ಕಾಂಗ್ರೆಸ್ ನ 20 ಶಾಸಕರು ಬಿಜೆಪಿಗೆ; ಲಖನ್ ಜಾರಕಿಹೊಳಿಯ ಸ್ಫೋಟಕ ಹೇಳಿಕೆ - ಶುರುವಾಯ್ತು ರಾಜೀನಾಮೆ ವದಂತಿ!

ಬೆಳಗಾವಿ: ರಾಜ್ಯ ವಿಧಾನಸಭೆ ಚುನಾವಣೆ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದೆ. ಅತಂತ್ರ ವಿಧಾನಸಭೆ ಸೃಷ್ಟಿಯಾಗುವ ಸಾಧ್ಯತೆ ಇದೆ. ಇದರ ನಡುವೆಯೇ ವಿಧಾನ ಪರಿಷತ್ ಸದಸ್ಯ ಲಖನ್ ಜಾರಕಿಹೊಳಿ ಅಚ್ಚರಿಯ ಹೇಳಿಕೆ ನೀಡಿರುವುದು ತಡವಾಗಿ ಬೆಳಕಿಗೆ ಬಂದಿದೆ. ಗೋವಾದಲ್ಲಿ ಆದಂತೆ ಇಲ್ಲಿಯೂ ಸರ್ಕಾರ ರಚಿಸುತ್ತೇವೆ ಎಂದು ಹೇಳಿರುವುದು ರಾಜಕಾರಣದಲ್ಲಿ ಬಿರುಗಾಳಿ ಸೃಷ್ಟಿಸಿದೆ.
ಬುಧವಾರ ಮತದಾನದ ಬಳಿಕ ಲಖನ್ ಜಾರಕಿಹೊಳಿ ನೀಡಿರುವ ಹೇಳಿಕೆ ಈಗ ಭಾರೀ ಸುದ್ದಿಯಾಗುತ್ತಿದೆ. ಬಿಜೆಪಿ 120 ಸೀಟುಗಳನ್ನು ಪಡೆಯುತ್ತದೆ. ಕಾಂಗ್ರೆಸ್‌ಗೆ 80 ಸ್ಥಾನ ಬರುತ್ತದೆ. ಅದರಲ್ಲಿ 20 ಶಾಸಕರೂ ಬಿಜೆಪಿಗೆ ಬರುತ್ತಾರೆ ಎಂದು ಹೇಳಿದ್ದಾರೆ. ಅದಲ್ಲದೇ ಕಳೆದ ಬಾರಿ ಗೋವಾದಲ್ಲಿ ಏನಾಗಿದೆಯೋ ಅದೇ ಕರ್ನಾಟಕದಲ್ಲೂ ಸಂಭವಿಸಲಿದೆ ಎಂದು ಹೇಳಿರುವುದು ಈಗ ರಾಜಕಾರಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.
ಅಧಿಕಾರ ಬರದಿದ್ದರೆ ಆ ಪಕ್ಷದಲ್ಲಿ ಇದ್ದು ಏನು ಮಾಡ್ತಾರೆ. ರಾಜೀನಾಮೆ ಕೊಟ್ಟು ಬರ್ತಾರೆ. ಗೋವಾದಲ್ಲಿ ಹೇಗೆ ಆಯ್ತಲ್ಲಾ ಇಲ್ಲಿಯೂ ಹಾಗೇ ಆಗುತ್ತೆ. ಯಾರ ನೇತೃತ್ವದಲ್ಲಿ ಆಗುತ್ತೆ ಗೊತ್ತಿಲ್ಲ. ಆದರೆ, ಮತ್ತೆ ಇಪ್ಪತ್ತು ಜನ ಬರ್ತಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರಿಂದ ಸರ್ಕಾರ ಹೋಯಿತು, ಕೊರೊನಾ ಬಂತು, ಅವರು ಇನ್ನೇನು ಸಚಿವೆ ಆಗ್ತಾರೆ. ನಾನು ಪಕ್ಷೇತರನಾಗಿ ಇರ್ತೀನಿ ಎಂದು ಹೇಳಿದ್ದರು.ಇದೇ ವೇಳೆ ಮಾತನಾಡಿದ್ದ ಅವರು, ಗೋಕಾಕ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಕನಿಷ್ಠ 50,000 ಮತಗಳ ಅಂತರದಿಂದ ಜಯಗಳಿಸಲಿದ್ದಾರೆ. ರಮೇಶ್ ಜಾರಕಿಹೊಳಿ ಕೇವಲ ಗೋಕಾಕನಲ್ಲಿ ಮಾತ್ರ ಅಲ್ಲ, ಇಡೀ ಬೆಳಗಾವಿಯಲ್ಲಿ ಅತ್ಯಂತ ಜನಪ್ರಿಯ ಮತ್ತು ಜನಾನುರಾಗಿ ವ್ಯಕ್ತಿಯೆನಿಸಿಕೊಂಡಿದ್ದಾರೆ. ಅವರನ್ನು ಸೋಲಿಸಲು ಕಾಂಗ್ರೆಸ್ ಪಕ್ಷದ ದೊಡ್ಡ ದೊಡ್ಡ ನಾಯಕರೆಲ್ಲ ಗೋಕಾಕ ಕ್ಷೇತ್ರಕ್ಕೆ ಬಂದಿದ್ದು ನಿಜವಾದರೂ, ರಮೇಶ್ ಅವರ ಪ್ರಭಾವದ ಮೇಲೆ ಅದು ಯಾವುದೇ ಪ್ರಭಾವ ಬೀರಿಲ್ಲ ಎಂದಿದ್ದರು.ರಮೇಶ್ ಜಾರಕಿಹೊಳಿ ಅವರನ್ನು ಕಾಂಪ್ರಮೈಸ್ ಮಾಡಿಸಲು ಈ ರೀತಿ ಮಾಡಲಾಗುತ್ತಿದೆ. ವಿಷಕನ್ಯೆ ಬಗ್ಗೆ ಮುಂದಿನ ದಿನಗಳಲ್ಲಿ ಎಲ್ಲರಿಗೂ ತಿಳಿಯಲಿದೆ. ಸಿಡಿಗಳನ್ನು ಇಟ್ಟುಕೊಂಡು ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿದೆ ಎಂದು ಲಖನ್ ಜಾರಕಿಹೊಳಿ ದೂರಿದ್ದರು.