ಐಪಿಎಲ್ನಲ್ಲಿಂದು ಡಬಲ್ ಧಮಾಕ: ಲಖನೌ-ಗುಜರಾತ್ ನಡುವೆ ಹೈವೋಲ್ಟೇಜ್ ಕದನ
16ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿಂದು (IPL 2023) ಎರಡು ಮಹತ್ವದ ಪಂದ್ಯಗಳು ನಡೆಯಲಿದೆ. ಮಧ್ಯಾಹ್ನ 3:30ಕ್ಕೆ ಶುರುವಾಗಲಿರುವ ಮೊದಲ ಮ್ಯಾಚ್ನಲ್ಲಿ ಕೆಎಲ್ ರಾಹುಲ್ ನಾಯಕತ್ವದ ಲಖನೌ ಸೂಪರ್ ಜೇಂಟ್ಸ್ ತಂಡ ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (LSG vs GT) ಅನ್ನು ಎದುರಿಸಲಿದೆ. ಈ ಪಂದ್ಯ ಲಖನೌದ ಏಕಾನ ಸ್ಟೇಡಿಯಂನಲ್ಲಿ ನಡೆಯಲಿದೆ. ಸಂಜೆ 7:30 ಕ್ಕೆ ಆಯೋಜಿಸಲಾಗಿರುವ ಎರಡನೇ ಪಂದ್ಯದಲ್ಲಿ ರೋಹಿತ್ ಶರ್ಮಾ ಅವರ ಮುಂಬೈ ಇಂಡಿಯನ್ಸ್ ಹಾಗೂ ಶಿಖರ್ ಧವನ್ ನಾಯಕತ್ವದ ಪಂಜಾಬ್ ಕಿಂಗ್ಸ್ (MI vs PBKS) ಮುಖಾಮುಖಿ ಆಗಲಿದೆ. ಈ ಪಂದ್ಯ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಜರುಗಲಿದೆ.
ಲಖನೌ-ಗುಜರಾತ್:
ಲಖನೌ ತಂಡ ಆಡಿದ ಆರು ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿ ಕೇವಲ ಎರಡು ಪಂದ್ಯಗಳಲ್ಲಿ ಮಾತ್ರ ಸೋಲು ಕಂಡಿದೆ. ನಾಯಕ ಕೆಎಲ್ ರಾಹುಲ್ ಹಾಗೂ ಖೈಲ್ ಮೇಯರ್ಸ್ ತಂಡಕ್ಕೆ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ಆಯುಷ್ ಬದೋನಿ, ಮಾರ್ಕಸ್ ಸ್ಟಾಯಿನಿಸ್ ಹಾಗೂ ನಿಕೋಲಸ್ ಪೂರನ್ ಮಧ್ಯಮ ಕ್ರಮಾಂಕದ ಬಲವಾಗಿದ್ದು ತಂಡದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸುತ್ತಿದ್ದಾರೆ. ದೀಪಕ್ ಹೂಡ ಕಡೆಯಿಂದ ಉತ್ತಮ ಆಟ ಬರುತ್ತಿಲ್ಲ. ಕ್ರುನಾಲ್ ಪಾಂಡ್ಯ ಕೂಡ ಆಲ್ರೌಂಡ್ ಪ್ರದರ್ಶನ ತೋರಬೇಕಿದೆ. ಬೌಲಿಂಗ್ನಲ್ಲಿ ನವೀನ್ ಉಲ್ ಹಖ್, ಆವೇಶ್ ಖಾನ್, ರವಿ ಬಿಷ್ಟೋಯಿ ಹಾಗೂ ಅಮಿತ್ ಮಿಶ್ರಾ ಉತ್ತಮ ಫಾರ್ಮ್ನಲ್ಲಿದ್ದಾರೆ.
ಅಗ್ರಸ್ಥಾನದ ಮೇಲೆ ಕಣ್ಣಿಟ್ಟಿರುವ ಜಿಟಿ ತಂಡದ ಆಡಿರುವ ಐದು ಪಂದ್ಯಗಳ ಪೈಕಿ ಮೂರರಲ್ಲಿ ಜಯ ಸಾಧಿಸಿದೆ. ಉತ್ತಮ ರನ್ರೇಟ್ ಕೂಡ ಹೊಂದಿದೆ. ನಾಯಕ ಹಾರ್ದಿಕ್ ಪಾಂಡ್ಯ ಬ್ಯಾಟ್ನಿಂದ ರನ್ ಬರುತ್ತಿಲ್ಲ. ಆದರೂ ತಂಡದಲ್ಲಿರುವ ಇತರೆ ಬ್ಯಾಟರ್ಗಳು ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ವೃದ್ದಿಮಾನ್ ಸಾಹ ಹಾಗೂ ಶುಭ್ಮನ್ ಗಿಲ್ ಪ್ರತಿ ಪಂದ್ಯದಲ್ಲಿ ಸ್ಫೋಟಕ ಆರಂಭ ಒದಗಿಸುತ್ತಿದ್ದಾರೆ. ಸಾಯಿ ಸುದರ್ಶನ್ ಕೂಡ ನೆರವಾಗುತ್ತಿದ್ದಾರೆ. ಡೇವಿಡ್ ಮಿಲ್ಲರ್ ಹಾಗೂ ರಾಹುಲ್ ತೇವಾಟಿಯ ಫಿನಿಶರ್ಗಳಾಗಿ ಗುರುತಿಸಿಕೊಂಡಿದ್ದಾರೆ. ಶಮಿ, ಅಲ್ಜರಿ ಜೋಸೆಫ್, ಜೋಶ್ವಾ ಲಿಟಲ್, ರಶೀದ್ ಖಾನ್ ಹಾಗೂ ಮೋಹಿತ್ ಶರ್ಮಾ ಮಾರಕವಾಗಿ ಕಾಣಿಸಿಕೊಂಡಿದ್ದಾರೆ.
ಮುಂಬೈ-ಪಂಜಾಬ್:
ಮುಂಬೈ ಆರಂಭದ ಎರಡು ಪಂದ್ಯಗಳಲ್ಲಿ ಸೋತ ಬಳಿಕ ಹ್ಯಾಟ್ರಿಕ್ ಗೆಲುವು ಸಾಧಿಸಿ ಲಯಕ್ಕೆ ಮರಳಿದೆ. ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ಬಿಟ್ಟರೆ ಉಳಿದವರು ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಕ್ಯಾಮ್ರೋನ್ ಗ್ರೀನ್ ಕಡೆಯಿಂದ ಕೂಡ ಉತ್ತಮ ಆಟ ಬರುತ್ತಿದೆ. ರೋಹಿತ್-ಕಿಶನ್ ಭರ್ಜರಿ ಆರಂಭ ಒದಗಿಸುತ್ತಿದ್ದಾರೆ. ತಿಲಕ್ ವರ್ಮಾ, ಟಿಮ್ ಡೇವಿಡ್ ಪ್ರತಿ ಪಂದ್ಯದಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದಾರೆ. ಅರ್ಜುನ್ ತೆಂಡೂಲ್ಕರ್ಗೆ ಇಂದಿನ ಪಂದ್ಯದಲ್ಲೂ ಸ್ಥಾನ ಸಿಗುತ್ತಾ ಎಂಬುದು ಕುತೂಹಲ ಕೆರಳಿಸಿದೆ. ಡ್ಯೂಯೆನ್ ಜಾನ್ಸೆನ್, ರಿಲೆ ಮೆರೆಡಿತ್, ಹೃತಿಕ್ ಶೋಕೀನ್ ಮಾರಕವಾಗಬೇಕಿದೆ. ಪಿಯೂಷ್ ಚಾವ್ಲಾ ಮಾತ್ರ ಮುಂಬೈ ಬೌಲಿಂಗ್ನಲ್ಲಿ ಎದುರಾಳಿಗೆ ಕಂಠಕವಾಗಿ ಪರಿಣಮಿಸಿದ್ದಾರೆ.
ಪಂಜಾಬ್ ಆಡಿದ ಆರು ಪಂದ್ಯಗಳಲ್ಲಿ ಮೂರರಲ್ಲಿ ಜಯ ಮೂರರಲ್ಲಿ ಸೋತಿದೆ. ಪಂಜಾಬ್ ತಂಡದಲ್ಲಿ ಒಬ್ಬ ಆಟಗಾರ ವೈಫಲ್ಯ ಅನುಭವಿಸಿದರೆ ಮತ್ತೊಬ್ಬ ಪ್ಲೇಯರ್ ಪಂದ್ಯವನ್ನು ಗೆಲ್ಲಿಸಿಕೊಡುತ್ತಿದ್ದಾರೆ. ಶಿಖರ್ ಧವನ್ ಇಂಜುರಿಯಿಂದ ಕಮ್ಬ್ಯಾಕ್ ಮಾಡಿದ್ದು ಇಂದು ಕಣಕ್ಕಿಳಿಯುವ ಸಾಧ್ಯತೆ ಇದೆ. ಮ್ಯಾಥ್ಯೂ ಶಾರ್ಟ್, ಹರ್ಪ್ರೀತ್ ಸಿಂಗ್ ಸಿಖಂದರ್ ರಾಜಾ, ಶಾರುಖ್ ಖಾನ್ ಫಾರ್ಮ್ನಲ್ಲಿದ್ದಾರೆ. ಸ್ಯಾಮ್ ಕುರ್ರನ್, ರಬಾಡಾ, ಅರ್ಶ್ದೀಪ್ ಸಿಂಗ್, ರಾಹುಲ್ ಚಹರ್ ಪ್ರಮುಖ ಬೌಲರ್ಗಳಾಗಿದ್ದಾರೆ.