ಅಕ್ರಮ ಮರಳುಗಾರಿಕೆ ಸ್ಥಳಕ್ಕೆ ಪೊಲೀಸರ ದಾಳಿ ; ಸೊತ್ತುಗಳು ವಶಕ್ಕೆ!
ಕಡಬ: ತಾಲೂಕಿನ ಕೊಯಿಲ ಗ್ರಾಮದ ಪರಂಗಾಜೆ ಎಂಬಲ್ಲಿ ಕುಮಾರದಾರ ನದಿಯಲ್ಲಿ ಡ್ರೆಜ್ಜಿಂಗ್ ಮೂಲಕ ಮರಳುಗಾರಿಕೆಯನ್ನು ಅಕ್ರಮವಾಗಿ ಮಾಡುತ್ತಿದ್ದ ಸ್ಥಳಕ್ಕೆ ಕಡಬ ಪೊಲೀಸರು ದಾಳಿ ಮಾಡಿ ಸೊತ್ತುಗಳನ್ನು ವಶಕ್ಕೆ ಪಡೆದಿರುವ ಘಟನೆ ಮೇ 5 ರಂದು ಸಂಭವಿಸಿದೆ.
ಮರಳನ್ನು ಅಕ್ರಮವಾಗಿ ತೆಗೆಯುತ್ತಿರುವ ಬಗ್ಗೆ ಸಿಕ್ಕಿದ ಖಚಿತ ಮಾಹಿತಿ ಮೇರೆಗೆ ಕಡಬ ಎಸ್ಐ ಹರೀಶ್ ಸಿಬಂದಿಗಳೊಂದಿಗೆ ಸ್ಥಳಕ್ಕೆ ದಾಳಿ ನಡೆಸಿದ್ದಾರೆ. ಈ ವೇಳೆ ಡ್ರೆಜ್ಜಿಂಗ್ ಬಳಸಿ ಮರಳು ತೆಗೆಯುತ್ತಿರುವುದು ಕಂಡು ಬಂದಿದೆ.
ಸ್ಥಳದಲ್ಲಿದ್ದ ಒಂದು 4 ಎಚ್ಪಿ ಮೋಟಾರ್ ಅಳವಡಿಸಿರುವ ಡ್ರೆಜ್ಜಿಂಗ್ ಸಹಿತ ಬೋಟ್, 6 ಇಂಚು ಸುತ್ತಳತೆಯ 20 ಅಡಿ ಉದ್ದದ ಫೈಬರ್ ಪೈಪು, ಆರು 6 ಇಂಚು ಸುತ್ತಳತೆಯ 20 ಅಡಿ ಉದ್ದದ ಕಬ್ಬಿಣದ ಪೈಪುಗಳು, 14 ಕಬ್ಬಿಣದ ಪೈಪುಗಳಿಗೆ ಅಳವಡಿಸಿದ ಕಬ್ಬಿಣದ ಡ್ರಮ್ ಗಳು, ಕಬ್ಬಿಣದ ಜಾಲರಿ, 2 ಮರಳು ತೆಗೆಯಲು ಉಪಯೋಗಿಸುವ ಕಬ್ಬಿಣದ ಕೈ ಗುದ್ದಲಿಗಳು, ಪ್ಲಾಸ್ಟಿಕ್ ಬುಟ್ಟಿ ಇವುಗಳನ್ನು ವಶಕ್ಕೆ ಪಡೆಯಲಾಗಿದೆ. ಮುಂದಿನ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸರು ಕೋರಿ ಗಣಿ ಇಲಾಖೆಗೆ ವರದಿ ಸಲ್ಲಿಸಿದ್ದಾರೆ.