ಅನುಜ್ ರಾವತ್ ಸ್ಫೋಟಕ ಆಟ, ವಿಕೆಟ್ ಕೀಪಿಂಗ್ ಚಮತ್ಕಾರಕ್ಕೆ RCB ಫ್ಯಾನ್ಸ್ ಫಿದಾ!
ಜೈಪುರ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಯುವ ಆಟಗಾರ ಅನುಜ್ ರಾವತ್ ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ತೋರಿ 11 ಎಸೆತಗಳಲ್ಲೇ 29* ರನ್ ಸಿಡಿಸಿದ್ದಲ್ಲದೆ ವಿಕೆಟ್ ಕೀಪರ್ ರೂಪದಲ್ಲೂ ಗಮನ ಸೆಳೆದಿದ್ದರು. ಯುವ ಆಟಗಾರನ ಸಿಡಿಲಬ್ಬರದ ಆಟವನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದ್ದಾರೆ. ಹದಿನಾರನೇ ಆವೃತ್ತಿಯಲ್ಲಿ ಆಡಿದ ಮೊದಲ 5 ಪಂದ್ಯಗಳಲ್ಲಿ ಅನುಜ್ ರಾವತ್, 86.67 ಸರಾಸರಿಯಲ್ಲಿ 39 ರನ್ ಸಿಡಿಸಿದ್ದರು. ಆದರೆ ನಿರ್ಣಾಯಕ ಪಂದ್ಯದಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿ 11 ಎಸೆತಗಳಲ್ಲೇ 3 ಮನಮೋಹಕ ಬೌಂಡರಿ ಹಾಗೂ 2 ಭರ್ಜರಿ ಸಿಕ್ಸರ್ ಸಹಿತ 29* ರನ್ ಸಿಡಿಸಿದ್ದಲ್ಲದೆ, ತಮ್ಮ ವಿಕೆಟ್ ಕೀಪಿಂಗ್ ಚಮತ್ಕಾರದಿಂದ ರವಿಚಂದ್ರನ್ ಅಶ್ವಿನ್ ಅವರನ್ನು ರನೌಟ್ ಮಾಡಿ ತಂಡದ ಭರ್ಜರಿ ಗೆಲುವಿಗೆ ಬಲವಾದರು.
ಟಾಸ್ ಗೆದ್ದು ಬ್ಯಾಟ್ ಮಾಡಿದ್ದ ಆರ್‌ಸಿಬಿ ತಂಡದ ಪರ ಇನಿಂಗ್ಸ್‌ನ 18ನೇ ಓವರ್ ನಲ್ಲಿ ಸ್ಫೋಟಕ ಆಟಗಾರ ಗ್ಲೆನ್ ಮ್ಯಾಕ್ಸ್ ವೆಲ್ ಔಟಾಗುತ್ತಿದ್ದಂತೆ ಕ್ರೀಸ್ ಗಿಳಿದು ಡೆತ್ ಓವರ್ ಗಳಲ್ಲಿ ರಾಜಸ್ಥಾನ್ ರಾಯಲ್ಸ್ ಬೌಲರ್ ಗಳನ್ನು ದಂಡಿಸಿದ ಅನುಜ್ ರಾವತ್ ಅವರನ್ನು ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಕೊಂಡಾಡಿದ್ದಾರೆ.
“ಆರ್‌ಸಿಬಿಗೆ ಎಂಥಹ ಅದ್ಭುತ ಗೆಲುವು! ಮಂದಗತಿಯ ಪಿಚ್‌ಗೆ ಹೊಂದಿಕೊಂಡು ಫಾಫ್ ಮತ್ತು ಮ್ಯಾಕ್ಸ್‌ವೆಲ್ ಅದ್ಭುತವಾಗಿ ಬ್ಯಾಟ್ ಮಾಡಿದರು. ಇನಿಂಗ್ಸ್ ಅಂತ್ಯದಲ್ಲಿ ಅನುಜ್ ರಾವತ್ ಅಮೂಲ್ಯ 29* ರನ್ ಸೇರಿಸಿದರು. ಬೌಲಿಂಗ್ ಪ್ರದರ್ಶನ ನಿಜಕ್ಕೂ ಗಮನಾರ್ಹ. ಅದರಲ್ಲೂ ವೇಯ್ನ್ ಪಾರ್ನೆಲ್ ಮನಮೋಹಕ ದಾಳಿ ಸಂಘಟಿಸಿದರು, ಅದ್ಭುತ ಗೆಲುವು,” ಎಂದು ಭಾರತ ಮಹಿಳಾ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ ಟ್ವೀಟ್ ಮಾಡಿದ್ದಾರೆ.
“ಅನುಜ್ ರಾವತ್ ತಮ್ಮ ಸ್ಫೋಟಕ ಆಟದಿಂದ ದಿನೇಶ್ ಕಾರ್ತಿಕ್ ಅವರ ಕ್ರಿಕೆಟ್ ಜೀವನವನ್ನು ಮುಗಿಸಿದ್ದಾರೆ. ಯುವ ಆಟಗಾರ ಸುಯೇಶ್ ಪ್ರಭುದೇಸಾಯಿಗೆ ಸ್ಥಾನ ನೀಡುವ ಕಾಲ ಬಂದಾಗಿದೆ,” ಎಂದು ಅಭಿಮಾನಿ ಒಬ್ಬರು ಶ್ಲಾಘಿಸಿದ್ದಾರೆ.
“ಆರ್ ಸಿಬಿ ಅಭಿಮಾನಿಗಳು ನಿಮ್ಮಲ್ಲಿ ಕ್ಷಮೆಯಾಚಿಸುತ್ತೇವೆ. ನೀವೇ ತಂಡದ ಭವಿಷ್ಯದ ನಾಯಕ,” ಎಂದು ಮತ್ತೊಬ್ಬ ಅಭಿಮಾನಿ ಟ್ವಿಟ್ ಮಾಡಿದ್ದಾರೆ.
“2 ಬ್ಯಾಕ್ ಟು ಬ್ಯಾಕ್ ಸಿಕ್ಸರ್ ಹಾಗೂ 1 ಬೌಂಡರಿ ಸಿಡಿಸಿ ಅನುಜ್ ರಾವತ್ ತಮ್ಮದೇ ಆದ ಶೈಲಿಯಲ್ಲಿ ಪಂದ್ಯವನ್ನು ಮುಗಿಸಿದ್ದಾರೆ,” ಎಂದು ಐಪಿಎಲ್ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರಶಂಸಿಸಿದೆ.
“ಅನುಜ್ ರಾವತ್ ತಮ್ಮ ಸ್ಟ್ರೆಕ್ ರೇಟ್ ನಿಂದಾಗಿ ಟೀಕೆಗೆ ಗುರಿಯಾಗಿದ್ದರು. ಅಲ್ಲದೆ ತಂಡದಲ್ಲಿ ಸ್ಥಾನ ಕಲ್ಪಿಸಿದ್ದನ್ನು ಪ್ರಶ್ನಿಸಿದ್ದರು. ಆರ್ ಆರ್ ಪಂದ್ಯದಲ್ಲಿ ರಾವತ್ ಬ್ಯಾಟ್ ಮಾಡಲು ಬಂದಾಗ ತಂಡದ ಮೊತ್ತ 17.3 ಓವರ್ ಗಳಲ್ಲಿ 137/5 ಆಗಿತ್ತು. ಆದರೆ ತಮ್ಮ ಸ್ಫೋಟಕ 29* (11 ಎಸೆತ) ಆಟದಿಂದ 171/5 ಮುಟ್ಟಿಸಿದರು. ಅನುಜ್ ರಾವತ್ ಅತ್ಯಮೋಘ ಪ್ರದರ್ಶನ ತೋರಿದ್ದಾರೆ,” ಎಂದು ಮತ್ತೊಬ್ಬ ಅಭಿಮಾನಿ ಕೊಂಡಾಡಿದ್ದಾರೆ.
ಆರ್‌ಸಿಬಿಗೆ 112 ರನ್ ಗಳ ಗೆಲುವು
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ, ನಾಯಕ ಫಾಫ್ ಡು’ಪ್ಲೆಸಿಸ್ (55 ರನ್) , ಗ್ಲೆನ್ ಮ್ಯಾಕ್ಸ್‌ವೆಲ್ (54 ರನ್) ಅವರ ಆಕರ್ಷಕ ಫಿಫ್ಟಿ, ಅನುಜ್ ರಾವತ್ (29* ರನ್) ಸಿಡಿಲಬ್ಬರದ ಆಟದಿಂದ ನಿಗಧಿತ 20 ಓವರ್ ಗಳಲ್ಲಿ 171/5 ರನ್ ಗಳಿಸಿತು. ಆಡಂ ಝಂಪ (25 ಕ್ಕೆ 2) ಯಶಸ್ವಿ ಬೌಲರ್ ಎನಿಸಿಕೊಂಡರು.
ಈ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್, ಶಿಮ್ರಾನ್ ಹಿಟ್ಮಾಯೆರ್ (35 ರನ್) ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನದ ನಡುವೆಯೂ ಆರ್ ಸಿಬಿ ಬೌಲರ್ ಗಳ ಸಂಘಟಿತ ಪ್ರದರ್ಶನದಿಂದ 10.3 ಓವರ್ ಗಳಲ್ಲೇ 59 ರನ್ ಗಳಿಗೆ ಸರ್ವಪತನವಾಗಿ 112 ರನ್ ಗಳಿಂದ ಸೋಲೊಪ್ಪಿಕೊಂಡಿತು. ವೇಯ್ನ್ ಪಾರ್ನೆಲ್ (10ಕ್ಕೆ 3) ಪಂದ್ಯಶ್ರೇಷ್ಠರಾದರು.
ಈ ಗೆಲುವಿನೊಂದಿಗೆ ರನ್ ರೇಟ್ (+0.166) ಉತ್ತಮ ಪಡಿಸಿಕೊಂಡ ಆರ್‌ಸಿಬಿ 12 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿ ಪ್ಲೇ- ಆಫ್ಸ್ ಆಸೆಯನ್ನು ಜೀವಂತವಾಗಿ ಇರಿಸಿಕೊಂಡಿದ್ದರೆ ರಾಜಸ್ಥಾನ್ ರಾಯಲ್ಸ್ 6ನೇ ಸ್ಥಾನಕ್ಕೆ ಕುಸಿದು ಟೂರ್ನಿಯಿಂದ ಬಹುತೇಕ ಹೊರಬಿದ್ದಿದೆ.