ಐಪಿಎಲ್ನಲ್ಲಿಂದು ಚೆನ್ನೈ-ಡೆಲ್ಲಿ ಮುಖಾಮುಖಿ

16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ದಿನದಿಂದ ದಿನಕ್ಕೆ ರೋಚಕತೆ ಪಡೆಯುತ್ತಿದೆ. ಮಹತ್ವದ ಘಟ್ಟಕ್ಕೆ ತಲುಪಿರುವ ಐಪಿಎಲ್ನಲ್ಲಿ (IPL 2023) ಒಂದು ತಂಡದ ಸೋಲು-ಗೆಲುವು ಮತ್ತೊಂದು ತಂಡದ ಅಳಿವು-ಉಳಿವಿನ ನಿರ್ಧಾರ ಮಾಡುತ್ತಿದೆ. ಇದರ ನಡುವೆ ಇಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಎಂಎಸ್ ಧೋನಿ (MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್ ತಂಡ ಡೇವಿಡ್ ವಾರ್ನರ್ ಅವರ ಡೆಲ್ಲಿ ಕ್ಯಾಪಿಟಲ್ಸ್ (CSK vs DC) ಅನ್ನು ಎದುರಿಸಲಿದೆ. ಸಿಎಸ್ಕೆ ಆಡಿದ 11 ಪಂದ್ಯಗಳಲ್ಲಿ 6 ಗೆಲುವು, 4 ಸೋಲು ಕಂಡು 13 ಅಂಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಇತ್ತ ಡೆಲ್ಲಿ 10 ಪಂದ್ಯಗಳಲ್ಲಿ 4 ಜಯ, 6 ಪಂದ್ಯಗಳಲ್ಲಿ ಸೋತು 8 ಅಂಕ ಪಡೆದು ಕೊನೆಯ ಸ್ಥಾನದಲ್ಲಿದೆ. ಚೆನ್ನೈ ಇಂದಿನ ಪಂದ್ಯ ಗೆದ್ದರೆ ಬಹುತೇಕ ಪ್ಲೇ ಆಫ್ ಘಟ್ಟಕ್ಕೆ ಕಾಲಿಟ್ಟಂತೆ.

ಚೆನ್ನೈ:
ಸಿಎಸ್ಕೆ ತಂಡ ಬ್ಯಾಟಿಂಗ್-ಬೌಲಿಂಗ್ ಎರಡೂ ವಿಭಾಗಗಳಲ್ಲಿ ಬಲಿಷ್ಠವಾಗಿದೆ. ರುತುರಾಯ್ ಗಾಯಕ್ವಾಡ್, ಡೆವೋನ್ ಕಾನ್ವೆ ಭರ್ಜರಿ ಫಾರ್ಮ್ನಲ್ಲಿದ್ದು ಅತ್ಯುತ್ತಮ ಆರಂಭ ಒದಗಿಸುತ್ತಿದ್ದಾರೆ. ಅಜಿಂಕ್ಯಾ ರಹಾನೆ ಕೂಡ ಸ್ಫೋಟಕ ಬ್ಯಾಟಿಂಗ್ ನಡೆಸುತ್ತಿದ್ದಾರೆ. ಶಿವಂ ದುಬೆ ಪ್ರತಿ ಪಂದ್ಯದಲ್ಲಿ ಅಬ್ಬರಿಸುವ ಮೂಲಕ ಗಮನ ಸೆಳೆದಿದ್ದಾರೆ. ಅಂಬಟಿ ರಾಯುಡು ಹಾಗೂ ಮೊಯೀನ್ ಅಲಿ ಕಡೆಯಿಂದ ನಿರೀಕ್ಷೆಗೆ ತಕ್ಕ ಆಟ ಬರುತ್ತಿಲ್ಲ. ಧೋನಿ ಹಾಗೂ ಜಡೇಜಾ ಫಿನಿಶಿಂಗ್ ಜವಾಬ್ದಾರಿ ಹೊತ್ತಿದ್ದಾರೆ. ಆರಂಭದಲ್ಲಿ ಮಂಕಾಗಿದ್ದ ಸಿಎಸ್ಕೆ ಬೌಲಿಂಗ್ ಈಗ ಬಲಿಷ್ಠವಾಗಿದೆ. ಮತೀಶಾ ಪತಿರಾನ ವಿಕೆಟ್ ಟೇಕಿಂಗ್ ಬೌಲರ್ ಆಗಿ ಕಾಣಿಸಿಕೊಂಡಿದ್ದಾರೆ. ತುಶಾರ್ ದೇಶ್ಪಾಂಡೆ, ಮಹೀಶಾ ತೀಕ್ಷಣ, ದೀಪಕ್ ಚಹರ್, ಜಡೇಜಾ, ಅಲಿ ಸಾಥ್ ನೀಡುತ್ತಿದ್ದಾರೆ.

ಡೆಲ್ಲಿ:
ಡೆಲ್ಲಿ ತನ್ನ ಹಿಂದಿನ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಗೆದ್ದಿತ್ತು. ಮುಂದಿನ ಸುತ್ತಿಗೆ ತೇರ್ಗಡೆ ಆಗಬೇಕಾದರೆ ಉಳಿದಿರುವ ಎಲ್ಲ ಪಂದ್ಯ ಗೆಲ್ಲಲೇ ಬೇಕಾದ ಒತ್ತಡಕ್ಕೆ ಸಿಲುಕಿದೆ. ಆರಂಭದಲ್ಲಿ ಡೆಲ್ಲಿ ತಂಡದ ಪರ ನಾಯಕ ಡೇವಿಡ್ ವಾರ್ನರ್ ಬಿಟ್ಟರೆ ಮತ್ಯಾರು ರನ್ ಕಲೆಹಾಕುತ್ತಿರಲಿಲ್ಲ. ಆದರೀಗ ವಾರ್ನರ್ ಕೂಡ ಬೇಗನೆ ಔಟಾಗುತ್ತಿದ್ದಾರೆ. ಪೃಥ್ವಿ ಶಾ ಬದಲಿಗೆ ಜಾಗ ಪಡೆದುಕೊಂಡ ಪಿಲಿಪ್ ಸಾಲ್ಟ್ ಕಳೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದರು. ಮಿಚೆಲ್ ಮಾರ್ಶ್ ಹಾಗೂ ರಿಲೀ ರುಸ್ಸೋ ನೆರವಾಗುತ್ತಿದ್ದಾರೆ. ಅಕ್ಷರ್ ಪಟೇಲ್ ಆಲ್ರೌಂಡ್ ಪ್ರದರ್ಶನ ನೀಡುತ್ತಿದ್ದಾರೆ. ಬೌಲಿಂಗ್ನಲ್ಲಿ ಡೆಲ್ಲಿ ಮಾರಕವಾಗಿಲ್ಲ. ಇಶಾಂತ್ ಶರ್ಮಾ, ಮುಖೇಶ್ ಕುಮಾರ್, ಆ್ಯನ್ರಿಚ್ ನಾರ್ಟ್ಜೆ, ಕುಲ್ದೀಪ್ ಯಾದವ್ ಕಡೆಯಿಂದ ಇನ್ನಷ್ಟು ಕೊಡುಗೆ ಬರಬೇಕು.
ಚೆನ್ನೈ ಸೂಪರ್ ಕಿಂಗ್ಸ್ ತಂಡ: ರುತುರಾಜ್ ಗಾಯಕ್ವಾಡ್, ಡೆವೊನ್ ಕಾನ್ವೇ, ಅಜಿಂಕ್ಯಾ ರಹಾನೆ, ಮೊಯೀನ್ ಅಲಿ, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ನಾಯಕ), ದೀಪಕ್ ಚಾಹರ್, ಮತೀಶಾ ಪತಿರಾನ, ತುಶಾರ್ ದೇಶ್ಪಾಂಡೆ, ಮಹೀಶಾ ತೀಕ್ಷಣ, ಅಂಬಟಿ ರಾಯುಡು, ಮಿಚೆಲ್ ಸ್ಯಾಂಟನರ್, ಸಂತುನೆರ್ ಸೇನಾಪತಿ, ಶೇಕ್ ರಶೀದ್, ಆಕಾಶ್ ಸಿಂಗ್, ಬೆನ್ ಸ್ಟೋಕ್ಸ್, ಡ್ವೈನ್ ಪ್ರಿಟೋರಿಯಸ್, ಸಿಸಂದಾ ಮಗಲಾ, ಅಜಯ್ ಜಾದವ್ ಮಂಡಲ್, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ಆರ್ ಎಸ್ ಹಂಗರ್ಗೇಕರ್, ಭಗತ್ ವರ್ಮಾ, ನಿಶಾಂತ್ ಸಿಂಧು.
ಡೆಲ್ಲಿ ಕ್ಯಾಪಿಟಲ್ಸ್: ಡೇವಿಡ್ ವಾರ್ನರ್ (ನಾಯಕ), ಫಿಲಿಪ್ ಸಾಲ್ಟ್, ಮಿಚೆಲ್ ಮಾರ್ಶ್, ರಿಲೀ ರುಸ್ಸೋ, ಮನೀಶ್ ಪಾಂಡೆ, ಅಮನ್ ಹಕೀಮ್ ಖಾನ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮುಖೇಶ್ ಕುಮಾರ್, ಇಶಾಂತ್ ಶರ್ಮಾ, ಖಲೀಲ್ ಅಹ್ಮದ್, ಚೇತನ್ ಸಕರಿಯಾ, ಲಲಿತ್ ಯಾದವ್, ರಿಪಾಲ್ ಪಟೇಲ್, ಪ್ರವೀಣ್ ದುಬೆ, ಅಭಿಷೇಕ್ ಪೊರೆಲ್, ಸರ್ಫರಾಜ್ ಖಾನ್, ಲುಂಗಿ ಎನ್ಗಿಡಿ, ಮುಸ್ತಾಫಿಜುರ್ ರೆಹಮಾನ್, ಅನ್ರಿಚ್ ನಾರ್ಟ್ಜೆ, ರೋವ್ಮನ್ ಪೊವೆಲ್, ಪ್ರಿಯಮ್ ಗಾರ್ಗ್, ಪೃಥ್ವಿ ಶಾ, ಯಶ್ ಧುಲ್, ವಿಕ್ಕಿ ಓಸ್ತ್ವಾಲ್.