ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ಅಂತರರಾಷ್ಟ್ರೀಯ ಸೆಲೆಬ್ರಿಟಿ!
ಬ್ಯೂಟಿ ಬ್ರ್ಯಾಂಡ್ಗಳಿಗೆ ಅಥ್ಲೀಟ್ಗಳು, ಸಿನಿಮಾ ತಾರೆಯರನ್ನು ಮಾಡೆಲ್ಗಳಾಗಿ ತೋರಿಸುವುದನ್ನು ನಾವು ನೋಡಿದ್ದೇವೆ. ಆದರೆ ಪ್ರತಿಷ್ಠಿತ ಬ್ಯೂಟಿ ಬ್ರ್ಯಾಂಡ್ ಸಂಸ್ಥೆಯೊಂದು ಸ್ಲಮ್ನಲ್ಲಿ ವಿದ್ಯುತ್, ನೀರು, ಬಾತ್ ರೂಮ್ ವ್ಯವಸ್ಥೆ ಇಲ್ಲದೆ ಬೆಳಯುತ್ತಿರುವ 14 ವರ್ಷದ ಬಾಲಕಿಗೆ ಮಾಡೆಲ್ ಆಗುವ ಅವಕಾಶ ನೀಡಿ ಅಚ್ಚರಿ ಮೂಡಿಸಿದೆ.
ಅದೃಷ್ಟ ಯಾವಾಗ ಮತ್ತು ಹೇಗೆ ಬರುತ್ತದೆ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಮೂರು ವರ್ಷಗಳ ಹಿಂದಿನವರೆಗೆ ಮುಂಬೈ ಬೀಚ್ನ ಸಣ್ಣ ಗುಡಿಸಲಿನಲ್ಲಿ ವಾಸಿಸುತ್ತಿದ್ದ ಹುಡುಗಿ ಇದ್ದಕ್ಕಿದ್ದಂತೆ ಅಂತರರಾಷ್ಟ್ರೀಯ ಸೆಲೆಬ್ರಿಟಿಯಾಗಿದ್ದಾಳೆ.
ಮುಂಬೈನ ಧಾರಾವಿಯ ಕೊಳೆಗೇರಿಯಲ್ಲಿ ವಾಸಿಸುತ್ತಿರುವ 14 ವರ್ಷದ ಮಲಿಶಾ ಖಾರ್ವಾ ತನ್ನ ಪ್ರತಿಭೆಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾಳೆ. ಅಷ್ಟೇ ಅಲ್ಲ, ತಮ್ಮ ಕನಸಿನ ಬದುಕನ್ನು ಪಡೆಯಲು ಕಾಯುತ್ತಿರುವ ಅದೆಷ್ಟೋ ಹೆಣ್ಣುಮಕ್ಕಳಿಗೆ ಈಕೆ ಸ್ಪೂರ್ತಿ ಆಗಿದ್ದಾಳೆ.
ಫ್ಯಾಶನ್ ಶೋವೊಂದರಲ್ಲಿ ನಟಿ ಪ್ರಿಯಾಂಕಾ ಚೋಪ್ರಾ ಅವರ ರ್ಯಾಂಪ್ ವಾಕ್ ಮಾಡುವುದನ್ನು ನೋಡಿ, ತಾನೂ ಕೂಡ ಹಾಗೆ ಆಗಬೇಕು ಎಂದುಕೊಂಡಿದ್ದ ಮಲೀಶಾ ಅಂದಿನಂದ, ಕನಸು ಕಾಣಲಾರಂಭಿಸಿದ್ದರು. ಪ್ರಸ್ತುರ ಇನ್ಸ್ಟಾಗ್ರಾಮ್ನಲ್ಲಿ 2 ಲಕ್ಷ 25 ಸಾವಿರ ಫಾಲೋವರ್ಸ್ ಹೊಂದಿರುವ ಬಾಲಕಿ ತಮ್ಮ ಕೆಲವು ಪೋಸ್ಟ್ಗಳಲ್ಲಿ ಪ್ರಿನ್ಸೆಸ್ ಫ್ರಮ್ ಸ್ಲಂ ಎಂಬ ಹ್ಯಾಶ್ಟ್ಯಾಗ್ ಹಾಕಿದ್ದಾರೆ.
ಮಲೀಶಾ Instagram ನಲ್ಲಿ ಕಂಟೆಂಟ್ ಕ್ರಿಯೇಟ್ ಮಾಡುವ ಮೂಲಕ ತನ್ನ ಪ್ರಯಾಣವನ್ನು ಪ್ರಾರಂಭಿಸಿದರು ಮತ್ತು ಲೈವ್ ಯುವರ್ ಫೇರಿಟೇಲ್ ಎಂಬ ಕಿರುಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರ ಯಾವುದೇ ವೃತ್ತಿಪರ ನಟರನ್ನು ಹೊಂದಿಲ್ಲ, ಇದು ಜೀವನದಲ್ಲಿ ಮೊದಲ ಬಾರಿಗೆ ರೆಸ್ಟೋರೆಂಟ್ನಲ್ಲಿ ಊಟ ಮಾಡುವ ಐದು ಸ್ಲಂ ಮಕ್ಕಳ ಅನುಭವವನ್ನು ತೋರಿಸಿದೆ.
ಇತ್ತೀಚೆಗೆ ಪ್ರತಿಷ್ಠಿತ ಬ್ರ್ಯಾಂಡ್ಗೆ ಮಾಡೆಲ್ ಆಗಿದ್ದ ಮಲೀಶಾ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟ್ರೆಂಡ್ ಆಗಿದ್ದರು. ಇದೀಗ ಮುಗ್ಧ ಬಾಲಕಿಗೆ ಮತ್ತೊಂದು ಸುವರ್ಣಾವಕಾಶ ಒಲಿದು ಬಂದಿದೆ. ಆಕೆಗೆ ಹಾಲಿವುಡ್ನಿಂದ ಎರಡು ಸಿನಿಮಾಗಳಿಗೆ ಆಫರ್ ಬಂದಿದೆ ಎನ್ನಲಾಗಿದೆ.
‘ಸ್ಲಮ್ನ ರಾಜಕುಮಾರಿ’ (Princess of the Slum) ಎಂದೂ ಕರೆಯಲ್ಪಡುವ ಮಲೀಶಾ ಖಾರ್ವಾ ತಮ್ಮ ಜೀವನದಲ್ಲಿ ಬಂದಿರುವ ಹೊಸ ಅವಕಾಶಗಳ ಬಗ್ಗೆ ಪ್ರತಿಕ್ರಿಯಿಸಿದ್ದು, ” ನಾನು ಈಗ ಎಲ್ಲಿದ್ದೇನೆ ಎಂಬುದರ ಬಗ್ಗೆ ನನಗೆ ತುಂಬಾ ಸಂತೋಷವಾಗಿದೆ. ಜನರು ನನ್ನನ್ನು ಎಲ್ಲಿಂದಲೋ ನೋಡುತ್ತಾರೆ ಮತ್ತು ಸಾಮಾಜಿಕ ಜಾಲತಾಣಗಳಿಂದ ನನ್ನನ್ನು ಗುರುತಿಸುವ ಸಂದರ್ಭಗಳಿವೆ. ಅವರು ತಾವೂ ನಿಮ್ಮ ಅಭಿಮಾನಿಗಳು ಎಂದಾಗ ತುಂಬಾ ಹೆಮ್ಮೆ ಮತ್ತು ಸಂತೋಷವನ್ನು ನೀಡುತ್ತದೆ” ಎಂದು ಹೇಳಿದ್ದಾರೆ.
ಮಲೀಶಾ ಖಾರ್ವಾ ಅವರನ್ನು 2020 ರಲ್ಲಿ ಹಾಲಿವುಡ್ ನಟ ರಾಬರ್ಟ್ ಹಾಫ್ಮನ್ ಮುಂಬೈನಲ್ಲಿ ಗುರುತಿಸಿದ್ದರು. ಆ ಸಂದರ್ಭದಲ್ಲಿ ಆಕೆಗೆ ಗೋ ಫಂಡ್ ಮಿ ಪುಟವನ್ನು ಸ್ಥಾಪಿಸಿ ಫಂಡ್ ಸಂಗ್ರಹಿಸಿದ್ದರು. ನಂತರ ಆಕೆಗೆ ಇನ್ಸ್ಟಾಗ್ರಾಮ್ ಖಾತೆ ತೆರದುಕೊಟ್ಟಿದ್ದರು. ಈ ಘಟನೆ ನಂತರ ಮಲೀಶಾ ಅವರ ಜೀವನವೇ ಬದಲಾಗಿದೆ. ಕೆಲವು ಬ್ರಾಂಡ್ಗಳಿಗೆ ರಾಯಭಾರಿಯಾಗಿರುವ ಆಕೆ ಮಾಡೆಲಿಂಗ್ ಉದ್ಯಮದಲ್ಲಿ ತನ್ನದೇ ಆದ ವೇಗದಲ್ಲಿ ಬೆಳೆಯುತ್ತಿದ್ದಾಳೆ. ಇದೀಗ ಹಾಲಿವುಡ್ ಸಿನಿಮಾ ಆಫರ್ ಬಂದಿರುವುದು ಯಾರಾದರೂ ಜೀವನದಲ್ಲಿ ಭರವಸೆಯನ್ನು ಕಳೆದುಕೊಳ್ಳಬಾರದು ಎನ್ನುವುದಕ್ಕೆ ನಿದರ್ಶನವಾಗಿದೆ.