ಬಾಂಗ್ಲಾದಿಂದ ಭಾರತಕ್ಕೆ ಅಕ್ರಮ ಚಿನ್ನ ಸಾಗಾಟ – ಮಹಿಳೆ ಅರೆಸ್ಟ್
ಕೋಲ್ಕತ್ತಾ: ಕೇವಲ 2 ಸಾವಿರ ರೂ. ಹಣದ ಆಸೆಗಾಗಿ ಸುಮಾರು 2 ಕೆಜಿಗೂ ಅಧಿಕ ತೂಕ ಹೊಂದಿದ್ದ ಚಿನ್ನದ ಗಟ್ಟಿಗಳನ್ನು ಅಕ್ರಮವಾಗಿ ಬಾಂಗ್ಲಾದೇಶದಿಂದ (Bangladesh) ಭಾರತಕ್ಕೆ (India) ಸಾಗಿಸಲು ಯತ್ನಿಸಿದ ಮಹಿಳೆಯೊಬ್ಬರನ್ನು ಪಶ್ಚಿಮ ಬಂಗಾಳದ (West Bengal) ಉತ್ತರ 24 ಪರಗಣ ಜಿಲ್ಲೆಯಲ್ಲಿ ಗಡಿ ಭದ್ರತಾ ಪಡೆ (BSF) ಗುರುವಾರ ಬಂಧಿಸಿದೆ.
ಮಾಣಿಕಾ ಧರ್ (34) ಬಂಧನಕ್ಕೊಳಗಾದ ಮಹಿಳೆ. ಈಕೆ ಬಾಂಗ್ಲಾದೇಶದ ಚಿತ್ತಗಾಂಗ್ ಜಿಲ್ಲೆಗೆ ಸೇರಿದವಳಾಗಿದ್ದು, ಅಕ್ರಮವಾಗಿ ಭಾರತಕ್ಕೆ ಚಿನ್ನದ ಗಟ್ಟಿ ಸಾಗಾಟ ಮಾಡುತ್ತಿದ್ದ ವೇಳೆ ಬಿಎಸ್‌ಎಫ್ ಕೈಗೆ ಸಿಕ್ಕಿಬಿದ್ದಿದ್ದಾಳೆ. ಆಕೆಯಿಂದ ವಶಪಡಿಸಿಕೊಂಡ ಚಿನ್ನ ಸುಮಾರು 2 ಕೆಜಿ ತೂಕವಿದ್ದು, ಅಂದಾಜು 1.29 ಕೋಟಿ ರೂ. ಮೌಲ್ಯದ್ದಾಗಿದೆ.
ಮಹಿಳೆಯೊಬ್ಬರು ಚಿನ್ನದೊಂದಿಗೆ ಗಡಿ ದಾಟಲು ಹೊರಟಿರುವ ಬಗ್ಗೆ ಭಾರತೀಯ ಚೆಕ್‌ಪೋಸ್ಟ್‌ನಲ್ಲಿ ನಿಯೋಜಿಸಲಾಗಿದ್ದ ಮಹಿಳಾ ಸಿಬ್ಬಂದಿಯೊಬ್ಬರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಸಿಬ್ಬಂದಿಗಳು ತಪಾಸಣೆ ನಡೆಸಲು ಮುಂದಾಗಿದ್ದಾರೆ. ಈ ವೇಳೆ ಮಣಿಕಾ ಧರ್ ತನ್ನ ಸೊಂಟದಲ್ಲಿ 27 ವಿವಿಧ ರೀತಿಯ ಚಿನ್ನದ ಗಟ್ಟಿಗಳನ್ನು ಬಟ್ಟೆಯಲ್ಲಿ ಸುತ್ತಿಕೊಂಡು ಕಳ್ಳಸಾಗಾಣಿಕೆ (Smuggling) ಮಾಡುತ್ತಿರುವುದು ಪತ್ತೆಯಾಗಿದೆ.
ಮಹಿಳೆಯನ್ನು ಬಂಧಿಸಿ ವಿಚಾರಣೆ ನಡೆಸಿದ ವೇಳೆ, ಪಶ್ಚಿಮ ಬಂಗಾಳದ ಬರಾಸತ್‌ನಲ್ಲಿರುವ ಅಪರಿಚಿತ ವ್ಯಕ್ತಿಗೆ ಚಿನ್ನದ ಗಟ್ಟಿಗಳನ್ನು ತಲುಪಿಸಲು ಸೂಚಿಸಲಾಗಿದೆ. ಈ ರೀತಿಯಾದ ಕಳ್ಳಸಾಗಾಣಿಕೆ ಇದೇ ಮೊದಲ ಬಾರಿಯಾಗಿದ್ದು, ಇದನ್ನು ತಲುಪಿಸಿದರೆ ತನಗೆ 2 ಸಾವಿರ ರೂ. ದೊರೆಯುತ್ತದೆ ಎಂದು ಒಪ್ಪಿಕೊಂಡಿದ್ದಾಳೆ.
ಆರೋಪಿ ಮಹಿಳೆಯನ್ನು ಹಾಗೂ ವಶಪಡಿಸಿಕೊಂಡ ಚಿನ್ನದ ಗಟ್ಟಿಗಳನ್ನು ಮುಂದಿನ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಪೆಟ್ರಾಪೋಲ್‌ಗೆ ಒಪ್ಪಿಸಲಾಗಿದೆ. ಅಲ್ಲದೇ ಬಿಎಸ್‌ಎಫ್ ಯೋಧರ ಈ ಕಾರ್ಯವನ್ನು ದಕ್ಷಿಣ ಬಂಗಾಳ ಗಡಿ ಭಾಗದ ವಕ್ತಾರರು ಶ್ಲಾಘಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.