ಪತ್ನಿಯ ಕೊಂದು, ಮನೆಗೆ ಬೀಗ ಜಡಿದು, ಪರಾರಿಯಾದ ಶಿಕ್ಷಕ ಕೃಷ್ಣಪ್ಪ
ಚಿಕ್ಕಬಳ್ಳಾಪುರ: ಸಮಾಜಕ್ಕೆ ನೀತಿ ಪಾಠ ಬೋಧಿಸುವ ಶಿಕ್ಷಕ (Teacher) ವೃತ್ತಿಯ ಕೃಷ್ಣಪ್ಪ ಎಂಬಾತ ಪತ್ನಿಯನ್ನು ತನ್ನ ಮನೆಯಲ್ಲಿ ಹತ್ಯೆ (murder) ಮಾಡಿದ್ದೂ ಅಲ್ಲದೆ, ಮನೆಗೆ ಬೀಗ ಜಡಿದುಕೊಂಡು ಹೋಗಿದ್ದಾನೆ. ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದ (Gauribidanur) ಗಂಗಾನಗರದಲ್ಲಿ ಈ ಹೃದಯವಿದ್ರಾವಕ ಘಟನೆ ನಡೆದಿದೆ. ಮೇ 19ರಂದೆ ಪತ್ನಿಯನ್ನು (wife) ಕೊಂದು ಮನೆಗೆ ಬೀಗ ಜಡಿದಿದ್ದಾನೆ ಗಂಡ ಕೃಷ್ಣಪ್ಪ. 40 ವರ್ಷದ ಲಕ್ಷ್ಮಿದೇವಿ ಕೊಲೆಯಾದ ನತದೃಷ್ಟ ಮಹಿಳೆ. ಮೃತ ದೇಹದ ವಾಸನೆಯಿಂದ ಅಕ್ಕಪಕ್ಕದವರಿಗೆ ಅನುಮಾನ ಬಂದಾಗ ಘಟನೆ ತಡವಾಗಿ ಬಯಲಿಗೆ ಬಂದಿದೆ.
ಹತ್ಯೆಯ ವಾಸನೆ ಬಡಿಯುತ್ತಿದ್ದಂತೆ ಹತ್ಯೆ ಆರೋಪಿ ಶಿಕ್ಷಕ ಕೃಷ್ಣಪ್ಪನ ಅಕ್ಕಪಕ್ಕದ ಮನೆಯವರು ಮತ್ತು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಚಿಕ್ಕಬಳ್ಳಾಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್. ನಾಗೇಶ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಪತ್ನಿ ಬರೆದಂತೆ ನಕಲಿ ಡೆತ್ ನೋಟ್ ಸಹ ಸೃಷ್ಟಿ: ಪತ್ನಿ ಬರೆದಿರುವಂತೆ ನಕಲಿ ಡೆತ್ ನೋಟ್ ಅನ್ನು ಸಹ ಸೃಷ್ಟಿಸಿ, ಹತ್ಯೆ ಆರೋಪಿ ಶಿಕ್ಷಕ ಕೃಷ್ಣಪ್ಪ ನಾಪತ್ತೆಯಾಗಿದ್ದಾನೆ. ಕೃಷ್ಣಪ್ಪ ರಾಮಚಂದ್ರಪುರ ಸರ್ಕಾರಿ ಶಾಲಾ ಶಿಕ್ಷಕರಾಗಿದ್ದಾರೆ. ಶಿಕ್ಷಕನ ಕೃತ್ಯಕ್ಕೆ ಗೌರಿಬಿದನೂರು ನಗರ ಬೆಚ್ಚಿಬಿದ್ದಿದೆ. ದಂಪತಿಗೆ ಇಬ್ಬರು ಪುತ್ರಿಯರು ಇದ್ದಾರೆ. ಹಿರಿಯ ಮಗಳನ್ನು ಮದುವೆ ಮಾಡಿ ಕೊಡಲಾಗಿದೆ. ಇನ್ನೊಬ್ಬ ಮಗಳು ಬಿಎಸ್ಸಿ ಅಂತಿಮ ವರ್ಷದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಳೆ. ಗೌರಿಬಿದನೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.