ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್ ಬೆಲೆ 83.5 ರೂಪಾಯಿ ಇಳಿಕೆ
ನವದೆಹಲಿ: ಜೂನ್ ತಿಂಗಳ ಮೊದಲ ದಿನವಾದ ಇಂದು (ಜೂನ್ 1, ಗುರುವಾರ) ಹೋಟೆಲ್ ಮಾಲೀಕರು ಸೇರಿದಂತೆ ವಾಣಿಜ್ಯ ಎಲ್‌ಪಿಜಿ ಸಿಂಡರ್ (Commercial LPG Cylinder Price) ಬಳಸುವ ಗ್ರಾಹಕರಿಗೆ ಸಿಹಿ ಸುದ್ದಿ ಸಿಕ್ಕಿದೆ.
ವಾಣಿಜ್ಯ ಬಳಕೆಯ ಎಲ್‌ಪಿಜಿ ಗ್ಯಾಸ್ ಬೆಲೆಯಲ್ಲಿ (LPG Cylinder Price) 83.5 ರೂಪಾಯಿ ಇಳಿಕೆ ಮಾಡಿದ್ದು, ಹೊಸ ದರಗಳು ಇಂದಿನಿಂದಲೇ ಜಾರಿಗೆ ಬರಲಿವೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ (Delhi) ಸಿಲಿಂಡರ್ ಬೆಲೆ ಇಳಿಕೆ ಬಳಿಕ, 19 ಕೆಜಿಯ ವಾಣಿಜ್ಯ ಸಿಲಿಂಡರ್ ಬೆಲೆ 1,773 ರೂಪಾಯಿಗೆ ತಗ್ಗಿದೆ. ಆದರೆ ಅಡುಗೆ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಅಡುಗೆ ಅನಿಲದ ಬೆಲೆ ಇಲ್ಲಿ 1,103 ರೂಪಾಯಿ ಇದೆ.
ಕೋಲ್ಕತ್ತಾದಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ಈಗ 1,875.50 ರೂಪಾಯಿ ಆಗಿದೆ. ಮುಂಬೈನಲ್ಲಿ 1,725 ರೂಪಾಯಿಗೆ ಇಳಿಕೆ ಕಂಡಿದ್ದು, ಚೆನ್ನೈನಲ್ಲಿ 1,937 ರೂಪಾಯಿ ಇದೆ.
ವಾಮಿಜ್ಯ ಮತ್ತು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ಪರಿಷ್ಕರಣೆ ಮಾಡಲಾಗುತ್ತದೆ. ಇಂದಿನಿಂದಲೇ ಹೊಸ ದರಗಳು ಅನ್ವಯವಾಗುತ್ತದೆ.
ತೈಲ ಮಾರುಕಟ್ಟೆ ಕಂಪನಿಗಳು ಮೇ ತಿಂಗಳಲ್ಲಿ ದೇಶೀಯ ಎಲ್‌ಪಿಜಿ ಬೆಲೆಯನ್ನು ಕೊನೆಯದಾಗಿ ಬದಲಾಯಿಸಿದ್ದವು. ಪ್ರಸ್ತುತ ದೆಹಲಿಯಲ್ಲಿ ಅಡುಗೆ ಅನಿಲದ ಬೆಲೆ 14.2 ಕೆಜಿಯ ಸಿಲಿಂಡರ್‌ಗೆ 1,103 ರೂಪಾಯಿ ಇದೆ. ಕೋಲ್ಕತ್ತಾ, ಮುಂಬೈ ಹಾಗೂ ಚೆನ್ನೈನಲ್ಲಿ ಕ್ರಮವಾಗಿ 1,029, 1,002 ಹಾಗೂ 1,018.5 ರೂಪಾಯಿ ಇದೆ.
ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 19 ಕೆಜಿಯ ವಾಣಿಜ್ಯ ಸಿಲಿಂಡರ್ 1,856 ರೂಪಾಯಿ ಇದೆ. ತೈಲ ಕಂಪನಿಗಳು ಕಳೆದ ತಿಂಗಳು (ಮೇ 2023) ಕೂಡ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ಕಡಿಮೆ ಮಾಡಿದ್ದವು.
ಮೇ 1 ರಿಂದ ಅನ್ವಯವಾಗುವಂತೆ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆ 171.50 ರೂಪಾಯಿ ಕಡಿಮೆ ಮಾಡಲಾಗಿತ್ತು. ಬೆಂಗಳೂರಿನಲ್ಲೂ ಕೂಡ ಗೃಹಬಳಕೆ ಎಲ್‌ಪಿಜಿ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ.