ಸ್ನೇಹಿತೆ ಜೊತೆ ಬಂದಿದ್ದ ಯುವತಿ, ರುದ್ರಪಾದೆ ಮೇಲಿನಿಂದ ಜಾರಿ ಸಮುದ್ರಕ್ಕೆ ಬಿದ್ದು ಸಾವು!
ಉಳ್ಳಾಲ: ಸ್ನೇಹಿತೆಯೊಂದಿಗೆ ಸೋಮೇಶ್ವರ ಸಮುದ್ರ ತೀರಕ್ಕೆ ಬಂದಿದ್ದ ಯುವತಿಯೊಬ್ಬಳು ರುದ್ರಪಾದೆ ಮೇಲಿನಿಂದ ಜಾರಿ ಬಿದ್ದು ಸಮುದ್ರ ಪಾಲಾದ ಘಟನೆ ಬುಧವಾರ ಸಂಭವಿಸಿದ್ದು, ಸ್ಥಳೀಯ ಜೀವರಕ್ಷಕ ಈಜುಗಾರರು ಯುವತಿಯನ್ನು ರಕ್ಷಿಸಲು ಯತ್ನಿಸಿ ದಡಕ್ಕೆ ಎಳೆದು ತಂದು ಪ್ರಥಮ ಚಿಕಿತ್ಸೆ ನೀಡಿದರೂ, ಚಿಕಿತ್ಸೆ ಫಕಾರಿಯಾಗದೆ ಮೃತಪಟ್ಟಿದ್ದಾರೆ.
ಮಂಗಳೂರಿನಲ್ಲಿ ಬಿಕಾಂ ಕಲಿಯುತ್ತಿರುವ ಮೂಲತಃ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕು ತೆಗ್ಗಿ ಗ್ರಾಮದ ನಿವಾಸಿ ಕಾವೇರಿ (20) ಮೃತಪಟ್ಟ ಯುವತಿ. ನಿನ್ನೆ ಹುಟ್ಟುಹಬ್ಬ ಆಚರಿಸಿದ್ದ ಕಾವೇರಿ ತನ್ನ ಬಾಲ್ಯದ ಸ್ನೇಹಿತೆ ಕಾವೇರಿಯೊಂದಿಗೆ ಸೋಮೇಶ್ವರ ದೇವಸ್ಥಾನಕ್ಕೆ ತೆರಳಿ ಬಳಿಕ ಸಮುದ್ರ ತೀರಕ್ಕೆ ತೆರಳಿ ರುದ್ರಪಾದೆ ಏರಿದ್ದರು. ಸಮುದ್ರದ ಅಲೆಗಳನ್ನು ರುದ್ರಪಾದೆಯ ಮೇಲಿನಿಂದ ವೀಕ್ಷಿಸಲು ಇಳಿಜಾರಿನಲ್ಲಿ ತೆರಳಿದ್ದಾಗ ಈ ಘಟನೆ ಸಂಭವಿಸಿದೆ.
ಕೂಡಲೇ ಸ್ಥಳದಲ್ಲಿದ್ದ ಕರಾವಳಿ ಕಾವಲು ಪಡೆಯ ಈಜು ರಕ್ಷಕ ಸಿಬಂದಿ ಮೋಹನ್‌ಚಂದ್ರ, ಸ್ಥಳೀಯ ಮೀನುಗಾರರಾದ ಯೋಗೀಶ್, ಪ್ರವೀಣ್, ಸೋಮೇಶ್ವರ ದೇವಸ್ಥಾನದ ಸಿಬಂದಿ ವಿನಾಯಕ್ ಮತ್ತು ಸ್ಥಳೀಯರು ಸೇರಿ ಸಮುದ್ರದಲ್ಲಿ ಈಜಾಡಿ ಕಾವೇರಿಯನ್ನು ದಡಕ್ಕೆ ಎಳೆದು ತಂದರೂ ಅಷ್ಟರಲ್ಲಿ ಕಾವೇರಿಯ ಪ್ರಾಣ ಪಕ್ಷಿ ಹಾರಿ ಹೋಗಿತ್ತು.
ಕಾವೇರಿ ಪೋಷಕರು ಕೂಲಿ ಕೆಲಸಗಾರರಾಗಿದ್ದು, ಮಂಗಳೂರಿನ ಉರ್ವಸ್ಟೋರಿನಲ್ಲಿ ಕಳೆದ ಅನೇಕ ವರ್ಷಗಳಿಂದ ನೆಲೆಸಿದ್ದರು. ತಮ್ಮ ಏಕೈಕ ಮಗಳನ್ನು ಕಷ್ಟ ಪಟ್ಟು ಮಂಗಳೂರು ನಗರದ ಸ್ವಸ್ಥಿಕ್ ಕಾಲೇಜಿನಲ್ಲಿ ಬಿಕಾಂ ಓದಿಸುತ್ತಿದ್ದರು. ಪ್ರತಿಭಾನ್ವಿತೆಯಾಗಿದ್ದ ಕಾವೇರಿ ಬಿಕಾಂ ವ್ಯಾಸಂಗದ ಜತೆಗೆ ಸಿಎ ಕೂಡ ಅಧ್ಯಯನ ನಡೆಸುತ್ತಿದ್ದಳು. ಈಕೆಯ ಗೆಳತಿ ಕಾವೇರಿಯೂ ಮಂಗಳೂರು ನಗರದ ಕಾಲೇಜೊಂದರಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.