು ಈ ಪಾನೀಯವನ್ನು ಕುಡಿಯುವುದರಿಂದ ಅಪಾರ ಪ್ರಯೋಜನಗಳನ್ನು ಪಡೆಯಬಹುದಾಗಿದೆ. ಇದರ ಹೆಲ್ಮಿಂಟಿಕ್ ವಿರೋಧಿ ಗುಣಲಕ್ಷಣಗಳು ಹೊಟ್ಟೆಯಿಮದ ಆಸ್ಕರಿಸ್ನಂತಹ ಹುಳಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.
ಕ್ಯಾನ್ಸರ್ಗೆ ಪ್ರಯೋಜನಕಾರಿ
ಈ ಹಣ್ಣನ್ನು ಸೇವಿಸುವುದರಿಂದ ಕ್ಯಾನ್ಸರ್ ಬರುವ ಅಪಾಯ ಕಡಿಮೆಯಾಗುತ್ತದೆ. ಇದು ಆಂಟಿಆಕ್ಸಿಡೆಂಟ್ಗಳ ಜೊತೆಗೆ ಆಂಟಿ-ಕಾರ್ಸಿನೋಜೆನಿಕ್ ಗುಣಲಕ್ಷಣಗಳನ್ನು ಹೊಂದಿದೆ, ಇದು ಸ್ವತಂತ್ರ ರಾಡಿಕಲ್ಗಳನ್ನು ತೆಗೆದುಹಾಕುವ ಮೂಲಕ ದೇಹದಲ್ಲಿನ ಕೋಶಗಳ ಅಸಹಜ ಬೆಳವಣಿಗೆಯನ್ನು ತಡೆಯುತ್ತದೆ.
ಚರ್ಮಕ್ಕೆ ಒಳ್ಳೆಯದು:
ಪುನರ್ಪುಳಿ ಹಣ್ಣು ಒಂದು ಪರಿಣಾಮಕಾರಿ ಉತ್ಕರ್ಷಣ ನಿರೋಧಕವಾಗಿದ್ದು, ಅದು ವಯಸ್ಸಾಗುವಿಕೆಯ ಲಕ್ಷಣವನ್ನು ಕಡಿಮೆ ಮಾಡುವ ಶಕ್ತಿಯನ್ನು ಹೊಂದಿದೆ. ಇದು ಸತ್ತ ಚರ್ಮ ಮತ್ತು ತ್ವಚೆಯ ಮೊಡವೆಗಳನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ.