ಕರಾವಳಿ, ಬೆಂಗಳೂರಿನಲ್ಲಿ ಇನ್ನೆರಡು ದಿನ ಮುಂದುವರೆಯಲಿದೆ ವರುಣನ ಆರ್ಭಟ
ಬೆಂಗಳೂರು: ರಾಜಧಾನಿಯಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಮರಗಳು ಧರೆಗುರುಳುತ್ತಲೇ ಇವೆ. ಗುಡುಗು, ಸಿಡಿಲಿನ ಅಬ್ಬರದೊಂದಿಗೆ ಸುರಿದ ಮಳೆಗೆ ಜನಜೀವನ ಅಸ್ತವ್ಯಸ್ತವಾಯಿತು. ಕೆಲವೆಡೆ ಮರಗಳು ಧರಾಶಾಹಿಯಾಗಿದ್ದು, ಯಾವುದೇ ಪ್ರಾಣಹಾನಿ ಆಗಿಲ್ಲ.
ಹೆಗಡೆ ನಗರ, ಜಕ್ಕೂರು ಲೇಔಟ್, ಕಾಫಿ ಬೋರ್ಡ್ ಲೇಔಟ್, ಜೆ.ಪಿ.ನಗರ, ಜಯನಗರ, ಉಳ್ಳಾಲ, ಆರ್.ಟಿ.ನಗರ, ಬಾಗಲೂರು ಸೇರಿದಂತೆ ಹಲವು ಪ್ರದೇಶಗಳಲ್ಲಿ10ಕ್ಕೂ ಹೆಚ್ಚು ಮರಗಳು ಬುಡಸಮೇತ ನೆಲಕ್ಕುರುಳಿವೆ. ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.
ಧಾರಾಕಾರವಾಗಿ ಸುರಿದ ಮಳೆಗೆ ರಸ್ತೆಗಳು, ಅಂಡರ್ಪಾಸ್ಗಳು ಜಲಾವೃತಗೊಂಡಿದ್ದವು. ಮಳೆ ನೀರು ಶೇಖರಣೆಯಾಗಿದ್ದ ಕೆಲವೊಂದು ಅಂಡರ್ಪಾಸ್ಗಳಲ್ಲಿಸುರಕ್ಷತೆ ದೃಷ್ಟಿಯಿಂದ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು. ರಸ್ತೆಗಳಲ್ಲಿಅಡಿಗಟ್ಟಲೆ ನೀರು ನಿಂತಿದ್ದರಿಂದ ಟ್ರಾಫಿಕ್ಜಾಮ್ ಉಂಟಾಗಿ ವಾಹನ ಸವಾರರು ಪರದಾಡಿದರು.
ಬೇಗೂರು ಸಮೀಪದ ವಿಶ್ವಪ್ರಿಯ ಬಡಾವಣೆ, ಗಾಂಧಿಬಜಾರ್ ಸೇರಿದಂತೆ ಹಲವೆಡೆ ಚರಂಡಿಗಳು ಉಕ್ಕಿ ಹರಿದವು. ಕಾಟನ್ಪೇಟೆ, ಚಾಮರಾಜಪೇಟೆ, ವಿದ್ಯಾಪೀಠ, ಮೆಜೆಸ್ಟಿಕ್, ಸಂಪಂಗಿರಾಮನಗರ, ಕೋರಮಂಗಲ, ಮಲ್ಲೇಶ್ವರ, ಗಿರಿನಗರ, ಶ್ರೀನಗರ, ಯಶವಂತಪುರ, ನಂದಿನಿ ಲೇಔಟ್, ಸಿ.ವಿ.ರಾಮನ್ನಗರ, ಬೊಮ್ಮನಹಳ್ಳಿ, ಕುಮಾರಸ್ವಾಮಿ ಲೇಔಟ್ ಸೇರಿದಂತೆ ಹಲವು ಕಡೆ ಮಳೆಯಾಗಿದೆ. ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರ, ರೆಂಬೆ-ಕೊಂಬೆಗಳನ್ನು ತೆರವುಗೊಳಿಸಲು ಪಾಲಿಕೆ ಸಿಬ್ಬಂದಿ ಹಾಗೂ ಸಂಚಾರ ಪೊಲೀಸರು ಹರಸಾಹಸಪಟ್ಟರು.
ಹೆಚ್ಚು ಮಳೆಯಾದ ಪ್ರದೇಶಗಳು
ಬಿಳೇಕಹಳ್ಳಿ 38 ಮಿ.ಮೀ., ಅರಕೆರೆ 21 ಮಿ.ಮೀ., ಕೊಡಿಗೇಹಳ್ಳಿ 48 ಮಿ.ಮೀ., ಬೊಮ್ಮಸಂದ್ರ 13 ಮಿ.ಮೀ., ಬ್ಯಾಟರಾಯನಪುರ 13 ಮಿ.ಮೀ., ಮನೋರಾಯನಪಾಳ್ಯದಲ್ಲಿ10 ಮಿ.ಮೀ. ಮಳೆಯಾಗಿದೆ.
ನಗರದಲ್ಲಿ ಬುಧವಾರ ಮತ್ತು ಗುರುವಾರ ಕೂಡ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.