ಸಾಫ್ಟ್ ಸಿಗ್ನಲ್ ರದ್ದುಗೊಳಿಸಿದ ಐಸಿಸಿ; ಏನಿದು ಸಾಫ್ಟ್ ಸಿಗ್ನಲ್?
ದುಬೈ(ಮೇ.16): ಭಾರೀ ಟೀಕೆಗೆ ಗುರಿಯಾಗುತ್ತಿದ್ದ ‘ಸಾಫ್ಟ್ ಸಿಗ್ನಲ್’ ಅನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ(ಐಸಿಸಿ) ರದ್ದುಗೊಳಿಸಿದೆ. ಇದರಿಂದ ಮೈದಾನದಲ್ಲಿರುವ ಅಂಪೈರ್ಗಳ ಮೇಲೆ ಹೊರೆ ಕಡಿಮೆಯಾಗಿದ್ದು, ಗೊಂದಲಕರ ಸಂದರ್ಭದಲ್ಲಿ ಬ್ಯಾಟರ್ ಔಟೋಗಿದ್ದಾರೋ ಇಲ್ಲವೋ ಎನ್ನುವುದನ್ನು 3ನೇ ಅಂಪೈರ್ ನಿರ್ಧರಿಸಲಿದ್ದಾರೆ. ಈ ನಿಯಮ ಜೂನ್ 1ರಿಂದಲೇ ಜಾರಿಗೆ ಬರಲಿದ್ದು, ಭಾರತ-ಆಸ್ಪ್ರೇಲಿಯಾ ನಡುವಿನ ಟೆಸ್ಟ್ ವಿಶ್ವ ಚಾಂಪಿಯನ್ಶಿಪ್ ಫೈನಲ್ ಪಂದ್ಯಕ್ಕೂ ಅನ್ವಯವಾಗಲಿದೆ.
ಏನಿದು ಸಾಫ್ಟ್ ಸಿಗ್ನಲ್?: ಫೀಲ್ಡರ್ ಕ್ಯಾಚ್ ಹಿಡಿದಾಗ ಚೆಂಡು ನೆಲಕ್ಕೆ ತಗುಲಿದೆಯೋ ಇಲ್ಲವೋ ಎನ್ನುವುದು ಬರಿಗಣ್ಣಿಗೆ ಸ್ಪಷ್ಟವಾಗಿ ತಿಳಿಯದಿದ್ದಾಗ ಬೌಲರ್ ಎಂಡ್ನಲ್ಲಿರುವ ಅಂಪೈರ್, ಲೆಗ್ ಅಂಪೈರ್ ಜೊತೆ ಚರ್ಚಿಸಿ ತೀರ್ಪು ಪ್ರಕಟಿಸಲು 3ನೇ ಅಂಪೈರ್ನ ಮೊರೆ ಹೋಗುತ್ತಿದ್ದರು. 3ನೇ ಅಂಪೈರ್ ಜೊತೆ ಸಂಪರ್ಕ ಸಾಧಿಸುವಾಗ ಮೈದಾನದಲ್ಲಿರುವ ಅಂಪೈರ್, ಬ್ಯಾಟರ್ ಔಟಾಗಿದ್ದಾರೋ ಇಲ್ಲವೋ ಎನ್ನುವುದನ್ನು ಊಹಿಸಬೇಕಿತ್ತು. ಅದನ್ನೇ ‘ಸಾಫ್ಟ್ ಸಿಗ್ನಲ್’ ಎನ್ನುತ್ತಾರೆ. 3ನೇ ಅಂಪೈರ್ ಕ್ಯಾಮೆರಾ ದೃಶ್ಯಾವಳಿಗಳನ್ನು ಪರಿಶೀಲಿಸಿದ ಹೊರತಾಗಿಯೂ ಸೂಕ್ತ ಸಾಕ್ಷ್ಯಗಳು ದೊರೆಯದಿದ್ದಾಗ ಮೈದಾನದಲ್ಲಿದ್ದ ಅಂಪೈರ್ ‘ಸಾಫ್ಟ್ ಸಿಗ್ನಲ್’ ಆಗಿ ಏನು ತೀರ್ಪು ನೀಡಿರುತ್ತಾರೋ ಅದನ್ನೇ ಎತ್ತಿಹಿಡಿಯಲಾಗುತ್ತಿತ್ತು. ಇದರಿಂದಾಗಿ ಹಲವು ಬಾರಿ ವಿವಾದಗಳಾಗಿವೆ.
ಮಂದ ಬೆಳಕಿದ್ದಾಗ ಫ್ಲಡ್ ಲೈಟ್ಸ್ ಬಳಕೆಗೆ ಅನುಮತಿ
ಟೆಸ್ಟ್ ಪಂದ್ಯದ ವೇಳೆ ಬೆಳಕಿನ ಸಮಸ್ಯೆಯಾದಾಗ ಫ್ಲಡ್ ಲೈಟ್ಸ್ ಬಳಸಲು ಐಸಿಸಿ ಅನುಮತಿ ನೀಡಿದೆ. ಮಂದ ಬೆಳಕಿನ ಕಾರಣ ಆಟ ಸ್ಥಗಿತಗೊಂಡ ಅನೇಕ ಉದಾಹರಣೆಗಳಿದ್ದು, ಇದನ್ನು ತಡೆಯಲು ಐಸಿಸಿ ನಿಯಮದಲ್ಲಿ ಬದಲಾವಣೆ ತಂದಿರುವುದಾಗಿ ತಿಳಿಸಿದೆ. ಆದರೆ ಈಗಾಗಲೇ ಕೆಲ ಸಂದರ್ಭದಲ್ಲಿ ಫ್ಲಡ್ ಲೈಟ್ಸ್ ಬಳಸಿದ ಉದಾಹರಣೆಗಳಿವೆ. ಜೊತೆಗೆ ಫ್ಲಡ್ಲೈಟ್ಸ್ನಲ್ಲಿ ಕೆಂಪು ಚೆಂಡಿನಲ್ಲಿ ಆಡುವುದು ಕಷ್ಟ ಎನ್ನುವ ಅಭಿಪ್ರಾಯಗಳು ಈ ಹಿಂದೆಯೇ ವ್ಯಕ್ತವಾಗಿದ್ದವು. ಹೀಗಾಗಿ ಐಸಿಸಿಯಿಂದ ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.
ಫ್ರೀ ಹಿಟ್ನಲ್ಲಿ ಬೌಲ್ಡ್ ಆದರೂ ಬ್ಯಾಟರ್ಗೆ ರನ್!
ಐಸಿಸಿ ಮತ್ತೊಂದು ಮಹತ್ವದ ಬದಲಾವಣೆ ತಂದಿದ್ದು, ಇನ್ಮುಂದೆ ಫ್ರೀ ಹಿಟ್ನಲ್ಲಿ ಚೆಂಡು ಬ್ಯಾಟರ್ನ ಬ್ಯಾಟ್ಗೆ ತಗುಲಿ ವಿಕೆಟ್ಗೆ ಬಡಿದಾಗ ರನ್ ಓಡಿದರೆ, ಆ ರನ್ ಬ್ಯಾಟರ್ನ ಖಾತೆಗೆ ಸೇರ್ಪಡೆಗೊಳ್ಳಲಿದೆ. ಇಷ್ಟು ದಿನ ರನ್ಗಳು ‘ಬೈ’ ಎಂದು ಪರಿಗಣಿಸಲಾಗುತ್ತಿತ್ತು.