ಮುಖ್ಯಮಂತ್ರಿಗಳ ಕ್ಯಾಬಿನೆಟ್ ದರ್ಜೆಯ ರಾಜಕೀಯ ಸಲಹೆಗಾರರಾಗಿ ವಿರಾಜಪೇಟೆಯ ಶಾಸಕರಾದ ಎ ಎಸ್ ಪೊನ್ನಣ್ಣ ನೇಮಕ
ಮಡಿಕೇರಿ: ಮುಖ್ಯಮಂತ್ರಿಗಳ ಕ್ಯಾಬಿನೆಟ್ ದರ್ಜೆಯ ರಾಜಕೀಯ ಸಲಹೆಗಾರರಾಗಿ ವಿರಾಜಪೇಟೆ ಶಾಸಕ ಎ ಎಸ್ ಪೊನ್ನಣ್ಣ (AS Ponnanna) ನೇಮಕ ಗೊಳಿಸಲಾಗಿದೆ.
ಈ ಮೊದಲು ಅವರು ಕರ್ನಾಟಕ ಉಚ್ಚ ನ್ಯಾಯಾಲಯದ ಅಡಿಷನಲ್ ಅಡ್ವಕೇಟ್ ಜನರಲ್ ಆಗಿ ಕಾರ್ಯನಿರ್ವಹಿಸಿದ್ದರು. ಈ ಬಾರಿಯ ಚುನಾವಣೆಯಲ್ಲಿ ವಿರಾಜಪೇಟೆ ಕ್ಷೇತ್ರದಿಂದ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾಗಿದ್ದರು.
ಹೈದರಾಬಾದ್ ಕರ್ನಾಟಕ ಎಜುಕೇಶನ್ ಸೊಸೈಟಿಯಲ್ಲಿ ಪಿಯುಸಿ, ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಮಾಡಿದ್ದಾರೆ. ಪೊನ್ನಣ್ಣ 1997ರಲ್ಲಿ ವಕೀಲ ವೃತ್ತಿಯನ್ನು ಆರಂಭಿಸಿದರು.
ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾನೂನು, ಮಾನವ ಹಕ್ಕುಗಳು ಮತ್ತು ಆರ್ಟಿಐ ಕೋಶದ ಅಧ್ಯಕ್ಷರಾಗಿ ನೇಮಕಗೊಂಡ ನಂತರ ಅಧಿಕೃತವಾಗಿ ರಾಜಕೀಯಕ್ಕೆ ಪ್ರವೇಶಿಸಿದರು. ಆ ನಂತರ ಕಾಂಗ್ರೆಸ್ ಪಕ್ಷದ ಅಧಿಕೃತ ವಕ್ತಾರರಾಗಿಯೂ ನೇಮಿಸಲಾಯಿತು. ಹಿರಿಯ ಸಲಹೆಗಾರರಾಗಿ ನೇಮಕಗೊಳ್ಳುವ ಮೊದಲು ಎಕೆಎಸ್ ಲೀಗಲ್ ಹೆಸರಿನಲ್ಲಿ ಕಾನೂನು ಸಂಸ್ಥೆ ಸ್ಥಾಪಿಸಿದ್ದಾರೆ.
ಸಮಾಜ ಸೇವೆ: ಪೊನ್ನಣ್ಣ ಸಮಾಜ ಸೇವೆಯಲ್ಲಿ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಕಳೆದ ಎರಡು ವರ್ಷಗಳ ಹಿಂದೆ ಕೊಡಗಿಗೆ ಬಂದಿದ್ದ ಪೊನ್ನಣ್ಣ ಅವರು ಎ.ಕೆ. ಸುಬ್ಬಯ್ಯ ಪೊನ್ನಮ್ಮ ಶೈಕ್ಷಣಿಕ ಮತ್ತು ಚಾರಿಟಬಲ್ ಶೈಕ್ಷಣಿಕ ಮತ್ತು ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿದ್ದಾರೆ. ಆ ಮೂಲಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದ್ದಾರೆ.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಹೆಚ್ಚು ಪರೋಪಕಾರಿ ಚಟುವಟಿಕೆಗಳನ್ನು ನಡೆಸಿದ್ದಾರೆ. ಸುಮಾರು 10 ಸಾವಿರ ಮಂದಿಗೆ ಕೋವಿಡ್ ಸಂದರ್ಭದಲ್ಲಿ ಕಿಟ್ ವಿತರಣೆ ಮಾಡಿದ್ದರು. ಹಲವು ದೇವಾಲಯಗಳಿಗೆ ಹಣ, ಕ್ರೀಡಾಕೂಟಕ್ಕೆ ಪ್ರೋತ್ಸಾಹ ನೀಡುವುದರ ಜೊತೆಗೆ ಸಮಾಜ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಹಲವು ಕಾನೂನು ಹೋರಾಟಗಳ ಮೂಲಕ ಜನಸಾಮಾನ್ಯರಿಗೆ ನ್ಯಾಯ ದೊರಕಿಸಿದ ಕೀರ್ತಿ ಪೊನ್ನಣ್ಣ ಅವರದ್ದು.