ಮದುವೆಯಾದ ಒಂದೇ ತಿಂಗಳಿಗೆ ವರದಕ್ಷಿಣೆ ಕಿರುಕುಳ ನೀಡಿದ ಪಾಪಿ ಗಂಡ; ನವವಿವಾಹಿತೆಯನ್ನ ಚಿತ್ರಹಿಂಸೆ ಕೊಟ್ಟು ಕೊಂದ್ರಾ ಪಾಪಿಗಳು?
ಗದಗ: ರಂಜಾನ್ ಹಬ್ಬದ ಸಡಗರದಲ್ಲಿದ್ದ ಕುಟುಂಬಸ್ಥರಿಗೆ ಬರಸಿಡಿಲು. ಮುದ್ದಿನ ಮಗಳ ಧಾರುಣ ಸಾವು, ಆಸ್ಪತ್ರೆ ಬಳಿ ಹೆತ್ತವರ ಕಣ್ಣೀರು. ಅಳಿಯ ಕೈಗೆ ಸಿಕ್ಕರೇ ಕೊಂದು ಬಿಡುವಷ್ಟು ಆಕ್ರೋಶ, ಸಿಟ್ಟು. ಹೌದು ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ಹೊರವಲಯದ ಜಿಮ್ಸ್ ಆಸ್ಪತ್ರೆ ಬಳಿ. ಅಂದಹಾಗೆ ಈ ಫೋಟೋದಲ್ಲಿನ ಸುಂದರ ಮಹಿಳೆ ಹೆಸರು ಶಹನಾಜ್, ನರ್ಸಿಂಗ್ ಮುಗಿಸಿ ಮದುವೆಯಾಗಿದ್ದಳು. ಹೆತ್ತವರು ಹೇಳಿದ ಯುವಕನನ್ನ ವರಿಸಿ, ಅದ್ದೂರಿಯಾಗಿ ಮದುವೆಯಾಗಿ ನೂರಾರು ಕನಸು ಕಂಡಿದ್ದಳು. ಕೇವಲ ಒಂದುವರೆ ತಿಂಗಳ ಹಿಂದೆ ಮದುವೆಯಾದ ಈ ಮಹಿಳೆ ಇದೀಗ ಹೆಣವಾಗಿದ್ದಾಳೆ. ಗಂಡನ ಮನೆಗೆ ಹೋದವಳು ರಂಜಾನ್ ಹಬ್ಬಕ್ಕೆ ಬರುತ್ತಾಳೆ ಎಂದು ಹೆತ್ತವರು ಖುಷಿಯಿಂದ ಇದ್ದರು. ಆದ್ರೆ, ಹೆತ್ತವರ ಕಿವಿಗೆ ಬಂದಿದ್ದು ಅವಳ ಸಾವಿನ ಸುದ್ದಿ. ಮಗಳ ಸಾವಿನ ಸುದ್ದಿ ಕೇಳಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.
ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ, 24 ವರ್ಷದ ಶಹನಾಜ್ ಬೇಗಂಳನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಶಹಬಾಜ್ ಮುಳಗುಂದ ಜೊತೆಗೆ ಒಂದುವರೆ ತಿಂಗಳ ಹಿಂದೆ ಗಜೇಂದ್ರಗಡ ಪಟ್ಟಣದಲ್ಲಿ ವರದಕ್ಷಿಣೆ ನೀಡಿ, ಅದ್ದೂರಿಯಾಗಿ ಮದುವೆ ಮಾಡಿದ್ರು. ಮದುವೆ ಸಮಯದಲ್ಲಿ ಚಿನ್ನ, ಬೆಳ್ಳಿ, ನಗದು ನೀಡಿ ಸ್ಥಿತಿವಂತ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ರು. ಆದ್ರೆ, ದನ ದಾಹಿ, ಶಹಬಾಜ್ ಮುಳಗುಂದ ಮದುವೆಯಾದ ದಿನದಿಂದಲೇ ಇನ್ನೂ ಹೆಚ್ಚಿನ ಹಣ ಬೇಕೆಂದು, ವರದಕ್ಷಿಣೆ ಕಿರುಕುಳ ನೀಡಲು ಆರಂಭ ಮಾಡಿದ್ದ. ಹೊಸದಾಗಿ ಮದುವೆಯಾದ ನವವಿವಾಹಿತೆಗೆ ಅಕ್ಷರಶಃ ಕಿರುಕುಳ ನೀಡಿದ್ರು, ಶಹನಾಜ್ ಬೇಗಂ ಮುಖಕ್ಕೆ ಬಲವಾಗಿ ಹೊಡೆದು, ವಿಷ ಹಾಕಿ ಕೊಲೆ ಮಾಡಿ, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹೆಣವನ್ನ ಇಟ್ಟು ಗಂಡ ಸೇರಿದಂತೆ ಅವರ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.
ನಿರಂತರ ಕಿರುಕುಳ ನೀಡುತ್ತಿದ್ದ ಪತಿ ಶಹಬಾಜ್ ಮುಳಗುಂದ
ನಿರಂತರ ಕಿರುಕುಳ ನೀಡುತ್ತಿದ್ದ ಧನದಾಹಿ ಶಹಬಾಜ್ ಮುಳಗುಂದನನ್ನು ರಂಜಾನ್ ಹಬ್ಬಕ್ಕೆ ಕರೆತಂದು ಸಮಾಧಾನ ಮಾಡಬೇಕು ಎಂದು ಪ್ಲಾನ್ ಮಾಡಿದ್ರು. ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ, ಬಂಗಾರವನ್ನು ತೆಗೆದುಕೊಂಡು ಬಂದು, ಮನೆಯಲ್ಲಿ ಇಟ್ಟುಕೊಂಡಿದ್ದರು. ಇಂದು(ಏ.21) ಅವರನ್ನು ಕರೆದುಕೊಂಡು ಬರಬೇಕೆಂದು ಹೋಗಲು ರೆಡಿಯಾಗುತ್ತಿದ್ದರು. ಅಷ್ಟರಲ್ಲಿ ಗಂಡನ ಮನೆಯವರಿಂದ ಫೋನ್ ಮಾಡಿ, ನಿಮ್ಮ ಮಗಳು ಜಿಮ್ಸ್ ಆಸ್ಪತ್ರೆಯಲ್ಲಿದ್ದಾಳೆ ಎಂದು ಹೇಳಿ ಎಸ್ಕೇಪ್ ಆಗಿದ್ದಾರೆ.
ಆಸ್ಪತ್ರೆಗೆ ಬಂದು ನೋಡಿದ್ರೆ, ಶಹನಾಜ್ ಬೇಗಂಳ ಮುಖಕ್ಕೆ ಬಲವಾದ ಗಾಯವಾಗಿದ್ದು, ಬಾಯಿಯಲ್ಲಿ ಬುರುಗ ಬಂದಿದೆ. ಗಂಡ ಹಾಗೂ ಅವರ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ, ಬಲವಾಗಿ ಹೊಡೆದು, ಬಡೆದು, ನಂತರ ವಿಷಹಾಕಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಜಿಮ್ಸ್ ಆಸ್ಪತ್ರೆಯ ಮುಂದೆ ಹೆತ್ತವರು ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ. ಅಣ್ಣಿಗೇರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಕುಟುಂಬಸ್ಥರ ಹೇಳಿಕೆಯನ್ನು ಪರಿಗಣಿಸಿ, ವರದಕ್ಷಿಣೆ ಕಿರುಕುಳ ದೂರು ದಾಖಲು ಮಾಡಿಕೊಂಡಿದ್ದಾರೆ.
ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದುವರೆ ತಿಂಗಳಲ್ಲಿ ನವವಿವಾಹಿತೆ ದಾರುಣವಾಗಿ ಅಂತ್ಯವಾಗಿದ್ದಾಳೆ. ಹೆತ್ತವರು ವರದಕ್ಷಿಣೆ ನೀಡಿದ್ರು, ಇನ್ನೂ ಹೆಚ್ವಿನ ವರದಕ್ಷಿಣೆ ಆಸೆಗಾಗಿ ಪಾಪಿ ಗಂಡನ ಕೃತ್ಯಕ್ಕೆ ಬಾಳಿ ಬದುಕಬೇಕಾದ ನವವಿವಾಹಿತೆ ಸಾವಿನ ಮನೆ ಸೇರಿದ್ದಾಳೆ. ರಂಜಾನ್ ಹಬ್ಬಕ್ಕೆ ಬರುತ್ತಾಳೆ ಎಂದು ಕಾಯುತ್ತಿದ್ದ ಹೆತ್ತವರಿಗೆ ಬರಸಿಡಲು ಬಡಿದಂತಾಗಿದೆ. ಕಿರಾತಕ ಗಂಡನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರ ಆಗ್ರಹಿಸಿದ್ದಾರೆ.